ಮಡಿಕೇರಿಯಲ್ಲಿ ಹಾಕಿ ಪಂದ್ಯಕ್ಕೆ ಚಾಲನೆ ನೀಡಿದ ಮನೋಹರ್ ಪರಿಕ್ಕರ್
ಮಡಿಕೇರಿ: ಕರ್ನಾಟಕ ಸರ್ಕಾರ ಮಹಾದಾಯಿ ವಿಷಯದಲ್ಲಿ ರಾಜಕೀಯ ಮಾಡದೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಭಾನುವಾರ ಹೇಳಿದ್ದಾರೆ.
ಭಾನುವಾರ ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ಯೋಜನೆ ಜಾರಿಗೆ ಕರ್ನಾಟಕ ಸರ್ಕಾರವು ಪ್ರಾಮಾಣಿಕ ಪ್ರಯತ್ನ ಮಾಡದೆ, ರಾಜಕೀಯ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಈಗ ನ್ಯಾಯಾಧೀಕರಣದ ಮುಂದಿದೆ. ಅಲ್ಲೇ ತೀರ್ಮಾನವಾಗಬೇಕು. ನಾನು ಗೋವಾ ಮುಖ್ಯಮಂತ್ರಿಯಾಗಿದ್ದಾಗ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದೆ, ಆದರೆ ಅಂದು ಕರ್ನಾಟಕ ಆಸಕ್ತಿ ತೋರಿರಲಿಲ್ಲ. ಹಾಗಾಗಿ, ಮಹಾದಾಯಿ ವಿಷಯದಲ್ಲಿ ರಾಜಕೀಯ ಬಿಟ್ಟು, ಸಮಸ್ಯೆ ಬಗೆಹರಿಸುವಲ್ಲಿ ಮುಂದಾಳತ್ವ ತೆಗೆದುಕೊಳ್ಳಬೇಕು ಎಂದು ಮನೋಹರ್ ಪರಿಕ್ಕರ್ ಸಲಹೆ ನೀಡಿದ್ದಾರೆ.
ಇನ್ನು ಅಗಸ್ಟಾ ಹಗರಣ ಕುರಿತು ಪ್ರತಿಕ್ರಯಿಸಿದ ಅವರು, ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಬಗ್ಗೆ ತರಾತುರಿಯಲ್ಲಿ ತನಿಖೆ ನಡೆಸುವುದಿಲ್ಲ. ಹಗರಣದಲ್ಲಿ ಭಾಗಿಯಾಗಿರುವವರನ್ನು ಬಂಧಿಸಬೇಕಾದರೆ, ಆಳವಾದ ತನಿಖೆ ನಡೆಯಬೇಕು ಎಂದು ಅವರು ತಿಳಿಸಿದ್ದಾರೆ.
ಎಲ್ಲೆಲ್ಲಿ ಹಣ ಹರಿದು ಹೋಗಿದೆ ಎಂಬುದನ್ನು ಪತ್ತೆ ಹಚ್ಚುವುದು ಸುಲಭದ ಕೆಲಸವಲ್ಲ. ಈ ಹಗರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬನನ್ನು ಬಂಧಿಸಬೇಕಾದರೆ, ಆಳವಾದ ತನಿಖೆ ನಡೆಸಬೇಕು. ಈ ಪ್ರಕರಣದಲ್ಲಿ ಭಾರತೀಯ ಬ್ಯಾಂಕುಗಳ ಮೂಲಕ ಲಂಚದ ಹಣ ಸಂದಾಯವಾಗಿಲ್ಲ. ಮಾರಿಷಸ್ ಮುಂತಾದ ರಾಷ್ಟ್ರಗಳ ಬ್ಯಾಂಕುಗಳಿಂದ ಆಗಿದೆ. ಅದು ಇಂಗ್ಲೆಂಡ್, ಇಟಲಿಯಿಂದಲೂ ಆಗಿರಬಹುದು ಎಂದು ಹೇಳಿದ್ದಾರೆ.
ಇನ್ನು ಆರೋಪಿಗಳ ಬಂಧನಕ್ಕೆ ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಕ್ಕೆ ಪ್ರತಿಕ್ರಯಿಸಿದ ಅವರು, ತರಾತುರಿ ತನಿಖೆ ನಡೆಸಿ ಕೆಲವರನ್ನು ಮಾತ್ರ ಬಂಧಿಸಿ, ಇನ್ನುಳಿದವರನ್ನು ಬಿಡುವ ಉದ್ದೇಶ ಹೊಂದಿಲ್ಲ. ಆಳವಾದ ತನಿಖೆ ನಡೆಸಿ ಪ್ರತಿಯೊಬ್ಬರನ್ನು ಬಂಧಿಸುವ ಉದ್ದೇಶ ಹೊಂದಿದ್ದೇವೆ. ಅಷ್ಟೇ ಅಲ್ಲದೇ ಪ್ರಚಾರದ ತನಿಖೆಯಲ್ಲಿ ನಮಗೆ ನಂಬಿಕೆ ಇಲ್ಲ. ಕೇಜ್ರಿವಾಲ್ ಕೇವಲ ಪ್ರಚಾರಕ್ಕಾಗಿ ಹಾಗೂ ತಮ್ಮತ್ತ ಗಮನ ಸೆಳೆಯಲು ಈ ರೀತಿ ಹೇಳಿಕೆ ನೀಡುತ್ತಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.