ನವದೆಹಲಿ: ಇದೇ ಮೇ 26ರಂದು ಕೇಂದ್ರ ಸರ್ಕಾರ ಮೂರು ವರ್ಷಗಳನ್ನು ಪೂರೈಸಲಿರುವ ಹಿನ್ನೆಲೆಯಲ್ಲಿ ಅದ್ಧೂರಿ ಸಂಭ್ರಮಾಚರಣೆಗೆ ಬಿಜೆಪಿ ಸಿದ್ಧವಾಗುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಸರ್ಕಾರದ ಆಡಳಿತ ವೈಖರಿಗೆ ದೇಶದ ಶೇ.61ರಷ್ಟುಜನರು ಮೆಚ್ಚುಗೆ ಸೂಚಿಸಿದ್ದಾರೆ ಖಾಸಗಿ ಸರ್ವೆಯೊಂದು ಹೇಳಿದೆ.
ಮೇ 16ಕ್ಕೆ ಪ್ರಧಾನಿ ಮೋದಿ ಸರ್ಕಾರ ರಚನೆಯಾಗಿ 3 ವರ್ಷಗಳು ಪೂರ್ಣಗೊಂಡ ಹಿನ್ನಲೆಯಲ್ಲಿ ಖ್ಯಾತ ಆಂಗ್ಲ ವಾಣಿಜ್ಯ ದೈನಿಕ ‘ಎಕನಾಮಿಕ್ ಟೈಮ್ಸ್' ದೇಶದ ಪ್ರಮುಖ 59 ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ)ಗಳ ಸಮೀಕ್ಷೆ ನಡೆಸಿದ್ದು, ದೇಶದ 200 ನಗರಗಳ 40 ಸಾವಿರ ಜನರಿಂದ 2 ಲಕ್ಷ ಅಭಿಪ್ರಾಯ ಸಂಗ್ರಹಿಸಿ ‘ಲೋಕಲ್ ಸರ್ಕಲ್ಸ್' ಎಂಬ ಸಂಸ್ಥೆ ಈ ಸಮೀಕ್ಷೆ ನಡೆಸಿದೆ. ಮೋದಿ ಅವರ ಆಡಳಿತಕ್ಕೆ 1ರಿಂದ 10ರೊಳಗೆ ಎಷ್ಟು ಅಂಕ ನೀಡುತ್ತೀರಿ ಎಂಬ ಪ್ರಶ್ನೆಗೆ ಉದ್ಯಮಿಗಳು 7 ಅಂಕ ನೀಡಿ, ಸರ್ಕಾರದ ಕಾರ್ಯವೈಖರಿಗೆ ಶಹಭಾಸ್ ನೀಡಿದ್ದಾರೆ. ಇದೇ ವೇಳೆ, ಮಾರುಕಟ್ಟೆಯ ಅಭಿಪ್ರಾಯ ಅರಿಯಲು 40 ಫಂಡ್ ಮ್ಯಾನೇಜರ್ ಗಳ ಸಮೀಕ್ಷೆಯನ್ನೂ ಪತ್ರಿಕೆ ನಡೆಸಿದ್ದು, ಅವರು ಮೋದಿ ಆಡಳಿತಕ್ಕೆ ಶೇ.7.5 ಅಂಕಗಳನ್ನು ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಸರ್ಕಾರಕ್ಕೆ ದೇಶದ ಶೇ.61ರಷ್ಟು ಜನ ಮೆಚ್ಚುಗೆ ಸೂಚಿಸಿದ್ದು, ಅಂತೆಯೇ ಕೆಲವೊಂದು ವಿಚಾರಗಳಲ್ಲಿ ಕಳೆದ ವರ್ಷ ಮೋದಿ ಸರ್ಕಾರ ಗಳಿಸಿದ್ದ ಅಂಕಗಳು ಈ ಬಾರಿ ಕೊಂಚ ಕಡಿಮೆಯಾಗಿವೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ. ಕೇಂದ್ರ ಸರ್ಕಾರ ತಮ್ಮ ನಿರೀಕ್ಷೆ ಮೀರಿ ಕೆಲಸ ಮಾಡುತ್ತಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ.17 ಮಂದಿ ಹೇಳಿದ್ದರೆ, ಕಳೆದ ವರ್ಷ ಇಂತಹವರ ಪ್ರಮಾಣ ಶೇ.18ರಷ್ಟಿತ್ತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಅವರು ಭಾರತದ ವರ್ಚಸ್ಸನ್ನು ಸುಧಾರಿಸಿದ್ದಾರೆ ಎಂದು ಶೇ.81ರಷ್ಟು(ಕಳೆದ ವರ್ಷ ಶೇ.90) ಮಂದಿ ತಿಳಿಸಿದ್ದಾರೆ. ಇದೇ ವೇಳೆ, ಪಾಕಿಸ್ತಾನ ವಿಚಾರದಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ನೀತಿ- ನಿರ್ಧಾರಗಳನ್ನು ಶೇ.64ರಷ್ಟು ಜನರು ಬೆಂಬಲಿಸಿದ್ದಾರೆ. ತಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದೆ ಎಂದು ಶೇ.44 (ಕಳೆದ ವರ್ಷ ಶೇ.44) ಜನ ಹೇಳಿದ್ದರೆ, ಶೇ.39ರಷ್ಟು(ಕಳೆದ ವರ್ಷ ಶೇ.36) ಮಂದಿ ಸರ್ಕಾರದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.