ಪ್ರವಾಸ-ವಾಹನ

ಪ್ರವಾಸಿಗರು, ಚಾರಣಿಗರನ್ನು ಕೈಬೀಸಿ ಕರೆಯುತ್ತಿದೆ ಉಡುಪಿ ಜಿಲ್ಲೆಯ ಕುಂದಾಪುರದ ಮ್ಯಾಂಗ್ರೋವ್ ಕಾಡುಗಳು!

Sumana Upadhyaya

ಉಡುಪಿ: ಪ್ರಶಾಂತ ಮ್ಯಾಂಗ್ರೋವ್ ಕಾಡುಗಳ ಮೂಲಕ ದೋಣಿ ವಿಹಾರವು ಉಡುಪಿ ಜಿಲ್ಲೆಯ ಕುಂದಾಪುರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿದೆ. ಇದರ ಜೊತೆಗೆ ವನ್ಯಜೀವಿ ವೀಕ್ಷಣೆ, ಮನರಂಜನಾ ಆಟಗಳು ಮತ್ತು ಚಾರಣ, ಕುಂದಾಪುರದ ಕೋಡಿಯಲ್ಲಿರುವ ಪಂಚ ಗಂಗಾವಳಿ ನದಿಯ ಹಿನ್ನೀರು, ಮ್ಯಾಂಗ್ರೋವ್ ಕಾಡುಗಳ ಸಮೃದ್ಧಿ, ಪರಿಸರ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಪ್ರಶಸ್ತ ಸ್ಥಳವಾಗಿದೆ. ಪ್ರವಾಸಿಗರ ಸ್ವರ್ಗದಂತೆ ಕಂಡುಬರುತ್ತಿದೆ.

ಕುಂದಾಪುರದ ಈ ಸುಂದರ ಪರಿಸರದಲ್ಲಿ ಅರಣ್ಯ ಇಲಾಖೆಯು ಮ್ಯಾಂಗ್ರೋವ್‌ಗಳನ್ನು ನೆಡಲು ಮುಂದಾಯಿತು. ಇಲ್ಲಿ ಕಳೆದೊಂದು ದಶಕದಿಂದ ಹಿನ್ನೀರಿನಲ್ಲಿ ನೆಡುತೋಪು ಪ್ರದೇಶಗಳು 450 ಹೆಕ್ಟೇರ್‌ಗಳಷ್ಟು ಹೆಚ್ಚಾಗಿದೆ. ಮ್ಯಾಂಗ್ರೋವ್ಸ್ ದಡವನ್ನು ರಕ್ಷಿಸುವ ಮತ್ತು ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶಗಳನ್ನು ಪೂರೈಸುತ್ತದೆ. ಕೋಡಿಯಲ್ಲಿ ಕಳೆದ ವರ್ಷ ಸುಮಾರು 15 ಹೆಕ್ಟೇರ್‌ನಲ್ಲಿ ನೆಟ್ಟ ಮೊಳಕೆ ಈಗ ಬೆಳೆಯುತ್ತಿದೆ ಮತ್ತು ಹಿನ್ನೀರಿನಲ್ಲಿ ದೋಣಿ ಪ್ರಯಾಣಕ್ಕೆ ಹಸಿರು ಮೇಲಾವರಣವನ್ನು ಒದಗಿಸುತ್ತದೆ.

ಕಳೆದ ಜುಲೈಯಲ್ಲಿ, ಮಾಜಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ದೋಣಿಯಲ್ಲಿ ಮ್ಯಾಂಗ್ರೋವ್ ಕಾಡುಗಳ ಮೂಲಕ ಪಂಚಗಂಗಾವಳಿ ನದಿಯಲ್ಲಿ ಅರ್ಧ ಗಂಟೆ ಸುದೀರ್ಘ ದೋಣಿ ವಿಹಾರವನ್ನು ನಡೆಸಿ ಸಂತೋಷಗೊಂಡಿದ್ದರು. ಈ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಬಗ್ಗೆ ಕೂಡ ಹೇಳಿದ್ದರು.

ಕೆಲವೇ ವರ್ಷಗಳ ಹಿಂದೆ ಅಂದರೆ 2019ರಲ್ಲಿ ನಾಗರಾಜ್ ಕಾಂಚನ್ ಎಂಬುವವರು 'ರಾಯಲ್ ಫಾರ್ಚೂನ್' ಅನ್ನು ಪರಿಚಯಿಸಿ ಪಂಚಗಂಗಾವಳಿ ನದಿಯಲ್ಲಿ ಬೋಟಿಂಗ್ ಅನ್ನು ಪರಿಚಯಿಸಿದರು ನಿಧಾನವಾಗಿ ಪ್ರವಾಸಿಗರು ಬರಲಾರಂಭಿಸಿದ್ದಾರೆ.

ಆನಂದ್ ಖಾರ್ವಿ ಮತ್ತು ಅವರ ಸೋದರ ಸಂಬಂಧಿಗಳಾದ ಸಂತೋಷ ಖಾರ್ವಿ ಮತ್ತು ಸತೀಶ್ ಖಾರ್ವಿ ಅವರು 10 ಲಕ್ಷ ಹೂಡಿಕೆ ಮಾಡಿ 'ಚಕ್ರಮ್ಮ ಪ್ರವಾಸಿ' ಪರಿಚಯಿಸಿದರು. ಮ್ಯಾಂಗ್ರೋವ್ ಕಾಡುಗಳ ಮೂಲಕ ದೋಣಿ ವಿಹಾರ ಮಾಡಲು ಬಯಸುವ ಪ್ರವಾಸಿಗರು ಹೆಚ್ಚಾಗಿದ್ದಾರೆ ಎಂದು ಆನಂದ್ ಖಾರ್ವಿ ದಿ ನ್ಯೂ ಸಂಡೇ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಕೆಲವು ವಿವಾಹ ಪೂರ್ವ ಫೋಟೋ ಶೂಟ್ ಗಳು ಇಲ್ಲಿ ನೆರವೇರಿವೆ. ಜನರ ಅಗತ್ಯಗಳಿಗೆ ತಕ್ಕಂತೆ ಮೂರು ಅಥವಾ ನಾಲ್ಕು ಗಂಟೆಯ ಇಲ್ಲಿನ ಫೋಟೋಶೂಟ್ ಅಥವಾ ಇತರ ಕಾರ್ಯಕ್ರಮಗಳಿಗೆ ನಾವು ಆಫರ್ ಗಳನ್ನು ಜನತೆಗೆ ನೀಡುತ್ತೇವೆ ಎನ್ನುತ್ತಾರೆ ಅವರು.

ಐಟಿ ವೃತ್ತಿಪರ ಮಂಜುನಾಥ್ ನೇತೃತ್ವದ ಮೈಸೂರಿನ ಆರು ಮಂದಿ ಉತ್ಸಾಹಿಗಳ ತಂಡ ಇತ್ತೀಚೆಗೆ ಉಡುಪಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮೊದಲಿಗೆ ಕುಂದಾಪುರದ ಮ್ಯಾಂಗ್ರೋವ್ ಕಾಡುಗಳ ಮೂಲಕ ದೋಣಿ ವಿಹಾರ ಸಾಗಿದ್ದರು. ಅವರು  ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ಶಾಂತ ಹಿನ್ನೀರು ನಮ್ಮನ್ನು ಮಂತ್ರಮುಗ್ಧರನ್ನಾಗಿಸಿತು. 20-25 ಅಡಿಗಳಷ್ಟು ಎತ್ತರದ ಮ್ಯಾಂಗ್ರೋವ್‌ಗಳ ಮೇಲಾವರಣವನ್ನು ನಾವು ನೋಡಿದ್ದೇವೆ. ಮುಂಜಾನೆ ದೋಣಿವಿಹಾರ ಹೋಗಿದ್ದ ನಮಗೆ ಹಕ್ಕಿಗಳ ಲಯಬದ್ಧವಾದ ಚಿಲಿಪಿಲಿ ಮನಸ್ಸಿಗೆ ಮುದ ನೀಡಿತು. ಇಲ್ಲಿನ ಶ್ರೀಮಂತ ಮತ್ತು ವೈವಿಧ್ಯಮಯ ಪರಿಸರ ವ್ಯವಸ್ಥೆ ನಿಜಕ್ಕೂ ಖುಷಿಯಾಗಿದೆ ಎಂದರು.

ಮ್ಯಾಂಗ್ರೋವ್ ಕಾಡುಗಳು ಪ್ರಧಾನವಾಗಿ ಉಡುಪಿ ಜಿಲ್ಲೆಯ ಕೋಡಿ, ಜಾಲಡಿ, ಆನಗಳ್ಳಿ, ಉಪ್ಪಿನಕುದ್ರು, ಪಡುವರಿ, ಕೊಡೇರಿ, ಸಾಸ್ತಾನ ಮತ್ತು ಉದ್ಯಾವರ ಪ್ರದೇಶಗಳಲ್ಲಿ ಕಂಡುಬರುತ್ತಿದ್ದು, 600 ಹೆಕ್ಟೇರ್ ಗಳಷ್ಟು ವ್ಯಾಪಿಸಿವೆ.ಮ್ಯಾಂಗ್ರೋವ್ ಸಸ್ಯಗಳು ಬೆಳೆಯುವ ಪ್ರದೇಶಗಳು ಮೀನುಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳಗಳಾಗಿವೆ, ಆದ್ದರಿಂದ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ, ಈ ಜೈವಿಕ-ಗುರಾಣಿ ಮ್ಯಾಂಗ್ರೋವ್ ಕಾಡುಗಳನ್ನು ಸಂರಕ್ಷಿಸಬೇಕು. ಬಿಳಿ ಹೊಟ್ಟೆಯ ಸಮುದ್ರ ಹದ್ದು, ಕಂದು ತಲೆಯ ಗಲ್, ಬೂದು ಹೆರಾನ್ ಮತ್ತು ಬಿಳಿ ಎದೆಯ ಮಿಂಚುಳ್ಳಿ ಮುಂತಾದ ಪಕ್ಷಿಗಳು ಮ್ಯಾಂಗ್ರೋವ್ ಕಾಡುಗಳಲ್ಲಿ ಕಂಡುಬರುತ್ತವೆ.

ಕರಾವಳಿ ಪ್ರದೇಶದಲ್ಲಿ ಇತರ ಹಿನ್ನೀರಿನಲ್ಲಿ ಮ್ಯಾಂಗ್ರೋವ್ ಕಾಡುಗಳನ್ನು ಬೆಳೆಸುವ ಮೂಲಕ ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸಬಹುದು ಎಂದು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಆಶಿಶ್ ರೆಡ್ಡಿ ಎಂ ವಿ ಹೇಳುತ್ತಾರೆ.

ಬೈಂದೂರು ತಾಲ್ಲೂಕಿನ ಪಡುವರಿಯ ಮ್ಯಾಂಗ್ರೋವ್ಸ್ ಒಟ್ಟಿನೇನ್ ಪ್ರದೇಶದಿಂದ ನೋಡಿದಾಗ ಅದ್ಭುತವಾಗಿ ಕಾಣುತ್ತದೆ, ಹಸಿರು ತೇಲುವ ದ್ವೀಪಗಳಂತೆ ಕಾಣುತ್ತದೆ. ಈ ನಿತ್ಯಹರಿದ್ವರ್ಣ ಕಾಡುಗಳು ಉಷ್ಣವಲಯದ ಕಾಡುಗಳಿಗಿಂತ ಹೆಚ್ಚು ಇಂಗಾಲವನ್ನು ವಾತಾವರಣದಿಂದ ಬೇರ್ಪಡಿಸುತ್ತವೆ.

ಕುಂದಾಪುರದ ಈ ಪ್ರದೇಶದಲ್ಲಿ ಮ್ಯಾಂಗ್ರೋವ್ ಪ್ರಭೇದಗಳಾದ ರೈಜೋಫೊರಾ ಮುಕ್ರೊನಾಟಾ, ಅವಿಸೆನ್ನಿಯೇಸಿ, ಬ್ರೂಗಿಯೆರಾ, ಸೊನೆರೇಟಿಯೇಸಿ ಸೊನೆರೇಟಿಯಾ ಮೊದಲಾದವುಗಳಿವೆ. ಅರಣ್ಯ ಇಲಾಖೆಯಿಂದ ವ್ಯವಸ್ಥಿತ ಅರಣ್ಯೀಕರಣವು ಕಳೆದ ಒಂದು ದಶಕದಲ್ಲಿ ಮ್ಯಾಂಗ್ರೋವ್‌ಗಳ ಹೆಚ್ಚಳಕ್ಕೆ ಕಾರಣವಾಗಿದೆ, ವಿವಿಧ ಮೀನು ಮತ್ತು ಪಕ್ಷಿ ಪ್ರಭೇದಗಳಿಗೆ 'ನರ್ಸಿಂಗ್ ಹೋಂ'ಗಳನ್ನು ಒದಗಿಸುತ್ತದೆ. ನೀರಿನ ಮಟ್ಟ ಕಡಿಮೆಯಾದಾಗ ಮತ್ತು ಏಪ್ರಿಲ್ ಮತ್ತು ಮೇ ಸಮಯದಲ್ಲಿ ಮರಳು ದಿಬ್ಬಗಳು ಗೋಚರಿಸುವಾಗ ಮ್ಯಾಂಗ್ರೋವ್ ಪ್ರಭೇದಗಳನ್ನು ನೆಡಲಾಗುತ್ತದೆ.

SCROLL FOR NEXT