ಚೆನ್ನೈ: ನ್ಯಾಯಾಂಗ ನಿಂದನೆ ಆರೋಪದ ಮೇಲೆ ಸುಪ್ರೀಂ ಕೋರ್ಟ್ ನಿಂದ 6 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿರುವ ವಿವಾದಾತ್ಮಕ ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಅವರು ಬುಧವಾರ ಬಿಲ್ ಪಾವತಿಸದೆ ಸರ್ಕಾರಿ ಅತಿಥಿ ಗೃಹ ಖಾಲಿ ಮಾಡಿದ್ದಾರೆ.
ನಿನ್ನೆ ಚೆನ್ನೈಗೆ ಆಗಮಿಸಿದ್ದ ಕರ್ಣನ್ ಅವರು ಚೆಪೌಕ್ ನಲ್ಲಿರುವ ರಾಜ್ಯ ಸರ್ಕಾರದ ಅತಿಥಿಗೃಹದಲ್ಲಿ ತಂಗಿದ್ದರು. ಆದರೆ ಇಂದು ಬೆಳಗ್ಗೆ ಅತಿಥಿ ಗೃಹದ ಯಾವುದೇ ಸಿಬ್ಬಂದಿಗೆ ಮಾಹಿತಿ ನೀಡದೆ ಹೊರಟು ಹೋಗಿದ್ದಾರೆ.
ಅತಿಥಿ ಗೃಹದ ಮೂಲಗಳ ಪ್ರಕಾರ, ಕರ್ಣನ್ ಅವರು, ಆಂಧ್ರಪ್ರದೇಶದ ಶ್ರೀಕಾಲಹಸ್ತಿ ದೇವಸ್ಥಾನಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಆದರೆ ಪೊಲೀಸ್ ಮೂಲಗಳ ಪ್ರಕಾರ, ವಿವಾದಾತ್ಮಕ ನ್ಯಾಯಮೂರ್ತಿಗಳು ತಮ್ಮ ಸ್ವಗ್ರಾಮ ಕೂಡಲೂರು ಜಿಲ್ಲೆಯ ವಿರುಧಾಚಲಂಗೆ ತೆರಳಿದ್ದಾರೆ ಎನ್ನಲಾಗಿದೆ.
ಕರ್ಣನ್ ಅವರು ತಮ್ಮ ಇಬ್ಬರು ವಕೀಲರೊಂದಿಗೆ ಇಲ್ಲಿಗೆ ಆಗಮಿಸಿದ್ದು, ಅತಿಥಿಗೃಹವನ್ನು ಇದುವರೆಗೂ ಅಧಿಕೃತವಾಗಿ ತೆರವು ಮಾಡಿಲ್ಲ ಎಂದು ಅತಿಥಿಗೃಹದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ ನ್ಯಾಯಮೂರ್ತಿ ಕರ್ಣನ್ ಬಂಧನಕ್ಕಾಗಿ ಪಶ್ಚಿಮ ಬಂಗಾಳ ಪೊಲೀಸ ಮಹಾ ನಿರ್ದೇಶಕರು ನಾಲ್ವರ ತಂಡ ರಚಿಸಿದ್ದು, ಆ ತಂಡ ಇಂದು ಚೆನ್ನೈಗೆ ಆಗಮಿಸಿದೆ. ಕೋಲ್ಕತಾ ಪೊಲೀಸರು ತಮಿಳುನಾಡು ಪೊಲೀಸರ ನೆರವು ಪಡೆದು ನ್ಯಾ,ಕರ್ಣನ್ ಅವರನ್ನು ಬಂಧಿಸುವ ಸಾಧ್ಯತೆ ಇದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ವಿರುದ್ಧವೇ ಹಲವು ಆದೇಶ ನೀಡಿದ್ದ ನ್ಯಾ.ಕರ್ಣನ್ ಅವರಿಗೆ ನಿನ್ನೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಏಳು ನ್ಯಾಯಮೂರ್ತಿಗಳ ಸುಪ್ರೀಂ ಪೀಠ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಅಲ್ಲದೆ ಅವರನ್ನು ವಶಕ್ಕೆ ಪಡೆಯುವಂತೆ ಪಶ್ಚಿಮ ಬಂಗಾಳ ಪೊಲೀಸರಿಗೆ ಸ್ಪಷ್ಟ ನಿರ್ದೇಶನ ನೀಡಿತ್ತು.