ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಮಂಗಳವಾರ ಬೆಳಗ್ಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ 19 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಷ್ಟ್ರಪತಿ ಭವನದಲ್ಲಿರುವ ಮೆಜೆಸ್ಟಿಕ್ ದರ್ಬಾರ್ ಹಾಲ್ ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ. ಇನ್ನು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ 19 ಮಂದಿ ಯಾರು ಎಂಬುದು ಇನ್ನೂ ರಹಸ್ಯವಾಗಿಯೇ ಇದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆ ಇದು ಪ್ರಕಟಗೊಳ್ಳಲಿದೆ. ಮೂಲಗಳ ಪ್ರಕಾರ ಸರ್ಕಾರದ ನಾಲ್ಕು ಪ್ರಮುಖ ಖಾತೆಗಳಾದ ಗೃಹ ಇಲಾಖೆ, ರಕ್ಷಣಾ ಇಲಾಖೆ, ವಿತ್ತ ಇಲಾಖೆ ಮತ್ತು ವಿದೇಶಾಂಗ ಇಲಾಖೆಯ ಸಚಿವಸ್ಥಾನದಲ್ಲಿ ಯಾವುದೇ ಬದಲಾವಣೆಗಳಿಲ್ಲವಂತೆ. ಉಳಿದಂತೆ ಬಾಕಿ ಇರುವ ಖಾತೆಗಳ ಪೈಕಿ 19 ಖಾತೆಗಳು ಅದಲು-ಬದಲಾಗುವ ಸಾಧ್ಯತೆಗಳಿವೆ.
ಮುಂಬರುವ ಉತ್ತರ ಪ್ರದೇಶ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ತುಂಬಾ ಜಾಗರೂಕರಾಗಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದಾರೆ. ಹೀಗಾಗಿ ಈ ಭಾರಿಯ ಸಂಪುಟ ವಿಸ್ತರಣೆಯಲ್ಲಿ ಉತ್ತರ ಪ್ರದೇಶದ ಬಿಜೆಪಿ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳಿಗೆ ಪ್ರಮುಖವಾಗಿ ಮಣೆಹಾಕುವ ಸಾಧ್ಯತೆಗಳಿವೆ. ಇನ್ನು ಕರ್ನಾಟಕದಿಂದ ಸಚಿವರಾಗಿರುವ ದಾವಣಗೆರೆಯ ಜಿ.ಎಂ. ಸಿದ್ದೇಶ್ವರ್ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ದಟ್ಟವಾಗಿದ್ದು, ಇವರ ಬದಲು ವಿಜಯಪುರ ಸಂಸದ ರಮೇಶ್ ಜಿಗಜಿಣಗಿಯವರಿಗೆ ಸಚಿವಸ್ಥಾನ ಲಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಜಿಗಜಿಣಗಿ ಅವರಿಗೆ ಅಮಿತ್ ಶಾ ಅವರಿಂದ ದೆಹಲಿಗೆ ಬರುವಂತೆ ಬುಲಾವ್ ಬಂದಿದೆ. ಮತ್ತೊಂದೆಡೆ ಕೇಂದ್ರ ಸಚಿವರಾಗಿರುವ ಡಿವಿ ಸದಾನಂದಗೌಡ ಅವರ ಸ್ಥಾನ ಕೂಡ ಅತಂತ್ರ ಸ್ಥಿತಿಯಲ್ಲಿದೆ ಎಂದು ಹೇಳಲಾತ್ತಿದ್ದು, ಅವರ ಖಾತೆ ಬದಲಾವಣೆ ಅಥವಾ ಅವರನ್ನೇ ಸಚಿವ ಸ್ಥಾನದಿಂದ ಕೈಬಿಡುವ ಕುರಿತು ಮಾತುಗಳು ಕೇಳಿಬರುತ್ತಿವೆ.
ಕೊಕ್ ಪಡೆಯಲಿರುವ ಸಚಿವರು ಯಾರು?
ಇನ್ನು ಕೇಂದ್ರ ಸರ್ಕಾರದ ನಾಲ್ಕು ಪ್ರಮುಖ ಸಚಿವರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ಮನೋಹರ್ ಪರಿಕ್ಕರ್ ಮತ್ತು ಸುಷ್ಮಾ ಸ್ವರಾಜ್ ಅವರ ಸಚಿವ ಸ್ಥಾನಕ್ಕೆ ಹಾಗೂ ಖಾತೆಗಳಿಗೆ ಯಾವುದೇ ರೀತಿಯ ತೊಂದರೆ ಇಲ್ಲ. ಆದರೆ ಕೆಲಸ ಮಾಡದ ಮತ್ತು ವಿವಾದಗಳಿಗೆ ಕಾರಣವಾಗಿರುವ ಸಚಿವರ ಖಾತೆ ಬದಲಾವಣೆ ಅಥವಾ ಅವರನ್ನೇ ಸಚಿವ ಸ್ಥಾನದಿಂದ ಕೈಬಿಡುವ ಸಾಧ್ಯತೆಗಳಿವೆ. ಈ ಪೈಕಿ ಪ್ರಮುಖವಾಗಿ ಅತ್ಯಾಚಾರ ಆರೋಪ ಕೇಳಿಬಂದಿರುವ ಗುಜರಾತ್ ಮೂಲದ ಕೇಂದ್ರ ಸಚಿವ ನಿಹಾಲ್ ಚಂದ್ ಸೇರಿ ಕೆಲವು ಸಚಿವರನ್ನು ಕೈಬಿಡುವ ಸಾಧ್ಯತೆ ಮಾತ್ರ ನಿಚ್ಚಳವಾಗಿದೆ. ಅಂತೆಯೇ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಬಳಿ ಇರುವ ಹೆಚ್ಚುವರಿ ವಾರ್ತಾ ಖಾತೆಯನ್ನು ಬೇರೊಬ್ಬರಿಗೆ ಹಸ್ತಾಂತರಿಸುವ ಸಾಧ್ಯತೆಗಳಿವೆ.
ಅಂತೆಯೇ ಉತ್ತಮ ಕೆಲಸ ಮಾಡಿದ ಸಚಿವರ ಪಟ್ಟಿಯಲ್ಲಿ ಕೇಳಿಬರುತ್ತಿರುವ ಪೀಯೂಷ್ ಗೋಯಲ್ ರಿಗೆ ಸಂಪುಟ ದರ್ಜೆಗೆ ಭಡ್ತಿ ದೊರೆಯುವ ನಿರೀಕ್ಷೆ ಇದ್ದು, ಮೈತ್ರಿ ಪಕ್ಷವಾಗಿದ್ದರೂ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಕಿಡಿ ಕಾರುತ್ತಿರುವ ಶಿವಸೇನೆಯನ್ನು ತಣ್ಣಗಾಗಿಸಲು ಆ ಪಕ್ಷದ ಸಂಸದ ಅನಿಲ್ ದೇಸಾಯಿ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಸಾಧ್ಯತೆಗಳಿವೆ. ಸರ್ಕಾರದಲ್ಲಿ ಒಟ್ಟು 82 ಸಚಿವರನ್ನು ಹೊಂದಲು ಅವಕಾಶವಿದ್ದು, 2014ರಲ್ಲಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ 2014ರ ನವೆಂಬರ್‌ನಲ್ಲಿ ಮೊದಲ ಬಾರಿಗೆ ಸಂಪುಟ ವಿಸ್ತರಣೆ ಮಾಡಿತ್ತು.