ನವದೆಹಲಿ: ಅಸಹನೆಯಿಂದ ಕೂಡಿದ ಇತ್ತೀಚಿನ ಘಟನೆಗಳು ಭಾರತದಲ್ಲಿ ನಡೆಯುತ್ತವೆ ಎಂಬ ನಿರೀಕ್ಷೆ ಇರಲಿಲ್ಲ ಎಂದು ಖ್ಯಾತ ಕವಿ-ಚಲನಚಿತ್ರ ಗೀತರಚನಕಾರ, ರಾಜ್ಯಸಭಾ ಸಂಸದ ಜಾವೇದ್ ಅಕ್ತರ್ ಹೇಳಿದ್ದಾರೆ.
"ಕನಿಷ್ಠ ಇಂತಹ ಸಮಾಜವನ್ನು ಯಾರು ನಿರೀಕ್ಷಿಸುವುದಿಲ್ಲ. ಇಂತಹ ಘಟನೆಗಳು ಭಾರತದಲ್ಲಿ ಘಟಿಸುತ್ತವೆ ಎಂಬ ನಿರೀಕ್ಷೆ ಇರಲಿಲ್ಲ. ಬೇರೆ ಸಮಾಜಗಳಲ್ಲಿ ಅಂತಹ ಘಟನೆಗಳು ನಡೆಯುವುದನ್ನು ಕೇಳುತ್ತಿದ್ದೆವು, ಆದರೆ ನಮ್ಮಲ್ಲಲ್ಲ. ಇಲ್ಲಿ ನಡೆಯುತ್ತಿರುವುದರ ಬಗ್ಗೆ ಯಾರಿಗೂ ಹೆಮ್ಮೆ ಇಲ್ಲ" ಎಂದು ಅಕ್ತರ್ ತಿಳಿಸಿದ್ದಾರೆ.
ಆ ಅಸಹನೆಯನ್ನು ವಿರೋಧಿಸಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದ ಬರಹಗಾರ್ತಿ, ದೇಶದ ಪ್ರಥಮ ಪ್ರಧಾನಿ ಜವಾಹಾರ್ ಲಾಲ್ ನೆಹರು ಅವರ ಸೋದರ ಸೊಸೆ ನಯನತಾರ ಸೈಗಲ್ ಅವರ ಬೆಂಬಲಕ್ಕೆ ಜಾವೇದ್ ಅಕ್ತರ್ ನಿಂತಿದ್ದಾರೆ.
"ಅವರ ದುಖಃವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಅವರು ಜಾತ್ಯಾತೀತತೆ ಮತ್ತು ಒಳ್ಳೆಯ ಮೌಲ್ಯಗಳುಳ್ಳ ಸಂಪ್ರದಾಯದಿಂದ ಬಂದವರು. ಅವರಿಗೆ ನೋವಾಗಿರಿವುದು ಸಹಜ" ಎಂದು ಅಕ್ತರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.