ಪಠಾಣ್ ಕೋಟ್: ಐದಾರು ಮಂದಿ ಯುವಕರು ನನ್ನ ಕಾರನ್ನು ಆಡ್ಡಗಟ್ಟಿ ನನ್ನನ್ನು ಅಪಹರಣ ಮಾಡಿದಾಗಲೇ ಅವರು ಉಗ್ರರು ತಿಳಿದಿತ್ತು ಎಂದು ಉಗ್ರರಿಂದ ಅಪರಹಣಕ್ಕೊಳಗಾಗಿದ್ದ ಗುರುದಾಸ್ ಪುರದ ಪೊಲೀಸ್ ವರಿಷ್ಠಾಧಿಕಾರಿ ಸಲ್ವಿಂದರ್ ಸಿಂಗ್ ಹೇಳಿದ್ದಾರೆ.
ಪಂಜಾಬ್ ಪಠಾಣ್ ಕೋಟ್ ವಾಯುನೆಲೆಯ ಮೇಲೆ ಶನಿವಾರ ಉಗ್ರರು ದಾಳಿ ಮಾಡುವ ಮುನ್ನ ಅವರು ತಂದಿದ್ದ ಕಾರು ಕೆಟ್ಟು ನಿಂತಿತ್ತು. ಅದೇ ರಸ್ತೆಯಲ್ಲಿ ಸಲ್ವಿಂದರ್ ಅವರ ಕಾರು ಬರುತ್ತಿದ್ದನ್ನು ಗಮನಿಸಿದ ಉಗ್ರರು ಕಾರನ್ನು ಅಡ್ಡಗಟ್ಟಿ ಪೊಲೀಸ್ ಅಧಿಕಾರಿ ಸಲ್ವಿಂದರ್ ಸಿಂಗ್ ಅವರನ್ನು ಅಪಹರಣ ಮಾಡಿದ್ದರು.
ಈ ಬಗ್ಗೆ ಮಂಗಳವಾರ ಬೆಳಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಪೊಲೀಸ್ ಅಧಿಕಾರಿ ಸಲ್ವಿಂದರ್ ಸಿಂಗ್ ಅವರು, ಎಕೆ-47 ಹಿಡಿದಿದ್ದ ನಾಲ್ಕೈದು ಸದಸ್ಯರ ಗುಂಪೊಂದು ಏಕಾಏಕಿ ನನ್ನ ಕಾರನ್ನು ಅಡ್ಡಹಾಕಿ, ನನ್ನಲ್ಲಿದ್ದ ಮೊಬೈಲ್ ಕಿತ್ತುಕೊಂಡು ಕಾರು ಸಮೇತ ಅಪಹರಿಸಿದರು. ನಾನು ದೇವಸ್ಥಾನಕ್ಕೆ ಹೋಗುತ್ತಿರುವ ಕಾರಣ ನನ್ನ ಬಳಿ ಗನ್ ಕೂಡ ಇರಲಿಲ್ಲ. ಹೀಗಾಗಿ ಅವರನ್ನು ಎದುರಿಸುವುದು ನನ್ನಿಂದ ಸಾಧ್ಯವಾಗಲಿಲ್ಲ ಎಂದು ಹೇಳಿದರು.
"ಕಾರಿನಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದ ಕಾರಣ ನನ್ನ ಬಳಿ ಯಾವುದೇ ಶಸ್ತ್ರಾಸ್ತ್ರ ಕೂಡ ಇರಲಿಲ್ಲ. ಅವರು ಉರ್ದು, ಹಿಂದಿ, ಪಂಜಾಬಿ ಭಾಷೆಗಳಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಆ ಕ್ಷಣಲ್ಲಿ ನಾನು ಏನೂ ತೋಚದಾದೆ. ಏನನ್ನೂ ಮಾಡುವ ಸ್ಥಿತಿ ಇರಲಿಲ್ಲ. ಅಷ್ಟಕ್ಕೂ ಅವರು ನನ್ನನ್ನು ಅಡ್ಡ ಹಾಕಿದಾಗ ನಾನು ಪೊಲೀಸ್ ವರಿಷ್ಠಾಧಿಕಾರಿ ಎನ್ನುವುದು ಅವರಿಗೆ ಗೊತ್ತಿರಲಿಲ್ಲ. ಬಳಿಕ ಈ ಮಾಹಿತಿಯನ್ನೆಲ್ಲ ಪಡೆದುಕೊಂಡರು. ನನ್ನ ಕೈ ಮತ್ತು ಕಾಲುಗಳನ್ನು ಕಟ್ಟಿ, ಬಟ್ಟೆಯಿಂದ ಬಾಯಿ ಮುಚ್ಚಿದ್ದರು" ಎಂದು ಸಲ್ವಿಂದರ್ ಸಿಂಗ್ ಹೇಳಿದರು.
ಉಗ್ರರು ಪಠಾಣ್ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸುವುದಕ್ಕೂ ಒಂದು ದಿನ ಮೊದಲು ಎಸ್ಪಿ ಸಲ್ವಿಂದರ್ ಸಿಂಗ್ ಅವರ ಅಪಹರಣವಾಗಿತ್ತು. ಉಗ್ರರು ಅವರದೇ ವಾಹನದಲ್ಲಿ ಸೇನಾ ಸಮವಸ್ತ್ರ ಧರಿಸಿ ಒಳಪ್ರವೇಶಿಸಿದ್ದರು. ಪಠಾಣ್ ಕೋಟ್ ನಲ್ಲಿನ ಚೆಕ್ ಪೋಸ್ಟ್ ನಲ್ಲಿಯೂ ಉಗ್ರರಿದ್ದ ಕಾರು ವೇಗವಾಗಿ ಚಾಲನೆಯಾಗಿತ್ತು.