ಪ್ರಧಾನ ಸುದ್ದಿ

ವಿವಿಐಪಿ ಕ್ಯಾಪ್ಟರ್ ಹಗರಣ: ವಾಯುಪಡೆ ಮಾಜಿ ಮುಖ್ಯಸ್ಥನಿಗೆ ನ್ಯಾಯಾಂಗ ಬಂಧನ

Lingaraj Badiger
ನವದೆಹಲಿ: ವಿವಿಐಪಿ ಹೆಲಿಕಾಪ್ಟರ್ ಹಗರಣ ಸಂಬಂಧ ಬಂಧನಕ್ಕೊಳಗಾಗಿರುವ ವಾಯುಪಡೆ ಮಾಜಿ ಮುಖ್ಯಸ್ಥ ಏರ್ ಚೀಫ್ ಮಾರ್ಷೆಲ್ ಎಸ್.ಪಿ.ತ್ಯಾಗಿ ಅವರನ್ನು ಡಿಸೆಂಬರ್ 30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಡಿಸೆಂಬರ್ 17ರವರೆಗೆ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್‌.ಪಿ.ತ್ಯಾಗಿ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಸಿಬಿಐ ವಶಕ್ಕೆ ನೀಡಲಾಗಿತ್ತು. ಸಿಬಿಐ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಸಿಬಿಐ ವಿಶೇಷ ಕೋರ್ಟ್ ಗೆ ಹಾಜರುಪಡಿಸಲಾಯಿತು. 
ವಿಚಾರಣೆ ನಡೆಸಿದ ನ್ಯಾಯಾಧೀಶ ಅರವಿಂದ್ ಕುಮಾರ್ ಅವರು ಎಸ್.ಪಿ.ತ್ಯಾಗಿ ಹಾಗೂ ಅವರ ಸಹೋದರ ಸಂಬಂಧಿ ಸಂಜೀವ್ ತ್ಯಾಗಿ ಮತ್ತು ಗೌತಮ್ ಖೇತಾನ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಮಧ್ಯೆ ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಸಿಬಿಐಯಿಂದ ಬಂಧನಕ್ಕೊಳಗಾಗಿರುವ ಎಸ್ ಪಿ ತ್ಯಾಗಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಪಟಿಯಾಲ ಹೌಸ್ ಕೋರ್ಟ್ ಡಿಸೆಂಬರ್ 21ಕ್ಕೆ ನಿಗದಿ ಮಾಡಿದೆ.
ಎಸ್ ಪಿ ತ್ಯಾಗಿ ಮತ್ತು ಅವರ ಸಹೋದರ ಸಂಬಂಧಿಗಳು ಸೇರಿ ಒಟ್ಟು 13 ಮಂದಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ್ದು, ತ್ಯಾಗಿ ಅವರು ಅಗಸ್ಟಾ ವೆಸ್ಟ್​ಲ್ಯಾಂಡನ್ನು ಹರಾಜುದಾರರ ಪಟ್ಟಿಗೆ  ಸೇರ್ಪಡೆ ಮಾಡಲು ಅನುಕೂಲವಾಗುವಂತೆ, ಹೆಲಿಕಾಪ್ಟರ್​ನ ಹಾರಾಟದ ಮಿತಿಯನ್ನು 6,000 ಮೀ.ನಿಂದ 4500 ಮೀ.ಗಳಿಗೆ (15,000 ಅಡಿಗಳು) ಇಳಿಸಿದರು. ಇದಕ್ಕೆ ಪ್ರತಿಯಾಗಿ ತ್ಯಾಗಿ  ಭಾರಿ ಪ್ರಮಾಣದ ಕಿಕ್ ಬ್ಯಾಕ್ ಪಡೆದಿದ್ದರು ಎಂಬ ಆರೋಪವನ್ನು ಅವರ ವಿರುದ್ಧ ಮಾಡಲಾಗಿದೆ.
SCROLL FOR NEXT