ಪ್ರಧಾನ ಸುದ್ದಿ

ಮೋದಿ ಅವರ ಡಿಮಾನೆಟೈಸೇಶನ್, ಡಿಜಿಟಲ್ ಅಭಿಯಾನಗಳನ್ನು ಪ್ರಶಂಸಿಸಿದ ಮುಖೇಶ್ ಅಂಬಾನಿ

Guruprasad Narayana
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ಹಿಂಪಡೆತ ನಿರ್ಧಾರ ಮತ್ತು ಡಿಜಿಟಲ್ ಅಭಿಯಾನಗಳಿಗಾಗಿ ರಿಲಾಯನ್ಸ್ ಉದ್ದಿಮೆಗಳ ಅಧ್ಯಕ್ಷ ಮುಖೇಶ್ ಅಂಬಾನಿ ಶನಿವಾರ ಪ್ರಶಂಸಿಸಿದ್ದಾರೆ. 
"ಡಿಮಾನೆಟೈಸೇಶನ್ ಗೆ ಧನ್ಯವಾದಗಳು. ಭಾರತ ನಗದು ಆರ್ಥಿಕತೆಯಿಂದ, ಡಿಜಿಟಲ್ ಮಾದರಿಯ ಅಗತ್ಯ ಮಾತ್ರ ನಗದು ಆರ್ಥಿಕತೆಯತ್ತ ದಾಪುಗಾಲು ಇರಿಸಿದೆ. ಏನನ್ನು ಉತ್ಪಾದಿಸದೆ ಇದ್ದ ಹಣವನ್ನು ಉತ್ಪಾದನೆಯ ಬಳಕೆಗೆ ಹೂಡುವಂತೆ ಮಾಡಿದೆ" ಎಂದು ಇಂಡಿಯಾ ಟುಡೇ ಕಾನ್ಕ್ಲೇವ್ ನಲ್ಲಿ ಅಂಬಾನಿ ಹೇಳಿದ್ದಾರೆ. 
ಇಲ್ಲಿಯವರೆಗೂ ಸಾಲ ಅಲ್ಪಪ್ರಮಾಣದಲ್ಲಿದ್ದು, ಹೆಚ್ಚು ಮೌಲ್ಯಯುತವಾಗಿತ್ತು ಮತ್ತು ಕೆಲವೇ ಜನರಿಗೆ ಸಿಗುತ್ತಿತ್ತು "ಮುಂದಿನ ವರ್ಷಗಳಲ್ಲಿ, ಆಧಾರ್ ಗುರುತಿನ ಚೀಟಿಯ ಆಧಾರದೊಂದಿಗೆ ಕೆಲವೇ ನಿಮಿಷಗಳಲ್ಲಿ ಮೊಬೈಲ್ ಫೋನ್ ಬಳಸಿ ಸಾಲ ಪಡೆಯುವುದಕ್ಕೆ ಸಾಧ್ಯವಾಗುತ್ತದೆ" ಎಂದು ಭಾರತದ ಅತಿ ದೊಡ್ಡ ಶ್ರೀಮಂತ ಹೇಳಿದ್ದಾರೆ. 
ನೋಟು ಹಿಂಪಡೆತ ನಿರ್ಧಾರ ಸಾಮನ್ಯರಿಗೆ ತೊಂದರೆ ನೀಡಿದ್ದರ ಹೊರತಾಗಿಯೂ ಉತ್ತರಪ್ರದೇಶದಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ಜಯಗಳಿಸಿದ್ದರ ಬಗ್ಗೆ ಪ್ರಶ್ನಿಸಿದಾಗ "ದೇಶದ ಜನರನ್ನಷ್ಟೇ ಅಲ್ಲ, ವಿಶ್ವ ಮತ್ತು ತಂತ್ರಜ್ಞಾನವನ್ನು ಕೂಡ ಅರ್ಥ ಮಾಡಿಕೊಳ್ಳುವ ಮುಖಂಡ ಸಿಕ್ಕಿರುವದು ನಮ್ಮ ಅದೃಷ್ಟ" ಎಂದು ಅಂಬಾನಿ ಬಣ್ಣಿಸಿದ್ದಾರೆ. 
"ನನಗೆ ಹೆಚ್ಚು ಆಪ್ತವಾದ ವಿಷಯವೆಂದರೆ ಪ್ರಧಾನಿ ಅಮೆರಿಕಾಗೆ ಭೇಟಿ ಕೊಟ್ಟಾಗ (ಆಗ ಬರಾಕ್ ಒಬಾಮ ಅಮೆರಿಕಾದ ಅಧ್ಯಕ್ಷರಾಗಿದ್ದರು), ರಾತ್ರಿ ಔತಣಕೂಟದಲ್ಲಿ ಅವರು ದೇಶದ ಅಭಿವೃದ್ಧಿಗೆ ಮತ್ತು ಬಡ ಜನರಿಗೆ ಸಹಾಯವಾಗಬಲ್ಲ ತಂತ್ರಜ್ಞಾನದ ಬಗ್ಗೆ ಚರ್ಚಿಸಿದ್ದು" ಎಂದು ಕೂಡ ಅಂಬಾನಿ ಹೇಳಿದ್ದಾರೆ. 
SCROLL FOR NEXT