ಲಖನೌ: 100 ಪ್ರಯಾಣಿಕರ ಸಾವಿಗೆ ಕಾರಣವಾದ ಇಂದೋರ್-ಪಾಟ್ನಾ ರೈಲು ದುರಂತ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯತೆಗೆ ಸಾಕ್ಷಿ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಉತ್ತರ ಪ್ರದೇಶದ ಕಾನ್ಪುರದ ಬಳಿ ಹಳಿ ತಪ್ಪಿರುವ ಇಂದೋರ್-ಪಾಟ್ನಾ ಎಕ್ಸ್ ಪ್ರೆಸ್ ರೈಲು ದುರಂತಕ್ಕೆ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂದು ಕಾಂಗ್ರೆಸ್ ಮುಖಂಡ ಮಧು ಯಷ್ಕಿ ಗೌಡ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರಯಾಣಿಕರ ಸುರಕ್ಷತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದೇ ದುರಂತಕ್ಕೆ ಕಾರಣ. ಬುಲೆಟ್ ರೈಲು ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಮೊದಲು ಈಗಿರುವ ರೈಲ್ವೇ ವ್ಯವಸ್ಥೆಯ ಸುರಕ್ಷತೆಯನ್ನು ಸರಿಯಾಗಿ ನಿಭಾಯಿಸಲಿ. ಆ ಬಳಿಕ ಬುಲೆಟ್ ರೈಲಿನ ಬಗ್ಗೆ ಮಾತನಾಡಲಿ ಎಂದು ಅವರು ಕಿಡಿಕಾರಿದ್ದಾರೆ.
ರೈಲ್ವೇ ಇತಿಹಾಸದಲ್ಲಿಯೇ ಸಂಭವಿಸಿರುವ ಅತೀ ದೊಡ್ಡ ದುರಂತಗಳಲ್ಲಿ ಇಂದೋರ್-ಪಾಟ್ನಾ ಎಕ್ಸ್ ಪ್ರೆಸ್ ರೈಲು ದುರಂತ ಕೂಡ ಒಂದಾಗಿದ್ದು, ಪ್ರಯಾಣಿಕರ ಸಾವಿಗೆ ಕಾಂಗ್ರೆಸ್ ಪಕ್ಷ ಸಂತಾಪ ಸೂಚಿಸುತ್ತದೆ. ಸಾವಿಗೀಡಾದ ಮತ್ತು ಗಾಯಗೊಂಡ ಪ್ರಯಾಣಿಕರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಂತೆಯೇ ಹೆಚ್ಚು ಸಿಬ್ಬಂದಿಗಳೊಂದಿಗೆ ರಕ್ಷಣಾ ಕಾರ್ಯಾಚರಣೆ ತುರ್ತಾಗಿ ನಡೆಸುವಂತೆ ಅವರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ರೈಲ್ವೇಯಲ್ಲಿ 1.22 ಲಕ್ಷ ಹುದ್ದೆಗಳು ಭರ್ತಿಯಾಗಿಲ್ಲ: ಕಾಂಗ್ರೆಸ್
ಇದೇ ವೇಳೆ ರೈಲು ದುರಂತಕ್ಕೆ ಅಗತ್ಯ ಸಿಬ್ಬಂದಿಗಳ ಕೊರತೆಯೇ ಪ್ರಮುಖ ಕಾರಣ ಎಂದು ಹೇಳಿರುವ ಮಧು ಅವರು, ಬಾಕಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿದ್ದಾರೆ. ಇಲಾಖೆಯಲ್ಲಿ ಸುಮಾರು 1.22 ಲಕ್ಷ ಹುದ್ದೆಗಳು ನೇಮಕವಾಗದೇ ಹಾಗೆಯೇ ಉಳಿದಿವೆ. ಈ ಪೈಕಿ ಶೇ.72 ಹುದ್ದೆಗಳು ರೈಲ್ವೇ ಭದ್ರತಾ ಇಲಾಖೆಗೆ ಸಂಬಂಧಿಸಿದ್ದಾಗಿದ್ದು, ಕೇಂದ್ರ ಸರ್ಕಾರ ಕೂಡಲೇ ಬಾಕಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು ಮತ್ತು ಆ ಮೂಲಕ ಇಂತಹ ರೈಲು ದುರಂತಗಳನ್ನು ತಡೆಯಬೇಕು ಎಂದು ಹೇಳಿದ್ದಾರೆ.