ಪ್ರಧಾನ ಸುದ್ದಿ

ಭಾರತೀಯ ಯೋಧರ ಶಿರಚ್ಛೇದ: ಪಾಕ್ ವಿರುದ್ಧ ಪ್ರತೀಕಾರದ ಸೂಚನೆ ನೀಡಿದ ಸೇನಾ ಮುಖ್ಯಸ್ಥ

Lingaraj Badiger
ನವದೆಹಲಿ: ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಭಾರತೀಯ ಸೇನೆ ಕಾರ್ಯಾಚರಣೆ ನಡೆಸುವ ಮುನ್ನ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳುವ ಮೂಲಕ ಇಬ್ಬರು ಭಾರತೀಯ ಯೋಧರ ಶಿರಚ್ಛೇದ ಮಾಡಿದ ಪಾಕಿಸ್ತಾನ ಸೇನೆಯ ವಿರುದ್ಧ ಸೇಡು ತೀರಿಸಿಕೊಳ್ಳುವ ಸೂಚನೆ ನೀಡಿದ್ದಾರೆ.
ಪಾಕಿಸ್ತಾನದ ಪಾಶವೀ ಕೃತ್ಯಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೀರಿ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾವತ್ ಅವರು, ನೆರೆಯ ದೇಶದ ಅಮಾನವೀಯ ಕೃತ್ಯಕ್ಕೆ ನಮ್ಮ ಶಸಸ್ತ್ರ ಪಡೆಗಳು ಪರಿಣಾಮಕಾರಿ ಪ್ರತಿಕ್ರಿಯೆ ನೀಡಲಿವೆ ಎಂದು ಹೇಳಿದ್ದಾರೆ.
'ಮುಂದೆ ಏನು ಮಾಡುತ್ತೇವೆ ಎಂಬುದನ್ನು ನಾವು ಈಗಲೇ ಹೇಳುವುದಿಲ್ಲ. ಕಾರ್ಯಾಚರಣೆ ನಡೆಸಿದ ನಂತರವೇ ಹೇಳುತ್ತೇವೆ' ಎಂದು ರಾವತ್ ತಿಳಿಸಿದ್ದಾರೆ.
'ಈ ರೀತಿಯ ಅಮಾನವೀಯ ಕೃತ್ಯಗಳು ನಡೆದಾಗ ನಾವೂ ಸಹ ಪ್ರತೀಕಾರದ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ' ಎಂದು ಸೇನಾ ಮುಖ್ಯಸ್ಥರು ವರದಿಗಾರರಿಗೆ ತಿಳಿಸಿದ್ದಾರೆ.
ಕಳೆದ ಸೋಮವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್ ನ ಕೃಷ್ಣ ಘಾಟಿ ಸೆಕ್ಟರ್ ನಲ್ಲಿ ಭಾರತದ ಭೂಪ್ರದೇಶಕ್ಕೆ ನುಗ್ಗಿ ಅಪ್ರಚೋದಿತ ದಾಳಿ ನಡೆಸಿದ್ದ ಪಾಕಿಸ್ತಾನ ಸೇನೆ, ಇಬ್ಬರು ಯೋಧರ ಅಂಗಾಂಗಗಳನ್ನು ಕತ್ತರಿಸಿತ್ತು. ಪಾಕಿಸ್ತಾನ ಸೇನೆಯ ಈ ಕೃತ್ಯವನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಇದೊಂದು ಪಾಶವೀ ಕೃತ್ಯ ಮತ್ತು ಅಮಾನವೀಯ ನಡುವಳಿಕೆ ಎಂದು ಹೇಳಿದೆ.
SCROLL FOR NEXT