ಮುಜಾಫರ್ ನಗರ: ತಾವು ಆಯ್ಕೆಯಾದರೆ ಕೈರಾನಾದಲ್ಲಿ ಕರ್ಫ್ಯೂ ವಿಧಿಸುತ್ತೇನೆ ಎಂಬ ಹೇಳಿಕೆಗೆ ಇದಕ್ಕೂ ಮೊದಲು ವಿವಾದಾತ್ಮಕ ಬಿಜೆಪಿ ಶಾಸಕ ಸುರೇಶ್ ರಾಣಾ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈಗ ಗೋಹರ್ಪುರ ಗ್ರಾಮದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವುದಕ್ಕೆ ಅವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಕೊಳ್ಳಲಾಗಿದೆ.
ಗ್ರಾಮದಲ್ಲಿ ಅವರ ಹೆಸರಿನಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಹೊಸ ರಸ್ತೆಗೆ ಶಿಲಾನ್ಯಾಸ ಮಾಡಿದ್ದು, ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದಂತೆ ಎಂದು ಪೊಲೀಸರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಥಾನ ಭವನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಅವರು ಹೇಳಿದ್ದಾರೆ.
ಇದು ರಾಣಾ ವಿರುದ್ಧ ದಾಖಲಿಸಲಾಗಿರುವ ಮೂರನೇ ಪ್ರಕರಣ. ೨೦೧೩ ರಲ್ಲಿ ಮುಜಾಫರ್ ನಗರ ಗಲಭೆ ಪ್ರಕರಣ ಮತ್ತು ಕಳೆದ ಶನಿವಾರ ಸಾರ್ವಜನಿಕ ಸಭೆಯಲ್ಲಿ ಮಾಡಿದ ವಿವಾದಾತ್ಮಕ ಹೇಳಿಕೆಗೂ ಅವರ ವಿರುದ್ಧ ದೂರು ದಾಖಲಾಗಿದೆ.
"ನಾನು (ಉತ್ತರಪ್ರದೇಶ ಚುನಾವಣೆಯಲ್ಲಿ) ಗೆದ್ದರೆ ಕೈರಾನ, ದಿಯೋಬ್ಯಾಂಡ್ ಮತ್ತು ಮೊರಾದಾಬಾದ್ ನಲ್ಲಿ ಕರ್ಫ್ಯೂ ವಿಧಿಸಲಾಗುತ್ತದೆ" ಎಂದು ಶನಿವಾರ ರಾಣಾ ಹೇಳಿದ್ದರು.
ಇದಕ್ಕೆ ಐಪಿಸಿ ೫೦೫ (ಗಲಭೆಗೆ ಚಿತಾವಣೆ ನೀಡುವ ಹೇಳಿಕೆ), ಸೆಕ್ಷನ್ ೧೨೫ (ಚುನಾವಣೆಯ ಸಮಯದಲ್ಲಿ ಕೋಮು ದ್ವೇಷ ಹಬ್ಬಿಸುವುದು) ಅಡಿಯಲ್ಲಿ ರಾಣಾ ವಿರುದ್ಧ ಸೋಮವಾರ ಪ್ರಕರಣ ದಾಖಲಿಸಕೊಳ್ಳಲಾಗಿದೆ ಎಂದು ಥಾನ ಭವನ ಸರ್ಕಲ್ ಅಧಿಕಾರಿ ಸುನಿಲ್ ಕುಮಾರ್ ತ್ಯಾಗಿ ಹೇಳಿದ್ದಾರೆ.