ಪ್ರಧಾನ ಸುದ್ದಿ

ಹೈದರಾಬಾದ್ ವಿವಿ: ಆಹಾರ ಮತ್ತು ನೀರಿನ ಸೌಕರ್ಯ ಭಾಗಶಃ ಪುನಾರಂಭ

Guruprasad Narayana

ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯದ ೩೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಹಾರ ಮತ್ತು ನೀರಿನ ವ್ಯತ್ಯಯದಿಂದ ಅನುಭವಿಸಿದ್ದ ಸಂಕಷ್ಟಕ್ಕೆ ಗುರುವಾರ ಬೆಳಗ್ಗೆ ಭಾಗಶಃ ಪರಿಹಾರ ಸಿಕ್ಕಿದ್ದು, ಕೆಲವು ಪುರುಷರ ಮತ್ತು ಮಹಿಳೆಯರ ಊಟದ ಗೃಹಗಳಲ್ಲಿ ಮಾತ್ರ ಬೆಳಗಿನ ಉಪಹಾರ ನೀಡಲಾಗಿದೆ. ಶೌಚಾಲಯಗಳಲ್ಲಿ ನೀರಿನ ಸಂಪರ್ಕವನ್ನು ಮತ್ತೆ ಚಾಲ್ತಿಗೆ ತರಲಾಗಿದೆ.

ಉಪಕುಲಪತಿ ಅಪ್ಪಾರಾವ್ ಮಂಗಳವಾರ ಅಧಿಕಾರ ಪುನರ್ ಸ್ವೀಕರಿಸಿದಾಗಿನಿಂದಲೂ  ಹೈದರಾಬಾದ್ ವಿಶ್ವವಿದ್ಯಾಲಯ ರಣರಂಗವಾಗಿದ್ದು, ವಿದ್ಯಾರ್ಥಿಗಳ ಒಂದು ಗುಂಪು ಉಪಕುಲಪತಿಗಳ ನಿವಾಸದ ಮೇಲೆ ದಾಳಿ ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಪೊಲೀಸರ ಸರ್ಪಗಾವಲು ಇರಿಸಲಾಗಿದೆ. ತರಗತಿಗಳನ್ನು ರದ್ದುಪಡಿಸಿದ್ದು, ವಿಶ್ವವಿದ್ಯಾಲಯದ ಆವರಣಕ್ಕೆ ಹೊರಗಿನಿಂದ ಯಾರೂ ಬರದಂತೆ ತಡೆಯಲಾಗಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

ಈ ಘರ್ಷಣೆಯಲ್ಲಿ ನಮ್ಮ ಮೇಲು ದೌರ್ಜನ್ಯವೆಸಗಲಾಗಿದೆ ಎಂದು ಉಪನ್ಯಾಸಕರಲ್ಲದ ಸಿಬ್ಬಂದಿ ವರ್ಗ ಧರಣಿ ನಡೆಸಿದ್ದರಿಂದ, ಹಾಸ್ಟೆಲ್ ಗಳಲ್ಲಿ ಆಹಾರದ ಮತ್ತು ನೀರಿನ ವ್ಯತ್ಯಯ ಉಂಟಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೇ ಅಡುಗೆ ಮಾಡಿ ಪರಸ್ಪರ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿಗಳು ಬಾಟಲ್ ನೀರನ್ನು ಖರೀದಿಸಿ ಕುಡಿಯುವ ಅನಿವಾರ್ಯ ಸ್ಥಿತಿ ಬಂದಿದ್ದು, ಕೊಳ್ಳಲು ಶಕ್ತರಲ್ಲದ ವಿದ್ಯಾಥಿಗಳು ಶೌಚಾಲಯದಲ್ಲಿ ಸಿಗುವ ನೀರನ್ನೇ ಕುಡಿಯಬೇಕಾದ ಪರಿಸ್ಥಿತಿ ಒದಗಿದೆ.

ಅಂತರ್ಜಾಲ ಸೌಲಭ್ಯ ಕೂಡ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

SCROLL FOR NEXT