ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ
ನವದೆಹಲಿ: ನಿಷೇಧಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದೀನ್ ನ ಕಮಾಂಡರ್ ಬುರ್ಹಾನ್ ವಾನಿ ಅವನ ಹತ್ಯೆಯ ನಂತರ ಕಾಶ್ಮೀರ ಕಣಿವೆಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದಿಂದ 20 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿರುವ ಹಿನ್ನಲೆಯಲ್ಲಿ ಪ್ರಜ್ಞಾಹೀನ ಹಿಂಸೆ ಮತ್ತು ಮುಗ್ಧ ಜನ ಪ್ರಾಣ ಕಳೆದುಕೊಳ್ಳುತ್ತಿರುವ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅತೀವ ದುಃಖ ವ್ಯಕ್ತಪಡಿಸಿದ್ದಾರೆ.
ಈ ಸಮಯದಲ್ಲಿ "ರಾಷ್ಟ್ರೀಯ ಭದ್ರತೆ ಜೊತೆಗೆ ಯಾವುದೇ ರಾಜಿ ಇಲ್ಲ; ಭಯೋತ್ಪಾದನೆ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ " ಎಂದು ಕೂಡ ಅವರು ಹೇಳಿದ್ದಾರೆ.
"ಹೀಗಿದ್ದೂ, ನಮ್ಮ ಹಲವಾರು ನಾಗರಿಕರ ಸಾವು ಮತ್ತು ಭದ್ರತಾ ಪಡೆಗಳ ಮೇಲಿನ ದಾಳಿ ನೋವುಂಟು ಮಾಡಿದೆ. ಜಮ್ಮು ಕಾಶ್ಮೀರದಲ್ಲಿ ಕಳೆದೆರಡು ದಶಕಗಳಿಂದ ಒಳ್ಳೆಯ ಬೆಳವಣಿಗೆಗಳು ಕಂಡಿವೆ. ಅಲ್ಲಿನ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ಮೂಲಕ ಕಣಿವೆಯ ಜನಗಳ ಆಕಾಂಕ್ಷೆಗಳನ್ನು ಪೂರೈಸಲು ಜನರು ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ನನ್ನ ಸಹೋದರ ಸಹೋದರಿಯರಲ್ಲಿ ಮನವಿ ಮಾಡುತ್ತೇನೆ" ಎಂದು ಸೋನಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.