ಮುಂಬೈ: ದೇಶದ ವಿವಿಧ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಘೋಷಿತ ಅಪರಾಧಿ ಎಂದು ಗುರುವಾರ ಮುಂಬೈ ವಿಶೇಷ ಕೋರ್ಟ್ ಘೋಷಿಸಿದೆ.
ಬ್ಯಾಂಕ್ ಗಳಿಂದ ಸಾಲ ಪಡೆದು ವಂಚಿಸಿದ ಆರೋಪ ಎದುರಿಸುತ್ತಿರುವ ವಿಜಯ್ ಮಲ್ಯ ಅವರನ್ನು ಘೋಷಿತ ಅಪರಾಧಿ ಎಂದು ಘೋಷಿಸುವಂತೆ ಕೋರಿ ಜಾರಿ ನಿರ್ದೇಶನಾಲಯ(ಇಡಿ) ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ಪಿಎಂಎಲ್ ಎ ಕೋರ್ಟ್, ಮಧ್ಯದ ದೊರೆ ಅಪರಾಧಿ ಎಂದು ಘೋಷಿಸಿದೆ. ಅಲ್ಲದೆ ವಿಜಯ್ ಮಲ್ಯ ಅವರ ಚರಾಸ್ಥಿಯ ವಿವರ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದೆ.
ಇದೇ ವೇಳೆ ವಿಜಯ್ ಮಲ್ಯ ಅವರ ವಿದೇಶಿ ಆಸ್ತಿಯನ್ನು ಲಗತ್ತಿಸಬೇಕು ಎಂಬ ಜಾರಿ ನಿರ್ದೇಶನಾಲಯದ ಮನವಿಯನ್ನು ನ್ಯಾಯಾಧೀಶ ಪಿ.ಆರ್.ಭಾವ್ಕೆ ಅವರು ತಿರಸ್ಕರಿಸಿದ್ದಾರೆ.
ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಸೇರಿದಂತೆ ಹಲವು ವಾರಂಟ್ ಗಳು ಜಾರಿಯಾಗಿದ್ದು, ಅವರನ್ನು ಘೋಷಿತ ಅಪರಾಧಿ ಎಂದು ಘೋಷಿಸಬೇಕು ಎಂದು ಜಾರಿ ನಿರ್ದೇಶನಾಲಯ ಕೋರ್ಟ್ ಗೆ ಮನವಿ ಮಾಡಿತ್ತು. ಇಡಿ ಮನವಿಯನ್ನು ಕೋರ್ಟ್ ಪುರಸ್ಕರಿಸಿದ್ದು, ಈ ಆದೇಶವನ್ನು ಭಾರತ ಸರ್ಕಾರ ಇಂಗ್ಲೆಂಡ್ ಸರ್ಕಾರಕ್ಕೆ ರವಾನಿಸಲಿದೆ.
17 ವಿವಿಧ ಬ್ಯಾಂಕುಗಳಲ್ಲಿ 9000 ಕೋಟಿ ರುಪಾಯಿ ಸಾಲ ಪಡೆದಿರುವ ವಿಜಯ್ ಮಲ್ಯ ಈಗ ಲಂಡನ್ ನಲ್ಲಿ ನೆಲೆಸಿದ್ದಾರೆ. ಸಾಲಮರುಪಾವತಿ ಬಗ್ಗೆ ಹಲವು ಬಾರಿ ನೊಟೀಸ್ ಕಳುಹಿಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ಅನ್ನು ಸಹ ರದ್ದು ಮಾಡಲಾಗಿದೆ.