ನವದೆಹಲಿ: ದೇಶಾದ್ಯಂತ ತೀವ್ರ ಸಂಚಲನ ಉಂಟು ಮಾಡಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ಸುಪ್ರೀಂ ಕೋರ್ಟ್ ಶುಕ್ರವಾರ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದೆ. ಆದರೆ ಅಪರಾಧಿಗಳ ಪರ ವಕೀಲರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೇವಲ ಸಮಾಜಕ್ಕೆ ಸಂದೇಶ ನೀಡುವುದಕ್ಕಾಗಿ ಕೋರ್ಟ್ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿದಿದೆ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ವರದಿಗಾರರಿಗೆ ಪ್ರತಿಕ್ರಿಯಿಸಿದ ಅಪರಾಧಿಗಳ ಪರ ವಕೀಲ ಎಪಿ ಸಿಂಗ್ ಅವರು, ನಮಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸುತ್ತೇವೆ ಎಂದಿದ್ದಾರೆ.
ಸಮಾಜಕ್ಕೆ ಒಂದು ಸಂದೇಶ ನೀಡಬೇಕು ಎಂಬ ಕಾರಣಕ್ಕೆ ನೀವು ಯಾರನ್ನೊ ಗಲ್ಲಿಗೆ ಹಾಕಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ದೇಶದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಇದೆ ಎಂದು ಎಪಿ ಸಿಂಗ್ ಅವರು ಹೇಳಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಮಹಾತ್ಮಗಾಂಧಿ ಅವರ ಸಿದ್ಧಾಂತವನ್ನು ಕಡೆಗಣಿಸಲಾಗಿದೆ ಎಂದಿದ್ದಾರೆ.
ಇದೇ ವಕೀಲರು ಈ ಹಿಂದೆ ಸಾಮೂಹಿಕ ಅತ್ಯಾಚಾರ ಘಟನೆಗೆ ಸಂತ್ರಸ್ಥೆಯನ್ನೇ ದೂರಿದ್ದಲ್ಲದೆ, ಒಂದು ವೇಳೆ ತನ್ನ ಮಗಳು ತಂದೆ ಅಥವಾ ಸಹೋದರನನ್ನು ಬಿಟ್ಟು ಇತರರರೊಂದಿಗೆ ಹೊರಗಡೆ ಹೋಗಿದ್ದರೆ ಸುಟ್ಟು ಹಾಕುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.