ಪ್ಯಾರಿಸ್: ಕನ್ಸರ್ಟ್ ಹಾಲ್‍ನಲ್ಲಿ ಒಂದೇ ಸಮನೆ ಗುಂಡಿನ ಮಳೆಗೆರೆ ಯುತ್ತಿದ್ದ ಉಗ್ರನೊಬ್ಬ ಫ್ರಾನ್ಸ್ ಅಧ್ಯಕ್ಷ ಹೊಲಾಂಡ್ ಮೇಲೆ ಆರೋಪ ಹೊರಿಸುವ ಮೂಲಕ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದ.
ಹೀಗೆಂದು ಪ್ರತ್ಯಕ್ಷದರ್ಶಿಗಳೇ ತಿಳಿಸಿದ್ದಾರೆ. ದಾಳಿಯ ನಡುವೆಯೇ ಉಗ್ರನೊಬ್ಬ, ``ಹೊಲಾಂಡ್ ತಪ್ಪು ಮಾಡಿದ್ರು, ನಿಮ್ಮ ಅಧ್ಯಕ್ಷರದ್ದೇ ತಪ್ಪು. ಅವರು ಸಿರಿಯಾದಲ್ಲಿ ಹಸ್ತಕ್ಷೇಪ ಮಾಡಬಾರದಿತ್ತು'' ಎಂದು ಕೂಗುತ್ತಿದ್ದ ಎಂದಿದ್ದಾರೆ ರೇಡಿಯೋ ನಿರೂಪಕ ಪಿಯರ್ ಜನಾಝಕ್.
ಎಲ್ಲೆಲ್ಲಿ ನಡೆಯಿತು ದಾಳಿ?
1 ಬಟಾಕ್ಲಾನ್ ಕನ್ಸರ್ಟ್ ಹಾಲ್- ಈಗಲ್ಸ್ ಆಫ್ ಡೆತ್ ಮೆಟಲ್
ಎಂಬ ಪಾಪ್ ಗಾಯನದ ಗುಂಪೊಂದು ಇಲ್ಲಿ ಸಂಗೀತ ಕಾರ್ಯಕ್ರಮ ನೀಡುವುದರಲ್ಲಿತ್ತು. ಅದಕ್ಕೆಂದು ಇಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದರು. ಈ ವೇಳೆ, ಹಾಲ್ ನೊಳಕ್ಕೆ ನುಗ್ಗಿದ ನಾಲ್ವರು ಉಗ್ರರು, ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಾ, ಮನಬಂದಂತೆ ಗುಂಡು ಹಾರಿಸತೊಡಗಿದರು. ಈ ಪೈಕಿ ಮೂವರು ಸ್ಫೋಟಕ ಬೆಲ್ಟ್ ಧರಿಸಿದ್ದು, ಆತ್ಮಾಹುತಿಗೆಂದೇ ಬಂದಿದ್ದರು. ಇವರ ಅಟ್ಟಹಾಸಕ್ಕೆ ಥಿಯೇಟರ್ ನಲ್ಲಿದ್ದ 120 ಮಂದಿ ಬಲಿಯಾದರು. ಒತ್ತೆಸೆರೆಯಲ್ಲಿದ್ದ ಇತೆರ 100 ಮಂದಿಯನ್ನು ನಂತರ ಪೊಲೀಸರು ರಕ್ಷಿಸಿದರು.
2 ಸ್ಟೇಡ್ ಫ್ರಾನ್ಸ್ - ಪ್ಯಾರಿಸ್ ಉತ್ತರ ಭಾಗದಲ್ಲಿರುವ ಈ ಸ್ಟೇಡಿಯಂನಲ್ಲಿ ಫ್ರಾನ್ಸ್ ಮತ್ತು ಜರ್ಮನಿ ನಡುವೆ ಸ್ನೇಹ ಪಂದ್ಯ ನಡೆಯುತ್ತಿತ್ತು. ಫುಟ್ಬಾಲ್ ಪಂದ್ಯದ ವೀಕ್ಷಣೆಗೆಂದು ಸಾವಿರಾರು ಮಂದಿ ಸೇರಿದ್ದರು. ಫ್ರಾನ್ಸ್ ಅಧ್ಯಕ್ಷ ಹೊಲಾಂಡ್ ಅವರೂ ಸ್ಟೇಡಿಯಂನಲ್ಲಿದ್ದರು. ಪಂದ್ಯ ನಡೆಯುತ್ತಿದ್ದಾಗಲೇ ಹೊರಗೆ ಭಾರಿ ಸ್ಫೋಟದ ಸದ್ದು ಕೇಳಿಸಿದವು (2 ಪ್ರವೇಶ ದ್ವಾರಗಳಲ್ಲಿ ಮತ್ತು ಒಂದು ಮೆಕ್‍ಡೊನಾಲ್ಡ್ ರೆಸ್ಟೋರೆಂಟ್ ಪಕ್ಕ). ಮೊದಲು ಎಲ್ಲರೂ ಇದನ್ನು ಪಟಾಕಿ ಎಂದೇ ಭಾವಿಸಿದ್ದರು. ನಂತರ ಮತ್ತೆರಡು ಸ್ಫೋಟ ಸಂಭವಿಸಿದಾಗ ಭೀತಿ ಆವರಿಸತೊಡಗಿತು. ಸ್ಟೇಡಿಯಂನಲ್ಲಿದ್ದ ಜನ ಮೈದಾನದೊಳಕ್ಕೆ ಓಡಿದರು.
3 ರೆಸ್ಟೋರೆಂಟ್‍ಗಳು, ಕೆಫೆಗಳು-ರೂ ಬಿಚೆಟ್‍ನಲ್ಲಿದ್ದ ರೆಸ್ಟೋರೆಂಟ್‍ಗೆ ನುಗ್ಗಿದ ಶಸ್ತ್ರಧಾರಿ ಉಗ್ರರು 14 ಮಂದಿಯ ಮೇಲೆ ಗುಂಡಿನ ಮಳೆಗೆರೆದರು. ಇನ್ನು ಲಾ ಬೆಲ್ಲೆ ಈಕ್ವಿಪ್ ಎಂಬ ಬಾರ್‍ನಲ್ಲಿ 19 ಮಂದಿಯನ್ನು ಹತ್ಯೆಗೈಯ್ಯಲಾಯಿತು. ಅವೆನ್ಯೂ ಡೆ ಲಾ ರಿಪಬ್ಲಿಕ್ ಎಂಬ ಕೆಫೆಯಲ್ಲಿ ನಡೆದ ದಾಳಿಗೆ ನಾಲ್ವರು ಬಲಿಯಾದರು.
ಏನಿದು ಐಎಸ್‍ಐಎಸ್?
- ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ದಿ ಲೆವೆಂಟ್, 2004ರಲ್ಲಿ ಆಲ್‍ಖೈದಾ ಸೇರ್ಪಡೆ, 2014ರಲ್ಲಿ ಹೊರಕ್ಕೆ
- ಸಿರಿಯಾ, ಇರಾಕ್, ಲಿಬಿಯಾ, ಈಜಿಪ್ಟ್, ಆಲ್ಜೀರಿಯಾ, ಸೌದಿ ಅರೇಬಿಯಾ, ಆಫ್ಘಾನಿಸ್ತಾನಗಳಲ್ಲಿ ಸಕ್ರಿಯ
- ಅಬೂಬಕ್ಕರ್ ಬಾಗ್ದಾದಿ ಇದರ ನಾಯಕ
- ಶರಿಯಾ ಕಾನೂನು ಜಾರಿ ಸೇರಿದಂತೆ ಮುಸ್ಲಿಂ ಮೂಲಭೂತವಾದ ಪಸರಿಸುವ ಗುರಿ, ಪಾಶ್ಚಿಮಾತ್ಯ ದೇಶಗಳ ವಿರುದ್ಧ ಆಕ್ರೋಶ.