ಪ್ರಧಾನ ಸುದ್ದಿ

5ನೇ ಟೆಸ್ಟ್: ಭಾರತದ ಬ್ಯಾಟಿಂಗ್ ಗೆ ಬಲ ತಂದ ರಾಹುಲ್ ಶತಕ!

Srinivasamurthy VN

ಚೆನ್ನೈ: ಕನ್ನಡಿಗ ಕೆಎಲ್ ರಾಹುಲ್ ಅವರ ಅಮೋಘ ಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧದ 5ನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ದಿಟ್ಟ ಉತ್ತರ ನೀಡುತ್ತಿದೆ.

ಚೆನ್ನೈನ ಚಿಪಾಕ್ ನಲ್ಲಿರುವ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದು, ಕನ್ನಡಿಗ ಕೆಎಲ್ ರಾಹುಲ್ ಅಮೋಘ ಶತಕದ ನೆರವಿನಿಂದ ಭಾರತಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಅವರಿಗೆ ಪಾರ್ಥೀವ್ ಪಟೇಲ್ ಉತ್ತಮ ಸಾಥ್ ನೀಡಿದರು. ನಿನ್ನೆ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 60 ರನ್ ಗಳಿಸಿದ್ದ ಭಾರತ ತಂಡ, ಅದೇ ಹಮ್ಮಸ್ಸಿನಲ್ಲಿ ಇಂದೂ  ಕಣಕ್ಕಳಿಯಿತು. ನಿನ್ನೆ 30 ರನ್ ಗಳಿಸಿದ್ದ ರಾಹುಲ್ ಹಾಗೂ 28 ರನ್ ಗಳಿಸಿ ಕ್ರೀಸ್ ನಲ್ಲಿದ್ದ ಪಾರ್ಥೀವ್ ಪಟೇಲ್ ಇಂದು ಆಟ ಮುಂದುವರೆಸಿದರು.

ಉತ್ತಮವಾಗಿ ಆಡಿದ ಈ ಜೋಡಿ ಮೊದಲ ವಿಕೆಟ್ ಗೆ 152 ರನ್ ಗಳ ಭರ್ಜರಿ ಜೊತೆಯಾಟವಾಡಿತು. ಅಷ್ಟು ಹೊತ್ತಿಗಾಗಲೇ ಉಭಯ ಆಟಗಾರರೂ ಅರ್ಧಶತಕ ಸಿಡಿಸಿ ಶತಕದತ್ತ ಮುನ್ನುಗ್ಗಿದ್ದರು. ಆದರೆ ಈ ಹಂತದಲ್ಲಿ ಅಲಿ  ಬೌಲಿಂಗ್ ನಲ್ಲಿ ಭಾರಿ ಹೊಡೆತಕ್ಕೆ ಕೈ ಹಾಕಿದ ಪಾರ್ಥೀವ್ ಪಟೇಲ್ ಬಟ್ಲರ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ಬಂದ ಚೇತೇಶ್ವರ ಪೂಜಾರ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದೇ ಕೇವಲ 16 ರನ್ ಗಳಿಸಿ ಸ್ಟೋಕ್ಸ್ ಬೌಲಿಂಗ್ ನಲ್ಲಿ  ಕುಕ್ ಕ್ಯಾಚಿತ್ತು ನಿರ್ಗಮಿಸಿದರು. ಅಷ್ಟು ಹೊತ್ತಿಗಾಗಲೇ ಶತಕ ಸಿಡಿಸಿ ರಾಹುಲ್ ಸಂಭ್ರಮಿಸಿದರು. ಪ್ರಸ್ತುತ ನಾಯಕ ಕೊಹ್ಲಿ ರಾಹುಲ್ ಜೊತೆಗೂಡಿದ್ದು, ಅಜೇಯ 15 ರನ್ ಗಳಿಸಿದ್ದಾರೆ.

ಇತ್ತೀಚಿನ ವರದಿಗಳು ಬಂದಾಗ ಭಾರತ 2 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿದೆ. ನಾಯಕ ಕೊಹ್ಲಿ 15 ರನ್ ಗಳಿಸಿದ್ದು, ರಾಹುಲ್ ಅಜೇಯ 107 ರನ್ ಗಳಿಸಿ ಕ್ರೀಸ್ ನಲ್ಲಿ ಇದ್ದಾರೆ. ಅಂತೆಯೇ ಭಾರತ 266 ರನ್ ಗಳ ಹಿನ್ನಡೆಯಲ್ಲಿದೆ.

SCROLL FOR NEXT