ಪ್ರವಾಸ-ವಾಹನ

ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ಪ್ರೀಮಿಯಂ ಪಾವತಿಸಲು ಶೇ.90 ರಷ್ಟು ಭಾರತೀಯರ ಒಲವು: ಸಮೀಕ್ಷೆ

Srinivas Rao BV

ನವದೆಹಲಿ: ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ಪ್ರೀಮಿಯಂ ಪಾವತಿಸಲು ಶೇ.90 ರಷ್ಟು ಭಾರತೀಯರು ಒಲವು ಹೊಂದಿರುವುದನ್ನು ಜಾಗತಿಕ ಮಟ್ಟದ ಸಮೀಕ್ಷೆ ಬಹಿರಂಗಪಡಿಸಿದೆ. 

ತೈಲ ಬೆಲೆ ಏರಿಕೆ ನಡುವೆಯೇ ಮುಂದಿನ 12 ತಿಂಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಮಾರಾಟ ಏರಿಕೆಯಾಗುವ ನಿರೀಕ್ಷೆ ಇದ್ದು ಸಲಹಾ ಸಂಸ್ಥೆ ಇವೈ ಈ ಸಮೀಕ್ಷೆ ನಡೆಸಿದೆ. 

ಇವೈ ನ ಮೊಬಿಲಿಟಿ ಗ್ರಾಹಕ ಸೂಚ್ಯಂಕ 13 ರಾಷ್ಟ್ರಗಳಲ್ಲಿ 9,000 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ 1,000 ಮಂದಿ ಭಾರತೀಯರಿದ್ದರು. ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಭಾರತೀಯರ ಪೈಕಿ ಶೇ.40 ರಷ್ಟು ಮಂದಿ ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ಶೇ.20 ರಷ್ಟು ಪ್ರೀಮಿಯಮ್ ಪಾವತಿಸಲು ಸಿದ್ಧರಿರುವುದು ಜುಲೈ ನ ಉತ್ತರಾರ್ಧದಲ್ಲಿ ಪೂರ್ಣಗೊಂಡಿರುವ ಸಮೀಕ್ಷೆಯಿಂದ ಬಹಿರಂಗಗೊಂಡಿದೆ. 

ಸಮೀಕ್ಷೆಯ ಪ್ರಕಾರ ಕಾರು ಖರೀದಿಸಲು ಉತ್ಸುಕರಾಗಿರುವ 10 ಮಂದಿ ಭಾರತೀಯರಲ್ಲಿ ಮೂವರು ವಿದ್ಯುತ್ ಚಾಲಿತ/ ಹೈಡ್ರೋಜನ್ ವಾಹನಗಳಿಗೆ ಆದ್ಯತೆ ಹೊಂದಿದ್ದಾರೆ. ಇವೈ ನೀಡಿರುವ ಮಾಹಿತಿಯ ಪ್ರಕಾರ ಭಾರತದಲ್ಲಿ ಬಹುತೇಕ ಮಂದಿ ಸಂಪೂರ್ಣವಾಗಿ ಚಾರ್ಜ್ ಆದ ವಿದ್ಯುತ್ ಚಾಲಿತ ವಾಹನದಿಂದ 100-200 ಮೈಲಿಗಳ ವರೆಗೂ ಡ್ರೈವ್ ಮಾಡಲು ಬಯಸುತ್ತಾರೆ      

ಭಾರತದ ಗ್ರಾಹಕರ ಪೈಕಿ ಶೇ.90 ರಷ್ಟು ಮಂದಿ ಇವಿಯನ್ನು ಖರೀದಿಸಲು ಪ್ರೀಮಿಯಂ ಪಾವತಿ ಮಾಡಲು ಸಿದ್ಧರಿದ್ದಾರೆ. ಶೇ.40 ರಷ್ಟು ಮಂದಿ ಶೇ.20 ರಷ್ಟು ಪ್ರೀಮಿಯಂ ಪಾವತಿ ಮಾಡಲು ಸಿದ್ಧವಿರುವುದಾಗಿ ತಿಳಿಸಿರುವುದನ್ನು ಇವೈ ತನ್ನ ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಿದೆ. 

SCROLL FOR NEXT