ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ನಗದು ರಹಿತ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲು ಇದೇ ಮೊದಲ ಬಾರಿಗೆ ಲಕ್ಕಿ ಗ್ರಾಹಕರಿಗೆ ನಗದು ಬಹುಮಾನ ನೀಡಿ, ಮೊಬೈಲ್ ಆಪ್ ಭೀಮ್ ಬಿಡುಗಡೆ ಮಾಡಿದ್ದಾರೆ.
ಇಂದು ದೆಹಲಿಯಲ್ಲಿ ಡಿಜ್ ಧನ್ ಮೇಳದಲ್ಲಿ ಭೀಮ್ ಆಪ್ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ಲಕ್ಕಿ ಗ್ರಾಹಕ ಯೋಜನೆಯಲ್ಲಿ ಡ್ರಾ ಮೂಲಕ ನಗದು ರಹಿತ ವ್ಯವಹಾರ ನಡೆಸಿದ ಗ್ರಾಹಕನನ್ನು ಆಯ್ಕೆ ಮಾಡಿ ಒಂದು ಕೋಟಿ ರುಪಾಯಿ ಬಹುಮಾನ ನೀಡಲಾಗವುದು. ಈ ಯೋಜನೆ 100 ದಿನಗಳ ಕಾಲ ಜಾರಿಯಲ್ಲಿರಲಿದ್ದು, ಏಪ್ರಿಲ್ 14ರಂದು 1 ಕೋಟಿ ಬಹುಮಾನ ವಿಜೇತರನ್ನು ಘೋಷಿಸಲಾಗುವುದು ಎಂದರು. ಅಲ್ಲದೆ ವಿಜೇತರ ಹೆಸರನ್ನು Digidhanmygov.in ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಡಾ.ಬಿ.ಆರ್ ಅಂಬೇಡ್ಕರ್ ಹೆಸರಿನ ಹೊಸ ಭೀಮ್ ಆಪ್ ಭಾರತದ ಮಟ್ಟಿಗೆ ಹೊಸ ಆವಿಷ್ಕಾರವಾಗಿದ್ದು, ಬಯೋಮೆಟ್ರಿಕ್ ಆಧಾರಿತ ಭೀಮ್ ಆಪ್ ಡಿಜಿಟಲ್ ಪೇಮೆಂಟ್ ಗೆ ರಹದಾರಿಯಾಗಲಿದೆ. ಭೀಮ್ ಆಪ್ ನಿಮ್ಮ ಹೆಬ್ಬೆಟ್ಟನ್ನು ನಿಮ್ಮ ಬ್ಯಾಂಕ್ ಆಗಿ ಮಾಡಲಿದ್ದು, ಈ ಆಪ್ ಜಗತ್ತಿನಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ ಎಂದರು.
ದೇಶವನ್ನು ಸುಭದ್ರ ನಗದು ರಹಿತ ಆರ್ಥಿಕತೆಯನ್ನಾಗಿ ಬೆಳೆಸುವ ದಿಶೆಯಲ್ಲಿ ಜನರು ಹೆಚ್ಚೆಚ್ಚು ಡಿಜಿಟಲ್ ಪೇಮೆಂಟ್ ಮಾಡಬೇಕು, ಭೀಮ್ ಎಂಬ ಹೆಸರಿನ ಈ ಹೊಸ ಆಪ್ ನಿಂದ ಜನರಿಗೆ ಮತ್ತು ಸರಕಾರಕ್ಕೆ ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವುದಕ್ಕೆ ಭೀಮ ಬಲ ದೊರಕಿದಂತಾಗಿದೆ ಎಂದರು.
ಲಕ್ಕಿ ಗ್ರಾಹಕ ಯೋಜನೆಯಡಿ ದಿನಕ್ಕೆ 50 ರು.ಗಳಿಂದ 3,000 ರು.ಗಳ ವರೆಗೆ ಡಿಜಿಟಲ್ ಪೇಮೆಂಟ್ ಮಾಡುವ 15,000 ಜನರು ನಿತ್ಯ 1,000 ರು. ಗೆಲ್ಲಬಹುದಾಗಿದೆ.