ನವದೆಹಲಿ: ಕಾವೇರಿ ನದಿ ನೀರು ಹಂಚಿಕೆವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ರಾಜ್ಯಕ್ಕೆ ಪ್ರತಿನಿತ್ಯ 2 ಸಾವಿರ ಕ್ಯೂಸೆಕ್ ನೀರು ಹರಿಸುವ ಆದೇಶ ಮುಂದುವರೆಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ಸೂಚನೆ ನೀಡಿದೆ.
ಕಾವೇರಿ ವಿವಾದ ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ಜುಲೈ 11 ರಿಂದ ಎಲ್ಲಾ ಮೇಲ್ಮನವಿಗಳ ಅಂತಿಮ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಅಲ್ಲದೆ, ಆದೇಶ ಹೊರಡಿಸುವವರೆಗೂ ಈ ಹಿಂದೆ ನೀಡಿದ್ದ ದಿನಂಪ್ರತಿ 2 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವ ಆದೇಶವನ್ನು ಮುಂದುವರೆಸುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಕಾವೇರಿ ನದಿ ನೀರು ವಿವಾದದ ಮೇಲ್ಮನವಿಗಳ ಅರ್ಜಿಯ ವಿಚಾರಣೆಯನ್ನು 15 ದಿನಗಳ ಕಾಲ ನಡೆಸುವುದಾಗಿ ಪೀಠ ಹೇಳಿದೆ. ಪ್ರಕರಣದ ವಿಚಾರಣೆ ವೇಳೆ ತಮಿಳುನಾಡು ರಾಜ್ಯ ಪರ ವಕೀಲ ಶೇಖರ್ ನಫ್ಡೆ ಅವರು, ಕರ್ನಾಟಕ ನೀರು ಬಿಡುವ ಕುರಿತು ಸುಪ್ರೀಂಕೋರ್ಟ್ ಆದೇಶ ಪಾಲಿಸುತ್ತಿಲ್ಲ ಎಂದು ವಾದಿಸಿದ್ದಾರೆ.