ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಲೋಕಾಯುಕ್ತ ಆಯ್ಕೆ ಸಮಿತಿಯು ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಾಮೂರ್ತಿ ಎಸ್ ಆರ್ ನಾಯಕ ಅವರ ಹೆಸರನ್ನು ನೂತನ ಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡುವ ನಿರ್ಧಾರ ಕೈಗೊಂಡಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಲೋಕಾಯುಕ್ತ ಆಯ್ಕೆ ಸಮಿತಿ ಸಭೆ ಕರೆಯಲಾಗಿತ್ತು. ಚರ್ಚೆಯ ವೇಳೆ ನ್ಯಾ.ಎಸ್ ಆರ್ ನಾಯಕ್ ಹಾಗೂ ನ್ಯಾ.ವಿಕ್ರಮ್ ಜಿತ್ ಸೇನ್ ಹೆಸರು ಪ್ರಸ್ತಾಪವಾದವು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಯಕ ಹೆಸರನ್ನು ಸೂಚಿಸಿದರು. ಇನ್ನು ಸಭೆಗೆ ಗೈರು ಹಾಜರಾಗಿದ್ದ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಕೂಡ ನಾಯಕ ಹೆಸರನ್ನು ಪರಿಗಣಿಸುವಂತೆ ಪತ್ರದ ಮೂಲಕ ತಿಳಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಿಧಾನಪರಿಷತ್ ಸಭಾಪತಿ ಡಿಎಚ್ ಶಂಕರಮೂರ್ತಿ, ವಿಧಾನಸಭೆ ಪ್ರತಿ ಪಕ್ಷ ನಾಯಕ ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ ಅವರು ನ್ಯಾ.ವಿಕ್ರಮ್ ಜಿತ್ ಸೇನ್ ಹೆಸರು ಪರಿಗಣಿಸುವಂತೆ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟು ಹಿಡಿದ ಹಿನ್ನಲೆಯಲ್ಲಿ ಪ್ರತಿಪಕ್ಷಗಳ ತುಸು ವಿರೋಧ ಮತ್ತು ಮಾತಿನ ಚಕಮಕಿಯ ನಡುವೆಯೇ ಎಸ್ ಆರ್ ನಾಯಕರ್ ಅವರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ನ್ಯಾ.ವಿಕ್ರಮ್ ಜಿತ್ ಸೇನ್ ಅವರ ಬಗ್ಗೆ ನನಗೂ ಗೌರವ ಇದೆ. ಆದರೆ, ಎಸ್ ಆರ್ ನಾಯಕ ಅವರು ಕನ್ನಡಿಗರು. ನಮ್ಮವರೇ ಲೋಕಾಯುಕ್ತ ಹುದ್ದೆಗೆ ಅರ್ಹರಿರಬೇಕಾದರೆ, ಬೇರೆಯವರನ್ನು ಏಕೆ ನೇಮಕ ಮಾಡಬೇಕು ಎಂದು ಚರ್ಚೆಯ ವೇಳೆ ಸಿಎಂ ಪ್ರಶ್ನಿಸಿದ್ದಾರೆ.
ನಾಯಕ್ ಅವರ ವಿರುದ್ಧ ಕೆಲವು ಆರೋಪಗಳು ಕೇಳಿ ಬಂದಿವೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿಕೆಗೆ ಪ್ರತ್ರಿಕ್ರಯಿಸಿದ ಸಿಎಂ, ಯಾವ ತನಿಖಾ ಸಂಸ್ಥೆಯೂ ಅವರು ವಿರುದ್ಧ ವರದಿಗಳನ್ನು ಕೊಟ್ಟಿಲ್ಲ. ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ. ಲೋಕಾಯುಕ್ತಕ್ಕೆ ನಾಯಕ್ ನೇಮಕಕ್ಕೆ ಒಪ್ಪಿಕೊಳ್ಳಿ ಎಂದು ಮನವಿ ಮಾಡಿಕೊಂಡರು ಎಂದು ಮೂಲಗಳು ಹೇಳಿವೆ.