ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ತನ್ನ ನಾಗರಿಕರು ಪಾಕಿಸ್ತಾನ , ಆಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶಕ್ಕೆ ಪ್ರವಾಸ ಮಾಡಲು ಎಚ್ಚರಿಕೆ ಸೂಚನೆ ನೀಡಿರುವ ಆಮೆರಿಕಾ, ಭಾರತದಲ್ಲಿಯೂ ತೀವ್ರವಾದಿ ಬಣಗಳು ಸಕ್ರಿಯಾಗಿವೆ ಎಂದಿದೆ.
ಆರು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ನಾಗರಿಕರು ಅಮೆರಿಕಾ ಪ್ರವೇಶಿಸುವದರಿಂದ ತಾತ್ಕಾಲಿಕವಾಗಿ ನಿಷೇಧಿಸುವ ಪರಿಷ್ಕೃತ ಆಡಳಿತ ಆದೇಶಕ್ಕೆ ಈಗ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದು, ಅಧಿಕೃತ ವೀಸಾ ಹೊಂದಿರುವವರಿಗೆ ಮಾತ್ರ ಇದರಿಂದ ವಿನಾಯಿತಿ ನೀಡಲಾಗಿದೆ. ಇದರ ಬೆನ್ನಲ್ಲೇ ಅಮೆರಿಕಾ ಈಗ ದಕ್ಷಿಣ ಏಷ್ಯಾ ದೇಶಗಳ ಪ್ರವಾಸಕ್ಕೆ ತನ್ನ ನಾಗರಿಕೆಗೆ ಎಚ್ಚರಿಕೆಯ ಅಧಿಸೂಚನೆ ಹೊರಡಿಸಿದೆ.
"ಅಮೆರಿಕಾಗೆ ಸಂಬಂಧಿಸಿದ ತಾಣಗಳು, ನಾಗರಿಕರು ಮತ್ತು ಹಿತಾಸಕ್ತಿಯ ಮೇಲೆ ದಕ್ಷಿಣ ಏಷ್ಯಾದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಗುಂಪುಗಳು ಈ ಪ್ರದೇಶಗಳಲ್ಲಿ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಅಮೆರಿಕಾ ಸರ್ಕಾರ ಗ್ರಹಿಸಿದೆ. ಅಮೆರಿಕಾ ನಾಗರಿಕರು ಆಫ್ಘಾನಿಸ್ಥಾನಕ್ಕೆ ಪ್ರವಾಸ ಮಾಡುವುದರಿಂದ ದೂರವುಳಿಯುವುದು ಒಳ್ಳೆಯದು, ಏಕೆಂದರೆ ಈ ದೇಶದ ಯಾವ ಭಾಗವು ಹಿಂಸೆಯಿಂದ ಮುಕ್ತವಲ್ಲ" ಎಂದು ಅಮೆರಿಕಾ ಸ್ಟೇಟ್ ಡಿಪಾರ್ಟ್ಮೆಂಟ್ ಸೋಮವಾರ ನೀಡಿದ ವಿಶ್ವವ್ಯಾಪಿ ಎಚ್ಚರಿಕೆಯಲ್ಲಿ ತಿಳಿಸಿದೆ.
"ಹಲವಾರು ಸಂಘಟಿತ ಭಯೋತ್ಪಾದಕ ಸಂಸ್ಥೆಗಳು, ಪ್ರತ್ಯೇಕವಾದಿ ಬಣಗಳು, ಮತ್ತಿತರು ಭಯೋತ್ಪಾದಕರು ಪಾಕಿಸ್ತಾನದಲ್ಲಿ ಅಮೆರಿಕಾ ನಾಗರಿಕರಿಗೆ ಅಪಾಯವನ್ನೊಡ್ಡಿದ್ದಾರೆ".
"ಇತ್ತೀಚಿನ ತುರ್ತು ಸಂದೇಶದಲ್ಲಿ ಹೇಳಿರುವಂತೆ ಭಾರತದಲ್ಲಿ ಕೂಡ ತೀವ್ರವಾದಿ ಬಣಗಳು ಸಕ್ರಿಯವಾಗಿವೆ. ಬಾಂಗ್ಲಾದೇಶದಲ್ಲಿ ಭಯೋತ್ಪಾದಕರು ವಿವಿಧ ಗುರಿಗಳು ಮತ್ತು ಸಂಸ್ಥೆಗಳ ಮೇಲೆ ದಾಳಿ ಮಾಡಿದ್ದಾರೆ" ಎಂದು ಕೂಡ ಎಚ್ಚರಿಕೆಯ ಅಧಿಸೂಚನೆ ತಿಳಿಸಿದೆ.