ಬೆಂಗಳೂರು: ರಾಜ್ಯ ಸರ್ಕಾರ ಪಡಿತರ ವಿತರಣೆಯನ್ನು ಜನಸ್ನೇಹಿಯಾಗಿ ರೂಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು, ಇನ್ನುಮುಂದೆ ನಿಗದಿತ ಕಿರಾಣಿ ಅಂಗಡಿಗಳಲ್ಲೂ ಪಡಿತರ ಪಡೆದುಕೊಳ್ಳಬಹುದಾಗಿದೆ ಎಂದು ಆಹಾರ ಖಾತೆ ಸಚಿವ ಯು.ಟಿ ಖಾದರ್ ಬುಧವಾರ ಹೇಳಿದ್ದಾರೆ.
ಇಂಗು ವಿಕಾಸ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಡಿತರ ಕೂಪನ್ ಬದಲಿಗೆ ಇನ್ನು ಮುಂದೆ ನಗದು ಕೂಪನ್ ವಿತರಿಸಲಾಗುವುದು. ಈ ಕೂಪನ್ ಗಳನ್ನು ಕೊಟ್ಟು ನಿಗದಿತ ಕಿರಾಣಿ ಅಂಗಡಿಗಳಲ್ಲಿ ತಮಗೆ ಬೇಕಾದ ಆಹಾರ ಧಾನ್ಯ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಯನ್ನು ಪ್ರಾಯೋಗಿಕವಾಗಿ ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ ಜಾರಿ ತರಲಾಗುತ್ತಿದ್ದು, ಬೆಂಗಳೂರು ಒನ್ ಹಾಗೂ ಪಂಚಾಯಿತಿ ಕಚೇರಿಗಳಲ್ಲಿ ನಗದು ಕೂಪನ್ ವಿತರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ 3000 ಬಿ.ಪಿ.ಎಲ್. ಕಾರ್ಡ್ ದಾರರಿಗೆ ಕೂಪನ್ ವಿತರಿಸಲಿದ್ದು, ಜನವರಿ ಇಲ್ಲವೇ ಫೆಬ್ರವರಿಯಲ್ಲಿ ಪೈಲಟ್ ಯೋಜನೆ ಜಾರಿಗೆ ಬರಲಿದೆ ಎಂದಿದ್ದಾರೆ.
ನಗದು ಕೂಪನ್ ಬಿ.ಪಿ.ಎಲ್. ಕಾರ್ಡ್ ದಾರರಿಗೆ ಮಾತ್ರ. ಎ.ಪಿ.ಎಲ್. ಕಾರ್ಡ್ ದಾರರಿಗೆ ಇದು ಅನ್ವಯಿಸುವುದಿಲ್ಲ ಎಂದ ಅವರು, ನೋಂದಾಯಿತ ಕಿರಾಣಿ ಅಂಗಡಿಗಳಲ್ಲಿ ಆಹಾರ ಧಾನ್ಯ ಪಡೆಯುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಬಿ.ಪಿ.ಎಲ್. ಕಾರ್ಡ್ ಪಡೆಯಲು ಆಧಾರ್ ಕಡ್ಡಾಯವಾಗಿದ್ದು, ಅರ್ಜಿ ಸಲ್ಲಿಕೆ ನಂತರ ಗ್ರಾಮ ಪಂಚಾಯಿತಿ ಮೂಲಕ ಪರಿಶೀಲನೆ ನಡೆಸಲಾಗುವುದು. ಎ.ಪಿ.ಎಲ್. ಕಾರ್ಡ್ ದಾರರಿಗೆ ಅರ್ಜಿ ಸಲ್ಲಿಸಿ ಪರಿಶೀಲನೆ ಬಳಿಕ ಕಾರ್ಡ್ ಪ್ರಿಂಟ್ ತೆಗೆದುಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ. 15 ದಿನಗಳಲ್ಲಿ ಸ್ಪೀಡ್ ಪೋಸ್ಟ್ ಮೂಲಕ ಅಧಿಕೃತವಾಗಿ ಕಾರ್ಡ್ ಮನೆ ಬಾಗಿಲಿಗೆ ಬರುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಅಲ್ಲದೆ 161ಕ್ಕೆ ಕರೆ ಮಾಡಿ ನಗದು ಕೂಪನ್ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.