ನವದೆಹಲಿ: ನೋಟು ನಿಷೇಧ ಕ್ರಮದ ಬಳಿಕ ದೇಶಾದ್ಯಂತ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ವಿವಿಧ ದಾಳಿ ಪ್ರಕರಣಗಳಲ್ಲಿ ಒಟ್ಟು 2, 600 ಕೋಟಿ ರು. ಕಪ್ಪುಹಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ನೇರ ಆದಾಯ ತೆರಿಗೆ ಮಂಡಳಿಯ (ಸಿಬಿಡಿಟಿ) ಆಧ್ಯಕ್ಷ ಸುಶೀಲ್ ಚಂದ್ರ ಅವರು, ಕಳೆದ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ರು.ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದಾಗಿನಿಂದಲೂ ಈವರೆಗೂ ಸುಮಾರು 2600 ಕೋಟಿ ರು. ಕಪ್ಪುಹಣ ಪತ್ತೆಯಾಗಿದೆ. ಈ ಪೈಕಿ ಸುಮಾರು 393 ಕೋಟಿ ಹಣವನ್ನು ಜಪ್ತಿ ಮಾಡಲಾಗಿದ್ದು, ಒಟ್ಟು 300 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಮುಖವಾಗಿ ಭಯೋತ್ಪಾದನೆಯ ಆರ್ಥಿಕ ಮೂಲವನ್ನು ಬುಡಸಮೇತ ಕೀಳಲು ಹಾಗೂ ಕಪ್ಪುಹಣವನ್ನು ನಿಗ್ರಹಿಸುವ ಉದ್ದೇಶದಿಂದಲೇ ನೋಟು ನಿಷೇಧ ಮಾಡಲಾಗಿದೆ. ನೋಟು ನಿಷೇಧದ ಬಳಿಕ ಈ ವರೆಗೂ ಒಟ್ಟು 291 ಪ್ರಕರಣಗಳಲ್ಲಿ ಶೋಧ ಮತ್ತು ಹಣ ಜಪ್ತಿ ಮಾಡಲಾಗಿದೆ. ಅಂತೆಯೇ 295 ಪ್ರಕರಣಗಳನ್ನು ವೀಕ್ಷಣೆಯಲ್ಲಿಡಲಾಗಿದೆ. ಅಂತೆಯೇ ಸುಮಾರು 316 ಕೋಟಿ ರು. ನಗದನ್ನು ಜಪ್ತಿ ಮಾಡಲಾಗಿದ್ದು, ಈ ಪೈಕಿ 80 ಕೋಟಿ ಹೊಸ ನೋಟುಗಳದ್ದಾಗಿದೆ. ಇದಲ್ಲದೆ ಸುಮಾರು 76 ಕೋಟಿ ಮೌಲ್ಯದ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಂತೆಯೇ ಆದಾಯ ತೆರಿಗೆ ಇಲಾಖೆ ವತಿಯಿಂದ ಬ್ಯಾಂಕ್ ಖಾತೆಗಳಿಗೆ ಸಂಶಾಯಾಸ್ಪದವಾಗಿ ಹಣ ಠೇವಣಿ ಮಾಡಿದ ಪ್ರಕರಣ ಸಂಬಂಧ ಈ ವರೆಗೂ ಸುಮಾರು 3000 ನೋಟಿಸ್ ಗಳನ್ನು ನೀಡಲಾಗಿದ್ದು, ಖಾತೆದಾರರಿಂದ ವಿವರಣೆ ಕೋರಲಾಗಿದೆ ಎಂದು ಸುಶೀಲ್ ಚಂದ್ರ ಅವರು ತಿಳಿಸಿದ್ದಾರೆ. ಅಂತೆಯೇ ಕಪ್ಪುಹಣವನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವುದರಿಂದ ಅದು ಬಿಳಿಯಾಗುವುದಿಲ್ಲ. ಈ ಬಗ್ಗೆ ಅಧಿಕಾರಿಗಳು ವೀಕ್ಷಣೆಯಲ್ಲಿದ್ದು, ಶಂಕೆ ಕಂಡುಬಂದರೆ ಮುಲಾಜಿಲ್ಲದೇ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಲಾಗುತ್ತದೆ ಎಂದು ಅವರು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.