ನವದೆಹಲಿ: ಸಾಮಾಜಿಕ ಜಾಲತಾಣಗಳ ಕುಚೋದ್ಯಕ್ಕೆ ಸಾಮಾನ್ಯವಾಗಿ ಗುರಿಯಾಗುವ ಜನಪ್ರಿಯ ಲೇಖಕ ಚೇತನ್ ಭಗತ್, ಟ್ವಿಟರ್ ತಂಟೆಕೋರತನದ ಸುಡುಗಾಡಾಗಿ ಮಾರ್ಪಟ್ಟಿದೆ ಎಂದಿದ್ದಾರೆ. ತಾರೆಯರ ವಿರುದ್ಧ ಗುಂಪುಗಟ್ಟುವ ಟ್ವಿಟ್ಟರ್ ಬಳಕೆದಾರರ ವಿರುದ್ಧ ಹರಿಹಾಯ್ದಿರುವ ಚೇತನ್ 'ಇದು ಗುಂಪುಗಾರಿಕೆ ಮನಸ್ಥಿತಿಯಿಂದ' ಹುಟ್ಟುತ್ತದೆ ಎಂದಿದ್ದಾರೆ.
"ಇದು ತಂಟೆಕೋರತನದ ಸುಡುಗಾಡಾಗಿದೆ. ಕುಚೋದ್ಯಗಳು ಟ್ವಿಟ್ಟರ್ ಅನ್ನು ಎಷ್ಟು ಋಣಾತ್ಮಕವಾಗಿಸಿದೆ ಎಂದರೆ ಈ ವೇದಿಕೆಯಲ್ಲಿ ತಾರೆಗಳು ಹೆಚ್ಚು ಮಾತನಾಡುವುದನ್ನೇ ನಿಲ್ಲಿಸಿದ್ದಾರೆ" ಎಂದು ಭಗತ್ ಹೇಳಿದ್ದಾರೆ.
ತಾರೆಯರು ಈ 'ಋಣಾತ್ಮಕತೆ'ಯನ್ನು ದೂರವಿಡಲು ಇನ್ಸ್ಟಾಗ್ರಾಮ್ ತರಹದ ಇತರ ಜಾಲತಾಣಗಳತ್ತ ಹೊರಟಿದ್ದಾರೆ ಎನ್ನುವ ಅವರು "ಇದರಿಂದ ಟ್ವಿಟ್ಟರ್ ಇನ್ನೈದು ವರ್ಷದಲ್ಲಿ ತೊಂದರೆ ಅನುಭವಿಸಿ, ಆರ್ಕುಟ್ ಮತ್ತು ಮೈಸ್ಪೇಸ್ ನಂತೆ ಬಾಗಿಲು ಮುಚ್ಚಲಿದೆ. ಎಲ್ಲ ತಾರೆಯರು ಇನ್ಸ್ಟಾಗ್ರಾಮ್ ತರಹದ ಇತರ ಜಾಲತಾಣಗಳತ್ತ ಹೊರಟಿದ್ದಾರೆ. ಈಗ ಕೇವಲ ಕೆಲವು ಬರಹಗಾರರು ಮತ್ತು ಮಾಧ್ಯಮ ವ್ಯಕ್ತಿಗಳು ಇದ್ದಾರೆ. ಎಲ್ಲ ನಟರು ಮತ್ತು ತಾರೆಯರು ಟ್ವಿಟರ್ ತೊರೆದಿದ್ದಾರೆ" ಎಂದು ಕೂಡ ಅವರು ಹೇಳಿದ್ದಾರೆ.
ಇತ್ತೀಚೆಗಷ್ಟೇ 'ಒನ್ ಇಂಡಿಯನ್ ಗರ್ಲ್' ಎಂಬ ಪುಸ್ತಕ ಬರೆದಿದ್ದ ಚೇತನ್ ಭಗತ್ ಟ್ವಿಟರ್ ಮೂಲಕ ಭಾರಿ ಪ್ರಚಾರಕ್ಕೆ ಮುಂದಾಗಿದ್ದರು. ಆದರೆ ಪುಸ್ತಕವನ್ನು ವ್ಯಾಪಕವಾಗಿ ಟೀಕಿಸಿ, ಹಾಸ್ಯ ಮಾಡಿದ, ಕುಚೋದ್ಯ ಮಾಡಿದ ಟ್ವೀಟ್ ಗಳ ಸಂಖ್ಯೆಯೇ ಹೆಚ್ಚಿತ್ತು. ಅವರ ಪುಸ್ತಕ ಗುಜರಿ ಅಂಗಡಿಯಲ್ಲಿರುವಂತೆ ಫೋಟೋ ಶಾಪ್ ಮಾಡಿ, ಅವರ ಪುಸ್ತಕವನ್ನು ಓದುವ ಶಿಕ್ಷೆಯನ್ನು ಐಸಿಸ್ ನೀಡಿದೆ ಎಂಬಂತಹ ಕುಚೋದ್ಯಗಳು ವ್ಯಾಪಕವಾಗಿ ಕಂಡುಬಂದಿದ್ದವು.
ತಾವು ಮಾಡುವ ಟ್ವೀಟ್ ಗಳ ಬಗ್ಗೆ ಮಾತನಾಡಿರುವ ಚೇತನ್ "ಬರಹಗಾರರು ತಮಗೆ ಸರಿ ಎನ್ನಿಸಿದ್ದನ್ನು ಹೇಳಬೇಕು. ಅದು ಕೆಲವೊಮ್ಮೆ ಸರ್ಕಾರದ ಪರವಾಗಿರುತ್ತದೆ ಮತ್ತೆ ಕೆಲವೊಮ್ಮೆ ಸರ್ಕಾರದ ವಿರುದ್ಧವಾಗಿರುತ್ತದೆ. ನಾನು ಸರ್ಕಾರದ ವಿರುದ್ಧ ನಿಲುವನ್ನು ಮಾತ್ರ ತೆಗೆದುಕೊಳ್ಳುತ್ತೇನೆ ಎಂದು ಹೇಳುವ ಬರಹಗಾರರು ಮೂರ್ಖರು. ನನ್ನ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡರೆ ನಾನು ಅದನ್ನು ಟೀಕಿಸುತ್ತೇನೆ ಆದರೆ ಉಗ್ರ ದಾಳಿಗೆ ಪ್ರತಿಯಾಗಿ ದಾಳಿ ಮಾಡಿದರೆ ಅವರನ್ನು ಬೆಂಬಲಿಸುತ್ತೇನೆ" ಎಂದು ಕೂಡ ಅವರು ಹೇಳಿದ್ದಾರೆ.