ನವದೆಹಲಿ: ಕಾಳ ಧನಿಕರು ಹಾಗೂ ಕಪ್ಪುಹಣದ ಮೇಲೆ ಕೆಂಗಣ್ಣು ಬೀರಿದ್ದ ಕೇಂದ್ರ ಸರ್ಕಾರ ಹಳೆಯ ನೋಟುಗಳಿಗೆ ನಿಷೇಧ ಹೇರಿ, ಹೊಸ ನೋಟುಗಳನ್ನು ಪರಿಚಯಿಸಿತ್ತು. ಇದರ ಬೆನ್ನಲ್ಲೇ ಮದುವೆಗೆ ಏಕಕಾಲದಲ್ಲಿ 2.5 ಲಕ್ಷ ಹಣ ವಿತ್ ಡ್ರಾ ಮಾಡಬಹುದು ಎಂದು ಹೇಳಿತ್ತಾದರೂ ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಹತ್ತಾರು ಕಠಿಣ ಷರತ್ತುಗಳನ್ನು ವಿಧಿಸಿದೆ.
ಆರ್ ಬಿಐನ ಈ ನೂತನ ಕಠಿಣ ಷರತ್ತುಗಳು ಇದೀಗ ಗ್ರಾಹಕರ ತಲೆನೋವಿಗೆ ಕಾರಣವಾಗಿದ್ದು, ಆರ್ ಬಿಐನ ನಿಯಮಪಾಲನೆ ಸಾಧ್ಯವೇ ಎಂದು ಪ್ರಶ್ನಿಸುತ್ತಿದ್ದಾರೆ. ಇಷ್ಟಕ್ಕೂ ಮದುವೆ ಸಮಾರಂಭಕ್ಕಾಗಿ ವಿತ್ ಡ್ರಾ ಮಾಡುವ ಹಣದ ಮೇಲೆ ರಿಸರ್ವ್ ಬ್ಯಾಂಕ್ ವಿಧಿಸಿರುವ ಷರತ್ತುಗಳೇನು? ಇಲ್ಲಿದೆ ಅದರ ಸಂಪೂರ್ಣ ಮಾಹಿತಿ...
1.ನೋಟು ನಿಷೇಧ ಆದೇಶ ಹೊರಬಿದ್ದ ದಿನವಾದ ನವೆಂಬರ್ 8ರಂದು ಅಥವಾ ಅದಕ್ಕೂ ಮುನ್ನವೇ ಖಾತೆಯಲ್ಲಿ 2.5 ಲಕ್ಷ ರು. ಬ್ಯಾಲೆನ್ಸ್ ಹೊಂದಿರಬೇಕು. ಇಂತಹ ಹಣವನ್ನು ಮಾತ್ರ ಮದುವೆ ಸಮಾರಂಭಕ್ಕೆ ಬಳಸಿಕೊಳ್ಳಬಹುದು. ನವೆಂಬರ್ 8ರ ಬಳಿಕ ಖಾತೆಗೆ ಜಮೆಯಾದ ಹಣ ತೆಗೆಯಲು ಅವಕಾಶವಿಲ್ಲ.
2. ಡಿಸೆಂಬರ್ 30ರ ಒಳಗೆ ಮದುವೆ ನಡೆಯುವಂತಿದ್ದರೆ ಮಾತ್ರ ಹಣ ವಿತ್ಡ್ರಾ ಮಾಡಬಹುದು. ವಧು, ವರ ಅಥವಾ ಅವರ ತಂದೆ-ತಾಯಿ ಪೈಕಿ ಯಾರಾದರೂ ಒಬ್ಬರಿಗೆ ಮಾತ್ರ ಹಣ ವಿತ್ಡ್ರಾ ಮಾಡಲು ಅವಕಾಶ ನೀಡಲಾಗಿದೆ.
3. ಮದುವೆಗೆ ವಿತ್ಡ್ರಾ ಮಾಡಲಾದ ನಗದು ಹಣವನ್ನು ಬ್ಯಾಂಕ್ ಖಾತೆ ಹೊಂದಿರದ ವ್ಯಕ್ತಿಗಳಿಗಷ್ಟೇ ಪಾವತಿಸಬೇಕು. ಹಣ ಪಡೆದ ವ್ಯಕ್ತಿಗಳ ಹೆಸರನ್ನು ಕ್ಯಾಶ್ ವಿತ್ ಡ್ರಾಗಾಗಿ ಸಲ್ಲಿಸುವ ಅರ್ಜಿಯಲ್ಲಿ ತಪ್ಪದೇ ನಮೂದಿಸಬೇಕು. ಅಂತೆಯೇ ತಾವು ಹಣ ಪಾವತಿಸುತ್ತಿರುವ ವ್ಯಕ್ತಿಗಳಿಗೆ ಬ್ಯಾಂಕ್ ಖಾತೆ ಇಲ್ಲವೆಂಬುದನ್ನು ಅರ್ಜಿದಾರರು ಪ್ರಮಾಣೀಕರಿಸಿ ಸಹಿ ಹಾಕಬೇಕು.
4. ಒಂದು ವೇಳೆ ಹಣ ಪಡೆಯುವ ವ್ಯಕ್ತಿಗೆ ಬ್ಯಾಂಕ್ ಖಾತೆ ಇದ್ದರೆ ಆತನಿಗೆ ಚೆಕ್, ಆನ್ಲೈನ್ ಪೇಮೆಂಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಹಣ ರವಾನೆ ಮಾಡಬಹುದು.
5. ಅರ್ಜಿಯಲ್ಲಿ ವರ ಮತ್ತು ವಧುವಿನ ಹೆಸರನ್ನು ನಮೂದಿಸಬೇಕು. ಐಡಿ ಪ್ರೂಫ್, ವಿಳಾಸ ದಾಖಲೆ ಹಾಗೂ ಮದುವೆ ದಿನಾಂಕವನ್ನು ನಮೂದಿಸಬೇಕು. ಅರ್ಜಿ ಜತೆಗೆ ಮದುವೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನೀಡಬೇಕು. ಅದರಂತೆ ವಿವಾಹ ಆಹ್ವಾನ ಪತ್ರಿಕೆ, ಕಲ್ಯಾಣ ಮಂಟಪ, ಕೆಟರಿಂಗ್ ಇತ್ಯಾದಿ ಸೇವೆಗಳಿಗೆ ಅಡ್ವಾನ್ಸ್ ಹಣ ಪಾವತಿಸಿರುವ ಬಗ್ಗೆ ರಸೀದಿ ಒದಗಿಸ ಬೇಕು.
6. ಚೆಕ್, ಡ್ರಾಫ್ಟ್, ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್, ಎನ್ಇಎಫ್ಟಿ/ಆರ್ಟಿಜಿಎಸ್ ನಂತಹ ಕ್ಯಾಶ್ ಲೆಸ್ ಮಾರ್ಗಗಳ ಮೂಲಕ ಹಣ ಪಾವತಿಸುವಂತೆ ಬ್ಯಾಂಕ್ಗಳು ಗ್ರಾಹಕರಿಗೆ ಉತ್ತೇಜಿಸಬೇಕು. ಬ್ಯಾಂಕ್ಗಳು ಗ್ರಾಹಕರಿಂದ ಪಡೆದ ದಾಖಲೆಗಳನ್ನು ಸಂಗ್ರಹಿಸಿ, ಅಗತ್ಯಬಿದ್ದಾಗ ತೆರಿಗೆ ಅಧಿಕಾರಿಗಳಿಗೆ ಒದಗಿಸಬೇಕು.