ಬಿಹಾರ ಸಚಿವ ತೇಜ್ ಪ್ರತಾಪ್ ಸಿಂಗ್
ನವದೆಹಲಿ: ಬಿಹಾರ ಸಚಿವ ತೇಜ್ ಪ್ರತಾಪ್ ಸಿಂಗ್ ಅವರೊಂದಿಗೆ ಕ್ರಿಮಿನಲ್ ಆಪಾದಿತರು ಫೋಟೋ ತೆಗೆಸಿಕೊಂಡಿದ್ದಾರೆ ಎಂಬ ದೂರಿನ ಮೇರೆಗೆ, ಆ ಫೋಟೋ ತೆಗೆದಿರುವ ದಿನ ಅವರು ಆಪಾದಿತರಾಗಿದ್ದರೆ ಎಂಬುದನ್ನು ಧೃಢೀಕರಿಸಲು ವರದಿ ಸಲ್ಲಿಸುವಂತೆ ಸಿವಾನ್ ಸೆಷನ್ಸ್ ನ್ಯಾಯಾಧೀಶರಿಗೆ ಸೋಮವಾರ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಲಾಲು ಪ್ರಸಾದ್ ಪುತ್ರ ಬಿಹಾರ ಆರೋಗ್ಯ ಸಚಿವರೊಂದಿಗೆ ಕ್ರಿಮಿನಲ್ ಆರೋಪಿಗಳಾದ ಮೊಹಮದ್ ಕೈಫ್ ಮತ್ತು ಮೊಹಮದ್ ಜಾವೇದ್ ಇರುವ ಫೋಟೋಗಳ ಬಗ್ಗೆ ಸುಪ್ರೀಂ ಕೋರ್ಟ್ ವರದಿ ಕೇಳಿದೆ.
ಈ ಆಪಾದಿತರ ಬಗ್ಗೆ ವರದಿ ಕೇಳಿ ನ್ಯಾಯಾಧೀಶ ದೀಪಕ್ ಮಿಶ್ರಾ ಮತ್ತು ಅಮಿತಾವ್ ರಾಯ್ ಒಳಗೊಂಡ ನ್ಯಾಯಪೀಠ ಆದೇಶಿಸಿದೆ.
ಆ ಫೋಟೋ ತೆಗೆದ ದಿನ ಅವರ ವಿರುದ್ಧ ಆರೋಪಗಳಿರಲಿಲ್ಲ ಮತ್ತು ಅವರನ್ನು ಭೇಟಿ ಮಾಡಿದ್ದು ಒಂದು ಆಕಸ್ಮಿಕ ಎಂದು ತೇಜ್ ಪ್ರತಾಪ್ ಸಿಂಗ್ ಹಾಗು ಬಿಹಾರ ಸರ್ಕಾರ ಹೇಳಿವೆ.
ಮುಂದಿನ ವಿಚಾರಣೆಯಾದ ನವೆಂಬರ್ 28 ರೊಳಗೆ ವರದಿ ಸಲ್ಲಿಸುವಂತೆ ಕೋರ್ಟ್ ಆದೇಶಿಸಿದೆ. ಈ ಇಬ್ಬರು ಆಪಾದಿತರಲ್ಲಿ ಕೈಫ್ ಶರಣಾಗಿದ್ದು, ಜಾವೇದ್ ಇನ್ನು ತಲೆಮರೆಸಿಕೊಂಡಿದ್ದಾನೆ.
ಈ ಮಧ್ಯೆ ಪತ್ರಕರ್ತ ರಾಜದೇವ್ ರಂಜನ್ ಅವರ ಕೊಲೆ ಪ್ರಕರಣದ ಪ್ರಗತಿಯ ಬಗ್ಗೆಯೂ ಸಿಬಿಐ ನಿಂದ ಸುಪ್ರೀಂ ಕೋರ್ಟ್ ವರದಿ ಕೇಳಿದೆ. ಈ ಪ್ರಕರಣದಲ್ಲಿ ಕೈಫ್ ಮತ್ತು ಜಾವೇದ್ ಆಪಾದಿತರು.
ಸಂತ್ರಸ್ತನ ಪತ್ನಿ ಆಶಾ ರಂಜಾನ್, ಕೈಫ್, ಜಾವೇದ್, ತೇಜ್ ಪ್ರತಾಪ್ ಮತ್ತು ರಾಷ್ಟ್ರೀಯ ಜನತಾದಳದ ಮಾಜಿ ಸಂಸದ ಮತೊಬ್ಬ ಕೊಲೆ ಆಪಾದಿತ ಮೊಹಮದ್ ಶೋರಾಬುದ್ದೀನ್ ನಡುವೆ ನಿಕಟ ಸಂಪರ್ಕ ಇರುವುದನ್ನು ಕೋರ್ಟ್ ಗಮನಕ್ಕೆ ತರಲು ಹಾಕಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿತ್ತು. ಈ ಪ್ರಕರಣದ ತನಿಖೆಯನ್ನು ಬಿಹಾರದ ಹೊರಗೆ ನಡೆಸುವುದಕ್ಕೆ ಕೂಡ ಅವರು ಮನವಿ ಮಾಡಿದ್ದಾರೆ.
ಈ ತನಿಖೆ ಪೂರ್ಣಗೊಳಿಸುವುದಕ್ಕೆ ಸಿಬಿಐಗೆ ಮೂರು ತಿಂಗಳ ಅವಕಾಶವನ್ನು ಕೋರ್ಟ್ ನೀಡಿತ್ತು.