ನವದೆಹಲಿ: ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ (ಸರಕು-ಸಂಜಾಮು) ನಿಲ್ದಾಣದಲ್ಲಿ ಪರಮಾಣು ಸೋರಿಕೆ ಆಗಿದೆ ಎಂಬ ವರದಿ ಶುಕ್ರವಾರ ಬೆಳಗ್ಗೆ ಭೀತಿ ಸೃಷ್ಟಿಸಿತ್ತು. ಆದರೆ ಅಣುಶಕ್ತಿ ನಿಯಂತ್ರಣಾ ಸಮಿತಿ ಯಾವುದೇ ಪರಮಾಣು ವಸ್ತು ಸೋರಿಕೆಯಾಗಿರುವುದನ್ನು ಅಲ್ಲಗೆಳೆದಿದೆ.
ಮೊದಲ ವರದಿಯ ಪ್ರಕಾರ ಸೋರಿಕೆ ವಿಮಾನ ನಿಲ್ದಾಣದ ನಿರ್ಗಮನ ಪ್ರದೇಶದಲ್ಲಿ ಆಗಿತ್ತು ಎನ್ನಲಾಗಿದ್ದು ನಂತರ ಒಂದು ಕಿಮೀ ದೂರವಿರುವ ಕಾರ್ಗೋ ನಿಲ್ದಾಣದಲ್ಲಿ ಎಂದು ಬದಲಾಯಿಸಲಾಗಿತ್ತು. ಕೂಡಲೇ ಕಾರ್ಗೋ ಕೆಲಸಗಳನ್ನು ನಿಲ್ಲಿಸಿ ಸಿಬ್ಬಂದಿಯನ್ನು ಹೊರಗೆ ಕಳುಹಿಸಲಾಗಿತ್ತು. ನಂತರ ಸೋರಿಕೆಯನ್ನು ಪತ್ತೆಹಚ್ಚಲು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯ ಪಡೆಯನ್ನು(ಎನ್ ಡಿ ಆರ್ ಎಫ್) ಕರೆಸಲಾಗಿತ್ತು. "ವಿಮಾನ ನಿಲ್ದಾಣಕ್ಕೆ ಹತ್ತಿರವಿದ್ದ ದ್ವಾರಕಾದ ೧೦ ಜನರ ತಂಡ ಸ್ಥಳಕ್ಕೆ ಬಂದು ಜಾಗವನ್ನು ಎಲ್ಲರಿಂದ ಮುಕ್ತಗೊಳಿಸಿದ್ದರು" ಎಂದು ಎನ್ ಡಿ ಆರ್ ಎಫ್ ಮುಖ್ಯಸ್ಥ ಒ ಪಿ ಸಿಂಗ್ ತಿಳಿಸಿದರು. ನಂತರ ಅಣು ಶಕ್ತಿ ಇಲಾಖೆಯ ಅಣು ಖನಿಜ ವಿಭಾಗದ ಹಾಗು ಅಣುಶಕ್ತಿ ನಿಯಂತ್ರಣಾ ಕೇಂದ್ರದ ತಂಡಗಳನ್ನು ಕರೆಸಲಾಯಿತು.
ತನಿಖೆಯ ವೇಳೆಯಲ್ಲಿ, ರಣಧೀರ್ ಮತ್ತು ರಮಾಕಾಂತ್ ಎಂಬುವರು ಫೋರ್ಟಿಸ್ ಆಸ್ಪತ್ರೆಗೆ ತಲುಪಬೇಕಿದ್ದ 'ಪರಮಾಣು ವಸ್ತು ರೀತ್ಯಾ' ಎಂಬ ಚೀಟಿ ಅಂಟಿಸಿದ್ದ ಸರಕುಗಳನ್ನು ವಾಹನಕ್ಕೆ ತುಂಬುವಾಗ ದೇಹದಲ್ಲಿ ಕಿರಿಕಿರಿಯುಂಟಾಗಿದೆ. ಟರ್ಕಿ ದೇಶದಿಂದ ಆಮದಾಗಿರುವ ಈ ವಸ್ತು ಟರ್ಕಿಶ್ ವಿಮಾನಯಾನದ ಮೂಲಕ ಸುಮಾರು ಬೆಳಗ್ಗೆ ೪:೩೫ಕ್ಕೆ ಬಂದಿಳಿದಿತ್ತು.
೧೩ ಕೆಜಿ ತೂಕವುಳ್ಳ ಈ ೧೦ ಸರಕುಗಳಲ್ಲಿ ನಾಲ್ಕರಲ್ಲಿ ಸೋರಿಕೆ ಕಂಡುಬಂದಿತ್ತು. ಈ ಸರಕು ಡಬ್ಬಗಳು ಒಡೆದು ಅವುಗಳ ಮೇಲೆ ಪರಮಾಣು ವಸ್ತುಗಳಿಂದ ಕಲುಷಿತವಾದ ದ್ರವ ಬಿದ್ದಿತ್ತು ಎಂದು ಜಿಲ್ಲ ಮೆಜೆಸ್ಟ್ರೇಟ್ ಸಂಜಯ್ ಕುಮಾರ್ ತಿಳಿಸಿದ್ದಾರೆ.