ಪ್ರವಾಸ-ವಾಹನ

ಆಟೋ ಮೊಬೈಲ್; ವಾಹನ ನೋಂದಣಿಯಲ್ಲೂ ಗಣನೀಯ ಕುಸಿತ

Srinivasamurthy VN

ನವದೆಹಲಿ: ಆರ್ಥಿಕ ಹಿನ್ನಡೆಯಿಂದಾಗಿ ಭಾರತದ ಆಟೋ ಮೊಬೈಲ್ ಕ್ಷೇತ್ರ ಗಂಭೀರ ಸಮಸ್ಯೆ ಎದುರಿಸುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ವಾಹನ ನೋಂದಣಿಯಲ್ಲೂ ಗಣನೀಯ ಪ್ರಮಾಣದ ಕುಸಿತ ಉಂಟಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಎಫ್‌ಎಡಿಎ) ಸೆಪ್ಟೆಂಬರ್ 2019 ರ ತನ್ನ ಮಾಸಿಕ ವಾಹನ ನೋಂದಣಿ ದತ್ತಾಂಶ ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ವಾಹನ ನೋಂದಣಿ ಪ್ರಮಾಣದಲ್ಲಿ ಶೇ. 12.09ರಷ್ಟು ಕುಸಿತ ಉಂಟಾಗಿದೆ ಎಂದು ಮಾಹಿತಿ ನೀಡಿದೆ.

ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ ವಾಹನ ನೋಂದಣಿ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ ಈ ವರ್ಷ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಒಂದು ವರ್ಷದ ಆಧಾರದ ಮೇಲೆ, ಒಟ್ಟಾರೆ ವಾಹನ ನೋಂದಣಿ ಶೇಕಡಾ 12.9 ರಷ್ಟು ಕುಸಿದಿದ್ದು, ದ್ವಿಚಕ್ರ ವಾಹನಗಳ ನೋಂದಣಿಯಲ್ಲಿ ಶೇಕಡಾ 12.1 ರಷ್ಟು ಕಡಿಮೆಯಾಗಿದೆ. ಪ್ರಯಾಣಿಕರ ವಾಹನಗಳ ದಾಸ್ತಾನು ಸ್ವಲ್ಪಮಟ್ಟಿಗೆ ಏರಿತ್ತಾದರೂ, ದ್ವಿಚಕ್ರ ವಾಹನ ದಾಸ್ತಾನು ಹೆಚ್ಚಾಗಿದೆ.

ವಾಣಿಜ್ಯ ವಾಹನಗಳಿಗೆ ಸಂಬಂಧಿಸಿದಂತೆ, ನೋಂದಣಿ ಶೇಕಡಾ 18.5 ರಷ್ಟು ಕಡಿಮೆಯಾಗಿದ್ದರೆ, ಪ್ರಯಾಣಿಕರ ವಾಹನ ನೋಂದಣಿ ಶೇಕಡಾ 20.1 ರಷ್ಟು ಕಡಿಮೆಯಾಗಿದೆ. ತ್ರಿಚಕ್ರ ವಾಹನ ಮಾತ್ರ ಮಾರುಕಟ್ಟೆಯಲ್ಲಿ ಶೇಕಡಾ 1.8 ರಷ್ಟು ಕನಿಷ್ಠ ಬೆಳವಣಿಗೆಯನ್ನು ಕಂಡಿದೆ. ಇತ್ತೀಚಿಗೆ ಸರ್ಕಾರ ಘೋಷಿಸಿದ ಸಕಾರಾತ್ಮಕ ಕ್ರಮಗಳ ಸಂಪೂರ್ಣ ಪರಿಣಾಮಗಳು ಚಿಲ್ಲರೆ ಮಟ್ಟದಲ್ಲಿ ಇನ್ನೂ ಗೋಚರಿಸಲಿಲ್ಲ ಎಂದು ಫಾಡಾ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ. 

SCROLL FOR NEXT