ಪ್ರಧಾನ ಸುದ್ದಿ

ರೈತರ ಆತ್ಮಹತ್ಯೆ ಕಡಿಮೆ ಮಾಡಲು ಸರ್ಕಾರದಿಂದ ಸಾಮೂಹಿಕ ಮದುವೆ ಚಿಂತನೆ

Lingaraj Badiger

ಮೈಸೂರು: ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲೇ ಸುಮಾರು 50ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ರಾಜ್ಯ ಸರ್ಕಾರ ರೈತರ ಸರಣಿ ಆತ್ಮಹತ್ಯೆಯನ್ನು ಕಡಿಮೆ ಮಾಡಲು ಸಾಮೂಹಿಕ ಮದುವೆ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಿದೆ.

ರೈತರ ಆತ್ಮಹತ್ಯೆಗೆ ಮಕ್ಕಳ ಮದುವೆಗಾಗಿ ಮಾಡಿದ ಸಾಲವೂ ಒಂದು ಪ್ರಮುಖ ಕಾರಣ ಎಂಬ ಅಂಶ ಪತ್ತೆಯಾದ ನಂತರ ಮೈಸೂರು ಜಿಲ್ಲಾಡಳಿತ 'ಶುಭಾರಂಭ' ಎಂಬ ಶೀರ್ಷಿಕೆಯಡಿ ಉಚಿತ, ಸರಳ ಸಾಮೂಹಿಕ ವಿವಾಹ ಮಾಡಲು ನಿರ್ಧರಿಸಿದೆ.

ನವೆಂಬರ್ 8ರಂದು ನಂಜನಗೂಡಿನಲ್ಲಿ ಈ ಸಾಮೂಹಿಕ ವಿವಾಹ ಆಯೋಜಿಸಲಾಗಿದ್ದು, ಮದುವೆಯಾಗಲು ಇದುವರೆಗೂ 100 ಹೆಚ್ಚು ಜೋಡಿಗಳು ನೋಂದಣಿ ಮಾಡಿಸಿಕೊಂಡಿವೆ.

ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಾಮೂಹಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ಈ ಸರಳ ಸಾಮೂಹಿಕ ವಿವಾಹವನ್ನು ರಾಜ್ಯದ ಇತರೆ ಜಿಲ್ಲೆಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ. ಅಲ್ಲದೆ ಸಾಮೂಹಿಕ ವಿವಾಹವನ್ನು ಪ್ರೋತ್ಸಾಹಿಸಲು ಹಣಕಾಸಿನ ನೆರವು ಘೋಷಿಸಲಿದ್ದಾರೆ ಎನ್ನಲಾಗಿದೆ.

ರೈತರ ಆತ್ಮಹತ್ಯೆ ಹಿಂದಿನ ಕಾರಣ ತಿಳಿಯಲು ಜಿಲ್ಲಾ ಆಡಳಿತ ಹೋಬಳಿ ಮಟ್ಟದಲ್ಲಿ ಮೃತ ರೈತರ ಕುಟುಂಬದೊಂದಿಗೆ ಸಮಾಲೋಚನೆ ನಡೆಸಿದ್ದು, ಈ ವೇಳೆ ಹಲವರು ತಮ್ಮ ಮಕ್ಕಳ ಮದುವೆಗಾಗಿ ಸಾಲ ಪಡೆದಿದ್ದಾರೆ. ಬೆಳೆ ನಷ್ಟದಿಂದ ಸಾಲ ತೀರಿಸಲಾಗದೆ ಆತ್ಮಹತ್ಯೆ ಶರಣಾಗಿದ್ದಾರೆ ಎಂದು ಹೇಳಿದ್ದಾರೆ.

ರೈತರ ಆತ್ಮಹತ್ಯೆಗೆ ಕಡಿವಾಣ ಹಾಕಲು ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರು, ಈ ಸರಳ ಸಾಮೂಹಿಕ ವಿವಾಹ ಆಯೋಜಿಸುವ ನಿರ್ಧಾರ ಬಂದಿದ್ದಾರೆ. ಮಕ್ಕಳ ಮದುವೆಗಾಗಿಯೇ ರೈತರು ಹೆಚ್ಚು ಸಾಲ ಮಾಡುತ್ತಿರುವ ವಿಷಯ ತಿಳಿದ ನಂತರ ನಾವು ನಿರ್ಧಾರಕ್ಕೆ ಬಂದೆವು. ಇದುವರೆಗೆ 100 ಜೋಡಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಶಿಖಾ ತಿಳಿಸಿದ್ದಾರೆ.

ಸರಳ ಸಾಮೂಹಿಕ ಕಾರ್ಯಕ್ರಮದಲ್ಲಿ ಸಪ್ತಪದಿ ತುಳಿಯುವ ವಧು-ವರರಿಗೆ ಅಂದಾಜು 18 ಸಾವಿರ ರೂ. ಮೊತ್ತದಲ್ಲಿ ಮಾಂಗಲ್ಯ, ಬಾಸಿಂಗ, ಹಾರ ಹಾಗೂ ವಸ್ತ್ರವನ್ನು ಜಿಲ್ಲಾಡಳಿತದಿಂದ ಉಚಿತವಾಗಿ ನೀಡುವ ಜತೆಗೆ ವಿವಾಹವಾಗುವ ವಧು-ವರರಿಗೆ ಸಂಬಂಧಪಟ್ಟ ಇಲಾಖೆಯಿಂದಲೇ ಸ್ಥಳದಲ್ಲೇ ವಿವಾಹ ನೋಂದಣಿ ಮಾಡಲಾಗುವುದು ಎಂದು ಶಿಖಾ ಹೇಳಿದರು.

SCROLL FOR NEXT