ಬೆಂಗಳೂರು: ಜಾನಪದ ಕ್ರೀಡೆ ಕಂಬಳವನ್ನು ಕಾನೂನುಬದ್ಧಗೊಳಿಸುವ ತಿದ್ದುಪಡಿ ಮಸೂದೆಗೆ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿದ್ದು ಕಂಬಳ ಮತ್ತು ಎತ್ತಿನಗಾಡಿ ಓಟಕ್ಕೆ ಕಾನೂನು ಬಲ ಸಿಕ್ಕಂತಾಗಿದೆ.
ವಿಧಾನಸಭೆಯಲ್ಲಿ ಪಶುಸಂಗೋಪನೆ ಸಚಿವ ಎ. ಮಂಜು ಅವರು ಪ್ರಾಣಿಗಳ ಹಿಂಸೆ ತಡೆ ತಿದ್ದುಪಡಿ ಕಾಯ್ದೆಯನ್ನು ಮಂಡಿಸಿದ್ದು ಎಲ್ಲಾ ಪಕ್ಷದ ಶಾಸಕರು ಪಕ್ಷಾತೀತವಾಗಿ ಬೆಂಬಲ ನೀಡಿದ್ದರಿಂದ ಮಸೂದೆ ಅಂಗೀಕಾರಗೊಂಡಿದೆ. ಈ ಮೂಲಕ ಕಂಬಳ ಕ್ರೀಡೆ ಮತ್ತು ಎತ್ತಿನಗಾಡಿ ಓಟಕ್ಕೆ ಕಾನೂನು ಬಲ ಸಿಕ್ಕಿದೆ. 1960ರಲ್ಲಿ ಜಾರಿಗೆ ಬಂದ ಪ್ರಾಣಿ ಹಿಂಸೆ ತಡೆ ಕಾಯ್ದೆಗೆ ಈ ಮೂಲಕ ತಿದ್ದುಪಡಿ ತರಲಾಗಿದೆ.
ಕರಾವಳಿ ಭಾಗದಲ್ಲಿ ಕಂಬಳ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಎತ್ತಿನ ಬಂಡಿಗಳ ಓಟ ಪ್ರಸಿದ್ಧವಾದ ಸಂಪ್ರದಾಯಿಕ ಆಚರಣೆಯಾಗಿದೆ. ಈ ಕ್ರೀಡೆಗಳು ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವುದರ ಜತೆಗೆ ಅಪರೂಪವಾದ ದೇಶೀಯ ಪ್ರಾಣಿ ತಳಿಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ.
ಸುಪ್ರೀಂಕೋರ್ಟ್ ನಿಷೇಧದಿಂದಾಗಿ ಜಲ್ಲಿಕಟ್ಟನ್ನು ಸಕ್ರಮಗೊಳಿಸುವ ಸಲುವಾಗಿ ತಮಿಳುನಾಡಿನಲ್ಲಿ ತೀವ್ರ ಪ್ರತಿಭಟನೆ ನಡೆದಿತ್ತು. ಅಲ್ಲಿನ ಸರ್ಕಾರ ವಿಧಾನಸಭೆಯಲ್ಲಿ ಜಲ್ಲಿಕಟ್ಟು ಮಸೂದೆಯನ್ನು ಅಂಗೀಕರಿಸಿತ್ತು. ಇದರ ಬಳಿಕ ಕರ್ನಾಟಕದಲ್ಲೂ ಕಂಬಳಕ್ಕೂ ಇದೇ ಮಾದರಿಯ ಶಾಸನವೊಂದನ್ನು ಜಾರಿಗೆ ತರಬೇಕೆಂಬ ಕೂಗು ಜೋರಾಗಿತ್ತು.