ಬೆಂಗಳೂರು: ಖ್ಯಾತ ಲೇಖಕಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯೆ ಶಶಿ ದೇಶಪಾಂಡೆ ಅವರು ತಮ್ಮ ಸ್ಥಾನಕ್ಕೆ ಶುಕ್ರವಾರ ರಾಜಿನಾಮೆ ನೀಡಿದ್ದಾರೆ.
ವಿಚಾರವಾದಿ ಮತ್ತು ಲೇಖಕ ಡಾ.ಎಂಎಂ ಕಲ್ಬುರ್ಗಿ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹಿತ್ಯ ಅಕಾಡೆಮಿಯ ನಡೆಯನ್ನು ಖಂಡಿಸಿರುವ ಶಶಿಪಾಂಡೆ ಅವರು, ಅಕಾಡೆಮಿಯ ವರ್ತನೆಯಿಂದ ನೊಂದು ತಾವು ಈ ಕಠಿಣ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ವಿಶ್ವನಾಥ್ ಪ್ರಸಾದ್ ತಿವಾರಿ ಅವರಿಗೆ ಪತ್ರವೊಂದನ್ನು ಬರೆದಿರುವ ಶಶಿ ದೇಶಪಾಂಡೆ ಅವರು, ಡಾ.ಎಂಎಂ ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕಾಡೆಮಿ ನಡೆದುಕೊಂಡ ರೀತಿ ನಿಜಕ್ಕೂ ಪ್ರಶ್ನಾರ್ಥಕವಾಗಿದೆ.
ಎಂಎಂ ಕಲಬುರ್ಗಿ ಅವರು ಖ್ಯಾತ ಲೇಖಕರಾಗಿದ್ದು, ಅಕಾಡೆಮಿ ಸದಸ್ಯರಾಗಿದ್ದರು. ಅವರನ್ನು ಕಿಡಿಗೇಡಿಗಳು ಕ್ರೂರವಾಗಿ ಹತ್ಯೆ ಮಾಡಿದ್ದರೂ ಸಾಹಿತ್ಯ ಅಕಾಡೆಮಿ ಯಾವುದೇ ರೀತಿಯ ವಿರೋಧವಿರಲಿ ಕನಿಷ್ಠ ಪ್ರತಿಕ್ರಿಯೆ ಕೂಡ ನೀಡದೇ ಮೌನಕ್ಕೆ ಶರಣಾಗಿರುವುದು ನನಗೆ ಅತೀವ ದುಃಖತಂದಿದೆ. ಕಲ್ಬುರ್ಗಿ ಅವರ ಮೇಲಿನ ದಾಳಿ ಮಾನವೀಯತೆಯ ಮೇಲಿನ ದಾಳಿಯಾಗಿದ್ದು, ಈ ಬಗ್ಗೆ ತನ್ನ ವಿರೋಧ ವ್ಯಕ್ತಪಡಿಸಬೇಕಿದ್ದ ಸಾಹಿತ್ಯ ಅಕಾಡೆಮಿಯೇ ಮೌನಕ್ಕೆ ಶರಣಾಗಿದೆ. ಇದು ಪರೋಕ್ಷವಾಗಿ ಇಂತಹ ದಾಳಿಗಳಿಗೆ ಕುಮಕ್ಕು ನೀಡುವಂತಿದೆ. ಕನಿಷ್ಠ ಪಕ್ಷ ಆಕಾಡೆಮಿ ಈ ಬಗ್ಗೆ ಒಂದು ಪ್ರತಿಕ್ರಿಯೆ ನೀಡಲೂ ಕೂಡ ಹಿಂದೇಟು ಹಾಕಿದೆ. ಇದು ನನಗೆ ತೀವ್ರ ದುಃಖಕರ ವಿಚಾರವಾಗಿದ್ದು, ಸಾಹಿತ್ಯ ಅಕಾಡೆಮಿ ಸದಸ್ಯತ್ವಕ್ಕೆ ನಾನು ರಾಜಿನಾಮೆ ನೀಡುತ್ತಿದ್ದೇನೆ ಎಂದು ಶಶಿ ದೇಶಪಾಂಡೆ ಪತ್ರದಲ್ಲಿ ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಾಹಿತ್ಯ ಆಕಾಡೆಮಿ ಅಧ್ಯಕ್ಷ ವಿಶ್ವನಾಥ್ ಪ್ರಸಾದ್ ತಿವಾರಿ ಅವರು, ರಾಜಿನಾಮೆಯ ಅಗತ್ಯವಿರಲಿಲ್ಲ. ಆದರೆ ನಾನು ಶಶಿ ದೇಶಪಾಂಡೆ ಅವರನ್ನು ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಬಹುದಷ್ಟೇ. ಆಕಾಡೆಮಿಯ ಕಾರ್ಯಕಾರಿ ಮಂಡಳಿಯಿಂದ ನಿರ್ದೇಶನವಿಲ್ಲದೆ ನಾನು ಯಾವುದೇ ರೀತಿಯ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ. ಕಾರ್ಯಕಾರಿ ಮಂಡಳಿ ಈ ಬಗ್ಗೆ ಮಾತನಾಡುವಂತೆ ಸೂಚನೆ ನೀಡಿದರೆ ಖಂಡಿತ ಮಾತನಾಡುತ್ತೇನೆ. ಅವರ ನಿರ್ದೇಶನದಂತೆ ನಾನು ನಡೆಯುತ್ತೇನೆ ಎಂದು ವಿಶ್ವನಾಥ್ ಪ್ರಸಾದ್ ತಿವಾರಿ ಹೇಳಿದ್ದಾರೆ.