ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳ ಮೇಲೆ ಕಲ್ಲೆಸೆಯುವ ಪ್ರತಿಭಟನಕಾರರ ಬಗ್ಗೆ ಕೈಗಾರಿಕಾ ಸಚಿವ ಚಂದ್ರ ಪ್ರಕಾಶ್ ಗಂಗಾ ಮಾಡಿರುವ ಪ್ರತಿಕ್ರಿಯೆಗಳು 'ಅಸಹ್ಯಕರ' ಎಂದು ಜಮ್ಮು ಕಾಶ್ಮೀರದ ಆಡಳಿತ ಪಿಡಿಪಿ ಪಕ್ಷ ವಾಗ್ದಾಳಿ ನಡೆಸಿದೆ.
ಕಲ್ಲೆಸೆಯುವ ಯುವಕರ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ಸಚಿವ "ಯಾರು ಒದೆಸಿಕೊಳ್ಳಲು ಯೋಗ್ಯರೋ ಅವರಿಗೆ ಮಾತಿನಿಂದ ಮನದಟ್ಟು ಮಾಡಲು ಸಾಧ್ಯವಿಲ್ಲ" ಎಂದಿದ್ದರು.
ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗುವ ಕೆಲವು ಯುವಕರಿಗೆ ಭದ್ರತಾ ಪಡೆಗಳು ಥಳಿಸಿದ ಮೇಲೆ ಭಾರತದ ಪರ ಘೋಷಣೆಗಳನ್ನು ಕೂಗಿದರು ಎಂದು ಕೂಡ ಅವರು ಪ್ರತಿಕ್ರಿಯಿಸಿದ್ದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪಿಡಿಪಿ ಉಪಾಧ್ಯಕ್ಷ ಸತ್ರಜ್ ಮದನಿ "ಈ ಅಸಹ್ಯಕರ ಮಾತುಗಳು ಸಮರ್ಥನೆಗೆ ಯೋಗವಲ್ಲವಷ್ಟೆ ಅಲ್ಲ, ಅಪಾಯಕಾರಿ ಎಂದು ಕೂಡ ಹೇಳಿದ್ದಾರೆ. ಕಾಶ್ಮೀರಿ ಯುವಕರ ಬಗ್ಗೆ ಇಂತಹ ಸಾಮಾನ್ಯವಾದ, ಅಸಹ್ಯಕರವಾದ ಮತ್ತು ಪ್ರಚೋದನಕಾರಿ ಹೇಳಿಕೆ ನೀಡುವುದು ಹಿರಿಯ ಸಚಿವರಿಗೆ ಶೋಭೆ ತರುವುದಿಲ್ಲ" ಎಂದಿದ್ದಾರೆ.
ಕಣಿವೆಯಲ್ಲಿ ಪ್ರಾಣ ಕಳೆದುಕೊಂಡ ಯುವಕರ ಬಗ್ಗೆ ದುಃಖ ವ್ಯಕ್ತಪಡಿಸಿದ ಸಂಪುಟ ನಿರ್ಧಾರಕ್ಕೆ ಸಚಿವನ ಹೇಳಿಕೆ ವಿರುದ್ಧವಾಗಿದೆ ಎಂದು ಕೂಡ ಮದನಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಜೊತೆಗೆ ಮುಫ್ತಿ ಮೊಹಮದ್ ಸಯೀದ್ ಸಖ್ಯ ಬೆಳೆಸಿದ್ದು ವಿವಿಧ ಭಾಗಗಳ ಜನರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಎಂದಿರುವ ಮದನಿ "ಜನರನ್ನು ಒಟ್ಟಿಗೆ ತರುವ ಬದಲು, ಇಂತಹ ಪ್ರಚೋದನಕಾರಿ ಹೇಳಿಕೆಗಳು ಈ ಕಂದಕವನ್ನು ಮತ್ತಷ್ಟು ಹೆಚ್ಚಿಸುತ್ತಿರುವುದು ದುರದೃಷ್ಟಕರ" ಎಂದಿದ್ದಾರೆ.