ಚಿಕ್ಕಮಗಳೂರಿನ ಮುಳ್ಳಯನಗಿರಿ ಪ್ರವಾಸಿ ತಾಣ 
ಪ್ರವಾಸ-ವಾಹನ

ಭೂಮಿ ಮೇಲಿನ ಸ್ವರ್ಗ ಈ ಮುಳ್ಳಯನಗಿರಿ

ಕಾಫಿನಾಡು ಚಿಕ್ಕಮಗಳೂರು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಕಲಾವಿದನ ಕುಂಚದಲ್ಲಿ ಮೂಡಿದಂತೆ ಕಾಣಿಸುವ ಕಾಫಿ ಹಾಗೂ ಟೀ ತೋಟಗಳು, ದಟ್ಟ ಅರಣ್ಯ ಮತ್ತು ಗಿರಿ...

ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯನಗಿರಿ ಪ್ರಮುಖವಾದದ್ದು, ಸಮುದ್ರ ಮಟ್ಟದಿಂದ ಸುಮಾರು 6,330 ಅಡಿ ಎತ್ತರವಿದ್ದು, ಹಿಮಾಲಯ ಮತ್ತು ನೀಲಗಿರಿ ಪರ್ವತ ಶ್ರೇಣಿಗಳ ನಡುವಿನ ಅತಿ ಎತ್ತರದ ಪ್ರದೇಶವಾಗಿದೆ.

ಕಾಫಿನಾಡು ಚಿಕ್ಕಮಗಳೂರು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಕಲಾವಿದನ ಕುಂಚದಲ್ಲಿ ಮೂಡಿದಂತೆ ಕಾಣಿಸುವ ಕಾಫಿ ಹಾಗೂ ಟೀ ತೋಟಗಳು, ದಟ್ಟ ಅರಣ್ಯ ಮತ್ತು ಗಿರಿ ಶಿಖರಗಳು ಇಲ್ಲಿನ ಪ್ರಮುಖ ಆಕರ್ಷಣೆ. ಇಲ್ಲಿನ ಪರ್ವತಗಳು ಒಂದಕ್ಕಿಂತ ಒಂದು ಮೋಹಕ. ಇವುಗಳಲ್ಲಿ ಮುಳ್ಳಯ್ಯನಗಿರಿ ಪ್ರಮುಖವಾದುದು. ಮುಳ್ಳಯ್ಯನಗಿರಿ ಚಿಕ್ಕಮಗಳೂರಿನಿಂದ ಸುಮಾರು 20 ಕಿ.ಮಿ. ದೂರದಲ್ಲಿದ್ದು, ಬೆಟ್ಟದ ತುದಿಯವರೆಗೆ ಉತ್ತಮವಾದ ರಸ್ತೆಯಿದೆ. ರಸ್ತೆ ಕಿರಿದಾದ್ದರಿಂದ ಈ ರಸ್ತೆ ಅಪಾಯಕಾರಿ ರಸ್ತೆಯೂ ಹೌದು. ನಡೆದುಕೊಂಡು ಅಥವಾ ಸೈಕಲ್ ನಲ್ಲಿ ಪ್ರಯಾಣ ಮಾಡುವವರಿಗೆ ಉತ್ತಮ ಪ್ರಯಾಣದ ಅನುಭವ ನೀಡುತ್ತದೆ. ಆದರೆ ಕಾರು ಅಥವಾ ಅದಕ್ಕಿಂತ ದೊಡ್ಡ ವಾಹನಗಳು ಇಲ್ಲಿ ಚಲಿಸಬೇಕು ಎಂದರೆ ಕೊಂಚ ಅಪಾಯವೇ ಸರಿ.

ಏಕೆಂದರೆ ಇಲ್ಲಿನ ರಸ್ತೆಗಳು ಉತ್ತಮವಾಗಿವೆಯಾದರೂ ಕಿರಿದಾದದ್ದು. ಅಲ್ಲದೆ ಬೆಟ್ಟ ಏರುತ್ತಿದ್ದಂತೆಯೇ ಮಂಜುಕವಿದ ವಾತಾವರಣ ನಿರ್ಮಾಣವಾಗುವುದರಿಂದ ಅಪಘಾತದ ಸಂಭವ ಹೆಚ್ಚು. ಹೀಗಾಗಿ ಕಾರಿನಲ್ಲಿ ಚಲಿಸುವವರು ನಿಧಾನದ ಮೊರೆಹೋಗಬೇಕು. ಇಲ್ಲಿನ ರಸ್ತೆಯ ಕಡಿದಾದ ತಿರುವಿನಲ್ಲಿ ಕಾರುಗಳು ಚಲಿಸಲು ಕೇವಲ ಉತ್ತಮ ಚಾಲಕನಿದ್ದರೆ ಸಾಲದು ಅನುಭವ ಹಾಗೂ ಸಹನೆ ಕೂಡ ಇರಬೇಕು.

ಗಿರಿಯ ತುದಿಯಲ್ಲಿ ಶ್ರೀ ಗುರು ಮುಳ್ಳಪ್ಪಸ್ವಾಮಿ ತಪಸ್ಸು ಮಾಡಿದ ಗದ್ದುಗೆ ಹಾಗೂ ದೇವಾಲಯವಿದೆ. ಪುಟ್ಟದಾದ ಬಸವನ ಪ್ರತಿಮೆ ಹಾಗೂ ಪಕ್ಕದಲ್ಲಿ ಗುಹೆಯಂತಹ ರಚನೆಯಿದೆ. ಗದ್ದುಗೆ ಇರುವ ಜಾಗವನ್ನು ಮುನ್ನೂರಕ್ಕೂ ಹೆಚ್ಚು ಮೆಟ್ಟಿಲುಗಳ ಮೂಲಕ ಕಾಲ್ನಡಿಗೆಯಲ್ಲಿ ಸಾಗಬೇಕು.

ಇನ್ನು ಬೆಟ್ಟದ ತುದಿ ತಲುಪುತ್ತಿದ್ದಂತೆಯೇ ಮೋಡವನ್ನು ಚುಂಬಿಸುವಷ್ಟರ ಮಟ್ಟಿಗೆ ಮಂಜು ಆವರಿಸುತ್ತದೆ. ಮೋಡಗಳ ನಡುವೆ ಚಲಿಸುತ್ತಿದ್ದರೆ ಸ್ವರ್ಗದ ದಾರಿಯಲ್ಲಿ ಚಲಿಸುತ್ತಿದ್ದೇವೆಯೇನೋ ಎಂಬ ಅನುಭವ ಎದುರಾಗುತ್ತದೆ. ನಮ್ಮ ಪಕ್ಕದಲ್ಲಿರುವ ವ್ಯಕ್ತಿ/ವಸ್ತುಗಳೇ ಕಾಣದಷ್ಟು ಮಂಜು ಆವರಿಸುವ ಮೂಲಕ ನಮ್ಮನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಇನ್ನು ಬೆಟ್ಟದ ತುತ್ತತುದಿಯಲ್ಲಿರುವ ಒಂದೊಂದೇ ಮೆಟ್ಟಿಲುಗಳನ್ನು ಹತ್ತುತ್ತಿದ್ದರೆ ಸುಯ್ಯನೆ ಬೀಸುವ ಗಾಳಿ ಎಲ್ಲಿ ನಮ್ಮನ್ನೇ ಹೊತ್ತೊಯ್ಯುತ್ತದೆಯೋ ಎನ್ನುವ ಭೀತಿ ಕೂಡ ಕಾಡಲಾರಂಭಿಸುತ್ತದೆ. ಆ ಪ್ರಮಾಣದಲ್ಲಿ ಇಲ್ಲಿ ಗಾಳಿ ಬಿರುಸಾಗಿರುತ್ತದೆ. ಈ ವೇಳೆ ನಮಗೆ ಕಾಣಸಿಗುವ ಗಿರಿ-ಕಂದರಗಳು, ಪ್ರಪಾತಗಳು ಭಯದೊಂದಿಗೆ ಅಪೂರ್ವ ಸಂತೋಷವನ್ನು ಕೂಡ ಉಂಟು ಮಾಡುತ್ತದೆ. ಚಾರಣ ಪ್ರಿಯರ ಸ್ವರ್ಗವೆನಿಸಿಕೊಂಡಿರುವ ಮುಳ್ಳಯ್ಯನಗಿರಿ ದಕ್ಷಿಣ ಭಾರತದಲ್ಲೇ ಪ್ರಮುಖ ಚಾರಣ ಸ್ಥಳಗಳಲ್ಲೊಂದು.

ದಾರಿ ಹೇಗೆ..?
ಮುಳ್ಳಯ್ಯನಗಿರಿ ಮಂಗಳೂರಿನಿಂದ ಸುಮಾರು 172 ಕಿ. ಮೀ ದೂರದಲ್ಲಿದೆ. ಉಡುಪಿಯಿಂದ 187 ಕಿ.ಮೀ, ಬೆಂಗಳೂರಿನಿಂದ 264 ಕಿ.ಮೀ, ಉಜಿರೆಯಿಂದ 106 ಕಿ.ಮೀ. ದೂರದಲ್ಲಿದೆ. ಮುಳ್ಳಯ್ಯನಗಿರಿಗೆ ಮಂಗಳೂರು-ಉಜಿರೆ-ಚಾರ್ಮಾಡಿ ಮಾರ್ಗವಾಗಿ ಹೋಗಬಹುದು. ಇದಲ್ಲದೆ ಮಂಗಳೂರು-ಕಾರ್ಕಳ-ಕಳಸ-ಬಾಳೆಹೊನ್ನೂರು ಮಾರ್ಗವಾಗಿಯೂ ಇಲ್ಲಿಗೆ ತಲುಪಬಹುದು. ಇಲ್ಲಿಗೆ ಸಾಕಷ್ಟು ಸಂಖ್ಯೆಯ ಖಾಸಗಿ ಹಾಗೂ ಸರ್ಕಾರಿ ಸಾರಿಗೆ ಬಸ್‌ಗಳ ಸೇವೆ ಲಭ್ಯವಿದೆ. ಚಿಕ್ಕಮಗಳೂರು ಜಿಲ್ಲೆಯಿಂದ ಇಲ್ಲಿಗೆ ಬಾಡಿಗೆ ಟ್ಯಾಕ್ಸಿ ವ್ಯವಸ್ಥೆಯೂ ಇದೆ. ಸ್ವಂತ ವಾಹನಗಳು ಇಲ್ಲದ ಮಂದಿ ಬಾಡಿಗೆ ವಾಹನಗಳನ್ನು ಮಾಡಿಕೊಂಡು ಈ ಸ್ಥಳವನ್ನು ತಲುಪಬಹುದು.

ಊಟ-ತಿಂಡಿ ವ್ಯವಸ್ಥೆ ನಿಮ್ಮದೇ ಆಗಿದ್ದರೆ ಒಳಿತು
ಇನ್ನು ಈ ಪ್ರವಾಸಿ ತಾಣದಲ್ಲಿ ಊಟ-ತಿಂಡಿ ವ್ಯವಸ್ಥೆಯ ಇಲ್ಲ. ಬೆಟ್ಟದ ಬುಡದಲ್ಲಿ ಸ್ಥಳೀಯರು ಕೆಲ ತಿಂಡಿ ತಿನಿಸುಗಳನ್ನು ಮಾರುತ್ತಾರೆಯಾದರೂ, ಅದು ವಾರಾಂತ್ಯದಲ್ಲಿ ಮಾತ್ರ. ಬೆಟ್ಟದ ಮೇಲ್ಬಾಗದಲ್ಲಿ ಯಾವುದೇ ರೀತಿಯಿ ತಿಂಡಿ ತಿನಿಸುಗಳು ದೊರೆಯುವುದಿಲ್ಲ. ಹೀಗಾಗಿ ಪ್ರವಾಸ ಹೊರಡ ಬಯಸುವವರು ಊಟ-ತಿಂಡಿ ವ್ಯವಸ್ಥೆ ಮಾಡಿಕೊಂಡರೆ ಒಳಿತು.

ಯಾವ ಸಮಯ ಸೂಕ್ತ
ಸಾಮಾನ್ಯವಾಗಿ ಮುಳ್ಳಯನಗಿರಿ ಪ್ರದೇಶಕ್ಕೆ ಹೋಗಬಯಸುವವರು ಅಕ್ಟೋಬರ್ ತಿಂಗಳಿನಿಂದ ಫೆಬ್ರವರಿ ತಿಂಗಳ ಅವಧಿಯಲ್ಲಿ ಪ್ರವಾಸಕ್ಕೆ ಅಣಿಯಾಗಬಹುದು. ಈ ಸಮಯದಲ್ಲಿ ಈ ಮುಳ್ಳಯನಗಿರಿ ಚಾರಣಕ್ಕೆ ಸೂಕ್ತ ಸಮಯವಾಗಿದ್ದು, ಬಿಸಿಲಿನಲ್ಲೂ ಚಳಿಯ ಅನುಭವ ವಿಶೇಷವಾಗಿರುತ್ತದೆ. ಗಿರಿಯ ತುದಿಯಲ್ಲಿ ಬಿರುಸಾಗಿ ಬೀಸುವ ಗಾಳಿ ನಾವೆಲ್ಲಿ ಬಿರುಗಾಳಿ ಸಿಲುಕಿದ್ದೇವೆಯೋ ಎಂಬ ಭೀತಿ ಆವರಿಸುವಂತೆ ಮಾಡುತ್ತದೆ. ಒಟ್ಟಾರೆ ಚಿಕ್ಕಮಗಳೂರಿನ ಈ ಪ್ರಕೃತಿ ದತ್ತ ತಾಣ ಪ್ರವಾಸಿಗರಿಗೆ ಮುದ ನೀಡುವಲ್ಲಿ ಎರಡು ಮಾತಿಲ್ಲ.

ಮಾಹಿತಿ: ಟ್ರಿಪ್ ಅಡ್ವೈಸರ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

SCROLL FOR NEXT