ಅಮರಾವತಿ: ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ನಡೆದ ಹಿರಾಖಂಡ್ ಎಕ್ಸೆಪ್ರೆಸ್ ರೈಲು ದುರಂತ ಸಂಬಂಧ ಕೇಂದ್ರ ರೈಲ್ವೇ ಇಲಾಖೆ ಪರಿಹಾರ ಘೋಷಣೆ ಮಾಡಿದೆ.
ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಈ ಬಗ್ಗೆ ಘೋಷಣೆ ಮಾಡಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರು, ಗಂಭೀರ ಗಾಯಾಳುಗಳಿಗೆ 50 ಮತ್ತು ಅಲ್ಪ ಪ್ರಮಾಣದ ಗಾಯಗಳಾಗಿರುವವರಿಗೆ ತಲಾ 25 ಸಾವಿರ ರು. ನೀಡುವುದಾಗಿ ಹೇಳಿದ್ದಾರೆ. ಅಂತೆಯೇ ರಕ್ಷಣಾ ಕಾರ್ಯಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ರೈಲ್ವೇ ಸುರಕ್ಷತಾ ಅಧಿಕಾರಿಗಳು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಅಂತೆಯೇ ರೈಲು ಅಪಘಾತ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ಇಲಾಖೆಯ ನುರಿತ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಸುರೇಶ್ ಪ್ರಭು ತಿಳಿಸಿದ್ದಾರೆ.
ಜಗದಲ್ ಪುರ-ಭುವನೇಶ್ವರ ನಡುವೆ ಸಂಚರಿಸುತ್ತಿದ್ದ ರೈಲು ಹಿರಾಖಂಡ್ ಎಕ್ಸೆಪ್ರೆಸ್ ರೈಲು ಆಂಧ್ರಪ್ರದೇಶದ ರಾಯಘಡ ಸಮೀಪ ಕೂನೇರು ನಿಲ್ದಾಣದ ಬಳಿ ಹಳಿ ತಪ್ಪಿದೆ. ಜಗದಲ್ ಪುರ-ಭುವನೇಶ್ವರ ನಡುವೆ ಸಂಚರಿಸುತ್ತಿದ್ದ ರೈಲು ಹಿರಾಖಂಡ್ ಎಕ್ಸೆಪ್ರೆಸ್ ರೈಲು ನಿನ್ನೆ ರಾತ್ರಿ 11 ಗಂಟೆ ಸುಮಾರಿನಲ್ಲಿ ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಕೂನೇರು ರೈಲು ನಿಲ್ದಾಣದ ಸಮೀಪ ಹಳಿ ತಪ್ಪಿತ್ತು. ರೈಲಿನ ಎಂಜಿನ್ ಸೇರಿದಂತೆ 9 ಬೋಗಿಗಳು ಹಳಿ ತಪ್ಪಿದ ಪರಿಣಾಮ ರೈಲಿನಲ್ಲಿದ್ದ ಸುಮಾರು 23 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಗಾಯಾಳುಗಳನ್ನು ಪಾರ್ವತಿಪುರಂ ಮತ್ತು ರಾಯಘಡ ಜಿಲ್ಲೆಯ ವಿವಿಧ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಂತೆಯೇ ಘಟನಾ ಸ್ಥಳಕ್ಕೆ 10ಕ್ಕೂ ಹೆಚ್ಚು ಆ್ಯಂಬುಲೆನ್ಸ್ ಗಳು ಹಾಗೂ ನುರಿತ ವೈದ್ಯರು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರೈಲಿನ 22 ಬೋಗಿಗಳ ಪೈಕಿ 9 ಬೋಗಿಗಳು ಹಳಿ ತಪ್ಪಿದೆ.