ವಿಶಾಖಪಟ್ಟಣಂ: ಶನಿವಾರ ರಾತ್ರಿ ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ರಾಯಘಡ ಜಿಲ್ಲಾಧಿಕಾರಿ ಪೂನಂ ಗುಹಾ ಅವರು ಮಾಹಿತಿ ನೀಡಿದ್ದು, ಈ ವರೆಗೂ 36 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ವೀಕ್ಷಿಸುತ್ತಿರುವ ಪೂನಂ ಗುಹಾ ಅವರು, ರಕ್ಷಣಾ ಕಾರ್ಯಾಚರಣೆ ಸಂಬಂಧ ಅಧಿಕಾರಿಗಳಿಗೆ ಸಾಥ್ ನೀಡಿದ್ದಾರೆ. ಇನ್ನು ರಾಷ್ಟ್ರೀಯ ವಿಪತ್ತು ನಿಗ್ರಹ ದಳದ ಒಂದು ಪಡೆಯನ್ನು ವಿಜಯನಗರಂ ಜಿಲ್ಲೆಗೆ ಕಳುಹಿಸಿಕೊಡಲಾಗಿದ್ದು, ಸ್ಥಳಕ್ಕೆ ದೌಡಾಯಿಸಿರುವ ಎನ್ ಡಿಆರ್ ಎಫ್ ತಂಡದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಜಗದಲ್ ಪುರ-ಭುವನೇಶ್ವರ ನಡುವೆ ಸಂಚರಿಸುತ್ತಿದ್ದ ರೈಲು ಹಿರಾಖಂಡ್ ಎಕ್ಸೆಪ್ರೆಸ್ ರೈಲು ಆಂಧ್ರಪ್ರದೇಶದ ರಾಯಘಡ ಸಮೀಪ ಕೂನೇರು ನಿಲ್ದಾಣದ ಬಳಿ ಹಳಿ ತಪ್ಪಿದೆ. ಜಗದಲ್ ಪುರ-ಭುವನೇಶ್ವರ ನಡುವೆ ಸಂಚರಿಸುತ್ತಿದ್ದ ರೈಲು ಹಿರಾಖಂಡ್ ಎಕ್ಸೆಪ್ರೆಸ್ ರೈಲು ನಿನ್ನೆ ರಾತ್ರಿ 11 ಗಂಟೆ ಸುಮಾರಿನಲ್ಲಿ ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಕೂನೇರು ರೈಲು ನಿಲ್ದಾಣದ ಸಮೀಪ ಹಳಿ ತಪ್ಪಿತ್ತು. ರೈಲಿನ ಎಂಜಿನ್ ಸೇರಿದಂತೆ 9 ಬೋಗಿಗಳು ಹಳಿ ತಪ್ಪಿದ ಪರಿಣಾಮ ರೈಲಿನಲ್ಲಿದ್ದ ಸುಮಾರು 36 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಅಂತೆಯೇ ಸುಮಾರು 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.
ಇನ್ನು ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆ ಕುರಿತ ವಿವರ ನೀಡಿರುವ ಇಲಾಖೆ, ಪಾರ್ವತಿಪುರಂ ಸರ್ಕಾರಿ ಆಸ್ಪತ್ರೆಯಲ್ಲಿ 22 ಮಂದಿ ಗಾಯಾಳುಗಳನ್ನು ದಾಖಲು ಮಾಡಲಾಗಿತ್ತು. ಈ ಪೈಕಿ 7 ಮಂದಿ ಗಾಯಾಳುಗಳು ಈಗಲೂ ಚಿಕಿತ್ಸೆ ಪಡೆಯುತ್ತಿದ್ದು, 8 ಗಾಯಾಳುಗಳನ್ನು ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ಇನ್ನು ರಾಯಘಡದ ಜಿಲ್ಲಾಸ್ಪತ್ರೆಯಲ್ಲಿ 32 ಮಂದಿ ದಾಖಲು ಮಾಡಲಾಗಿದ್ದು, 13 ಮಂದಿ ಗಂಭೀರ ಗಾಯಾಳುಗಳು, ಅಲ್ಪ ಪ್ರಮಾಣದ ಗಾಯಗಳಾಗಿರುವ 19 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ.