ಲಂಡನ್: ಭಾರತದ ಹೈಕಮಿಷನರ್ ಹಾಜರಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ನನಗೂ ಆಹ್ವಾನವಿತ್ತು. ನಾನು ಕರೆಯದೇ ಹೋಗುವ ವ್ಯಕ್ತಿಯಲ್ಲ ಎಂದು ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಘೋಷಿತ ಅಪರಾಧಿ ಮದ್ಯದ ದೊರೆ ವಿಜಯ್ ಮಲ್ಯ ಅವರು ಸ್ಪಷ್ಟಪಡಿಸಿದ್ದಾರೆ.
ಕಳೆದ ಗುರುವಾರ ಹೈಕಮಿಷನರ್ ನವ್‌ತೇಜ್ ಸರಣ್ ಅವರು ಹಾಜರಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಿಜಯ್ ಮಲ್ಯ ಅವರು ಕಾಣಿಸಿಕೊಂಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯ ಶನಿವಾರ ಸ್ಪಷ್ಟೀಕರಣ ನೀಡಿ, ಆಹ್ವಾನಿತರ ಪಟ್ಟಿಯಲ್ಲಿ ಮಲ್ಯ ಅವರ ಹೆಸರಿರಲಿಲ್ಲ ಎಂದು ಸ್ಪಷ್ಟನೆಯನ್ನು ನೀಡಿತ್ತು.
ಇದಕ್ಕೆ ಪ್ರತಿಯಾಗಿ ವಿಜಯ್ ಮಲ್ಯ ಭಾನುವಾರ ಟ್ವೀಟ್ ಮಾಡಿದ್ದು, ‘ನನ್ನ ಬದುಕಲ್ಲಿ ಎಂದೂ ಅನಪೇಕ್ಷಿತ ಅತಿಥಿಯಾಗಿ ಹೋಗಿಲ್ಲ ಹಾಗೆ ಆಗಲು ಬಯಸುವುದೂ ಇಲ್ಲ’ ಎಂದು ಹೇಳಿದ್ದು, ತಾವು ಆಹ್ವಾನವಿದ್ದೇ ಸಮಾರಂಭಕ್ಕೆ ಹೋಗಿರುವುದಾಗಿ ಪುನರುಚ್ಚರಿಸಿದ್ದಾರೆ.
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಆಯೋಜಿಸಿದ್ದ, ಭಾರತೀಯ ಲೇಖಕ ಸುಹೇಲ್ ಸೇಟ್ ಅವರು ಪತ್ರಕರ್ತ ಸನ್ನಿ ಸೇನ್ ಅವರೊಡಗೂಡಿ ಬರೆದಿರುವ "ಮಂತ್ರಾಸ್ ಫಾರ್ ಸಕ್ಸಸ್: ಇಂಡಿಯಾಸ್ ಗ್ರೇಟೆಸ್ಟ್ ಸಿಇಓಸ್ ಟೆಲ್ ಯು ಹೌ ಟು ವಿನ್' ಎಂಬ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಭಾರತೀಯ ಹೈಕಮಿಶನರ್ ನವತೇಜ್ ಶರಣ್ ಅವರು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಪ್ರೇಕ್ಷಕರ ನಡುವೆ ಮಲ್ಯ ಕಾಣಿಸಿಕೊಳ್ಳುತ್ತಲೇ ನವ್‌ತೇಜ್ ಶರಣ್ ಅವರು ಹೊರನಡೆದಿದ್ದಾರೆ ಎಂದು ವಿದೇಶಾಂಗ ಸಚಿವಾಲಯವು ವಿವರಣೆ ನೀಡಿತ್ತು.
ಟೀಕೆ, ಸ್ಪಷ್ಟನೆ: ನವ್‌ತೇಜ್ ಸರಣ್ ಮತ್ತು ಮಲ್ಯ ಒಂದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು. ಇದಾದ ಬಳಿಕ ವಿದೇಶಾಂಗ ಸಚಿವಾಲಯವು ಈ ಬಗ್ಗೆ ಸ್ಪಷ್ಟೀಕರಣ ಬಿಡುಗಡೆ ಮಾಡಿತ್ತು.