ಪ್ರಧಾನ ಸುದ್ದಿ

ರಾಮನವಮಿ ವೇಳೆ ಜಾರ್ಖಂಡದಲ್ಲಿ ಕೋಮು ಘರ್ಷಣೆ

Guruprasad Narayana

ರಾಂಚಿ: ಜಾರ್ಖಂಡದ ಬೊಕಾರೋ ಜಿಲ್ಲೆಯ ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ರಾಮನವಮಿ ಮೆರವಣಿಗೆ ವೇಳೆಯಲ್ಲಿ ಕೆಲವರು ಕಲ್ಲೆಸೆದಿದ್ದರ ಪರಿಣಾಮವಾಗಿ ಕೋಮುಘರ್ಷಣೆಗೆ ಕಾರಣವಾಗಿದ್ದು ಕರ್ಫ್ಯೂ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಹಜಾರಿಭಾಗ್ ನಲ್ಲಿ ಕೂಡ, ರಾಮನವಮಿ ಮೆರವಣಿಗೆ ಸಮಯದಲ್ಲಿ ಕಲ್ಲೆಸೆತದಿಂದ ಹಿಂಸೆ ರೂಪ ತಳೆದಿದೆ.

"ಬೋಕಾರೋದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಹಜಾರಿಭಾಗ್ ಮತ್ತು ಬೊಕಾರೋ ಜಿಲ್ಲೆಗಳಲ್ಲಿ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ" ಎಂದು ಜಾರ್ಖಂಡ ಪೋಲಿಸ್ ವಕ್ತಾರ ಎಸ್ ಎನ್ ಪ್ರಧಾನ್ ಶನಿವಾರ ಹೇಳಿದ್ದಾರೆ.

ಬೊಕಾರೋ ಸ್ಟೀಲ್ ಸಿಟಿಯ ಸಿವಂಧಿ ಹೊರವಲಯದಲ್ಲಿ ಕಲ್ಲೆಸತದಿಂದ ರಾಮನವಮಿ ಮೆರವಣಿಗೆ ನಿಂತಿದ್ದು ಎರಡು ಕೋಮುಗಳ ನಡುವೆ ಹಿಂಸಾಚಾರಕ್ಕೆ ತಿರುಗಿದೆ.

ಈ ಹಿಂಸಾಚಾರದಲ್ಲಿ ಸರ್ಕಾರಿ ಅಧಿಕಾರಿಗಳು, ಪತ್ರಕರ್ತರು ಸೇರಿದಂತೆ ಹಲವರಿಗೆ ಗಾಯಗಳಾಗಿದ್ದು, ಗುಂಪೊಂದು ಮೂರು ವಾಹನಗಳಿಗೆ ಬೆಂಕಿಯಿಟ್ಟಿದೆ.

ಹಜಾರಿಭಾಗ್ ಹಿಂಸಾಚಾರದಲ್ಲಿ ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಹಿಂಸಾಚಾರದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ವರದಿಯಾಗಿದ್ದರೂ, ಪೊಲೀಸರು ಈ ಸಾವಿಗೂ ಕೋಮು ಹಿಂಸಾಚಾರಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.

"ತೊಂದರೆಪೀಡಿತ ಪ್ರದೇಶದಲ್ಲಿ ಹಿರಿಯ ನಾಗರಿಕರೊಬ್ಬರು ಮೆಟ್ಟಿಲು ಜಾರಿ ಬಿದ್ದು ಮೃತಪಟ್ಟಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT