ಚಾರ್ ಧಾಮ್ ಯಾತ್ರೆಯಲ್ಲಿ ಬದರಿನಾಥವು ಅತ್ಯಂತ ಪವಿತ್ರ ಮತ್ತು ಅಂತಿಮ ತಾಣವಾಗಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಅಲಕನಂದಾ ನದಿಯ ದಡದಲ್ಲಿರುವ ಈ ದೇವಾಲಯವು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ಇದು ಕೇವಲ ದೇವಾಲಯ ದರ್ಶನದ ಸ್ಥಳವಲ್ಲ, ಆಧ್ಯಾತ್ಮಿಕತೆ, ಪೌರಾಣಿಕತೆ ಮತ್ತು ಹಿಮಾಲಯದ ಅಪಾರ ಪ್ರಕೃತಿ ಸೌಂದರ್ಯವನ್ನು ಒಂದೇ ಜಾಗದಲ್ಲಿ ಅನುಭವಿಸಬಹುದಾದ ವಿಶಿಷ್ಟ ತೀರ್ಥಕ್ಷೇತ್ರವಾಗಿದೆ.
ಅಲಕನಂದಾ ನದಿಯ ತೀರದಲ್ಲಿ, ಹಿಮಾಚ್ಛಾದಿತ ಶಿಖರಗಳ ನಡುವೆ ನೆಲೆಸಿರುವ ಈ ಪವಿತ್ರ ಕ್ಷೇತ್ರವು ಪ್ರತಿಯೊಂದು ಹೆಜ್ಜೆಯಲ್ಲೂ ಭಕ್ತಿ ಮತ್ತು ಪ್ರಕೃತಿಯ ಸಂಯೋಜನೆಯನ್ನು ಅನುಭವಿಸುವ ಅವಕಾಶ ನೀಡುತ್ತದೆ.
ಬದರಿನಾಥ್ ದೇವಾಲಯದ ಕೆಳಭಾಗದಲ್ಲಿರುವ ತಪ್ತ್ ಕುಂಡ್ ಯಾತ್ರೆಯ ಆರಂಭದಲ್ಲಿ ಅತ್ಯಂತ ಮಹತ್ವದ ಸ್ಥಳವಾಗಿದೆ. ಭಕ್ತರು ದೇವಾಲಯ ಪ್ರವೇಶಕ್ಕೂ ಮುನ್ನ ಇಲ್ಲಿ ಸ್ನಾನ ಮಾಡುವುದನ್ನು ಪವಿತ್ರ ಸಂಪ್ರದಾಯವಾಗಿ ಪರಿಗಣಿಸಲಾಗುತ್ತದೆ.
ಹಿಮಾಲಯದ ತೀವ್ರ ಚಳಿಯ ನಡುವೆಯೂ ಇಲ್ಲಿನ ನೀರು ಸುಮಾರು 45 ಡಿಗ್ರಿ ತಾಪಾವನ್ನು ಹೊಂದಿರುತ್ತದೆ. ಇದರ ಪಕ್ಕದಲ್ಲೇ ಹರಿಯುವ ಅಲ್ಕನಂದಾ ನದಿಯ ನೀರು ಅತಿ ತಂಪಾಗಿದ್ದರೂ, ಈ ಕುಂಡದಲ್ಲಿ ಮಾತ್ರ ಸದಾ ಬಿಸಿನೀರು ಇರುವುದು ಪ್ರಕೃತಿಯ ಒಂದು ಅದ್ಭುತ. ಇಲ್ಲಿನ ನೀರಿನಲ್ಲಿ ಗಂಧಕ (Sulphur) ಮತ್ತು ಇತರ ಖನಿಜಾಂಶಗಳಿರುವುದರಿಂದ, ಇದರಲ್ಲಿ ಸ್ನಾನ ಮಾಡುವುದರಿಂದ ಚರ್ಮ ರೋಗಗಳು ಗುಣವಾಗುತ್ತವೆ ಎಂಬ ನಂಬಿಕೆಯಿದೆ. ಈ ಸ್ಥಳವು ದೈಹಿಕ ಶುದ್ಧತೆಯ ಜೊತೆಗೆ ಮಾನಸಿಕ ಶಾಂತಿಯನ್ನೂ ನೀಡುತ್ತದೆ.
ಇದನ್ನು ಅಗ್ನಿ ದೇವನ ವಾಸಸ್ಥಾನ ಎಂದು ಪರಿಗಣಿಸಲಾಗುತ್ತದೆ. ಪುರಾಣಗಳ ಪ್ರಕಾರ, ಈ ಕುಂಡವನ್ನು ಭಗವಾನ್ ವಿಷ್ಣುವು ಸೃಷ್ಟಿಸಿದನೆಂದು ಹೇಳಲಾಗುತ್ತದೆ.
ದೇವಾಲಯದಿಂದ ಸುಮಾರು 3 ಕಿಮೀ ಮೇಲಿನ ಬೆಟ್ಟದ ಹಾದಿಯಲ್ಲಿ ಇರುವ ಚರಣ್ ಪಾದುಕ ಆಧ್ಯಾತ್ಮಿಕ ಮಹತ್ವವುಳ್ಳ ತಾಣವಾಗಿದೆ. ಇಲ್ಲಿ ಭಗವಾನ್ ವಿಷ್ಣುವಿನ ಪಾದದ ಗುರುತುಗಳು ಒಂದು ಬಂಡೆಯ ಮೇಲೆ ಇವೆ ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ, ವೈಕುಂಠದಿಂದ ಭೂಮಿಗೆ ಇಳಿದಾಗ ವಿಷ್ಣುವು ತನ್ನ ಮೊದಲ ಹೆಜ್ಜೆಯನ್ನು ಇಲ್ಲಿಟ್ಟಿದ್ದನೆಂದು ಹೇಳಲಾಗುತ್ತದೆ. ಈ ಸ್ಥಳದಿಂದ ಅಲಕನಂದಾ ಕಣಿವೆಯ ವಿಶಾಲ ದೃಶ್ಯಾವಳಿ ಕಾಣಸಿಗುತ್ತದೆ, ಹಿಮಾಚ್ಛಾದಿತ ಶಿಖರಗಳ ಮಧ್ಯೆ ನಿಂತಂತೆ ಭಾಸವಾಗುವ ಅನುಭವವನ್ನೂ ಇದು ನೀಡುತ್ತದೆ.
ಬದರಿನಾಥ್‌ನಿಂದ ಕೇವಲ 3 ಕಿಮೀ ದೂರದಲ್ಲಿರುವ ಮಾನಾ ಗ್ರಾಮ ಭಾರತ-ಟಿಬೆಟ್ ಗಡಿಯ ಕೊನೆಯ ವಾಸಸ್ಥಳವಾಗಿದ್ದು, ಇದರ ವಿಶೇಷತೆ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಇಲ್ಲಿ ಇರುವ ವ್ಯಾಸ ಗುಹೆ ಮಹಾಭಾರತದ ರಚನೆಗೆ ಸಂಬಂಧಿಸಿದಂತೆ ವೇದವ್ಯಾಸರು ಇಲ್ಲಿ ವಾಸಿಸಿ ಗ್ರಂಥವನ್ನು ರಚಿಸಿದರು ಎಂಬ ಪೌರಾಣಿಕ ನಂಬಿಕೆಯನ್ನು ಹೊಂದಿದೆ. ಹತ್ತಿರದಲ್ಲಿರುವ ಗಣೇಶ ಗುಹೆನಲ್ಲಿ ಗಣೇಶನು ವ್ಯಾಸರ ಲಿಖಿತ ಗ್ರಂಥವನ್ನು ಬರೆಯಲು ಸಹಾಯ ಮಾಡಿದನೆಂಬ ಕಥೆಯೂ ಪ್ರಸಿದ್ಧವಾಗಿದೆ.
ಮಾನಾ ಗ್ರಾಮದ ಸಮೀಪದಲ್ಲಿರುವ ಭೀಮ್ ಪುಲ್ ಸರಸ್ವತಿ ನದಿಯ ಮೇಲೆ ನಿರ್ಮಿತವಾದ ಭಾರೀ ನೈಸರ್ಗಿಕ ಶಿಲಾ ಸೇತುವೆಯಾಗಿದೆ. ಮಹಾಭಾರತದ ಪ್ರಕಾರ ಭೀಮನು ದ್ರೌಪದಿಗೆ ನದಿ ದಾಟಲು ಈ ಕಲ್ಲನ್ನು ಇಟ್ಟನೆಂಬ ಕಥೆ ಈ ಸ್ಥಳವನ್ನು ಇನ್ನಷ್ಟು ಪೌರಾಣಿಕವಾಗಿ ಮಹತ್ವಪೂರ್ಣಗೊಳಿಸುತ್ತದೆ. ಇಲ್ಲಿ ನಿಂತು ನದಿಯಲ್ಲಿ ನೀರು ಹರಿಯುವ ಶಬ್ಧ ಮತ್ತು ಕಣಿವೆಯ ದೃಶ್ಯವನ್ನು ನೋಡುವುದು ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತದೆ.
ಸಾಹಸಪ್ರಿಯರಿಗಾಗಿ ಮಾನಾ ಗ್ರಾಮದಿಂದ ಸುಮಾರು 6 ಕಿಮೀ ಟ್ರೆಕ್ ಮೂಲಕ ತಲುಪಬಹುದಾದ ವಸುಧಾರ ಜಲಪಾತ ಒಂದು ಅದ್ಭುತ ಸ್ಥಳವಾಗಿದೆ. ಸುಮಾರು 400 ಅಡಿ ಎತ್ತರದಿಂದ ಬೀಳುವ ಜಲಧಾರೆಯ ಸೌಂದರ್ಯ ಮನಮೋಹಕವಾಗಿದ್ದು, ಸ್ಥಳೀಯ ನಂಬಿಕೆಯ ಪ್ರಕಾರ ಶುದ್ಧ ಮನಸ್ಸಿನವರ ಮೇಲಷ್ಟೇ ಈ ನೀರಿನ ಹನಿ ಬೀಳುತ್ತದೆ ಎಂದು ಹೇಳಲಾಗುತ್ತದೆ.
ಬದರಿನಾಥ್ ಮೇಲೆ ನಿಂತು ಹಿಮಾಲಯದ ಶ್ರೇಣಿಯಲ್ಲಿ ಕಂಗೊಳಿಸುವ ನೀಲಕಂಠ ಶಿಖರ “ಗರ್ಹವಾಲ್ ರಾಣಿ” ಎಂದು ಕರೆಯಲ್ಪಡುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಈ ಶಿಖರವು ಚಿನ್ನದಂತೆ ಹೊಳೆಯುತ್ತದೆ, ಇದು ಫೋಟೋಗ್ರಫಿ ಮತ್ತು ಧ್ಯಾನಕ್ಕೆ ಅತ್ಯುತ್ತಮ ಸ್ಥಳವಾಗಿದೆ.
ಇನ್ನು ದೀರ್ಘ ಟ್ರೆಕ್ ಪ್ರಿಯರಿಗೆ ಸಾತೋಪಂಥ್ ಸರೋವರ ಅತ್ಯಂತ ಪವಿತ್ರ ಮತ್ತು ಸಾಹಸಮಯ ಗಮ್ಯಸ್ಥಾನವಾಗಿದೆ. ಸುಮಾರು 14,000 ಅಡಿ ಎತ್ತರದಲ್ಲಿರುವ ತ್ರಿಕೋನಾಕಾರದ ಈ ಸರೋವರದ ಬಗ್ಗೆ ತ್ರಿಮೂರ್ತಿಗಳು ಇಲ್ಲಿ ಧ್ಯಾನ ಮಾಡುತ್ತಾರೆ ಎಂಬ ನಂಬಿಕೆ ಇದೆ. ಈ ಮಾರ್ಗ ಹಿಮನದಿಗಳು, ಕಠಿಣ ಹಾದಿಗಳು ಮತ್ತು ಶುದ್ಧ ಪ್ರಕೃತಿ ಸೌಂದರ್ಯವನ್ನು ಒಳಗೊಂಡಿದೆ.
ಬದರಿನಾಥ್ ಸಮೀಪದಲ್ಲಿರುವ ಜೋಶಿಮಠ ಮತ್ತು ಆಲಿ ಪ್ರದೇಶಗಳು ಸಹ ಪ್ರವಾಸಿಗರನ್ನು ಆಕರ್ಷಿಸುತ್ತವೆ. ವಿಶೇಷವಾಗಿ ಔಲಿ ಭಾರತದಲ್ಲಿನ ಪ್ರಮುಖ ಸ್ಕೀಯಿಂಗ್ ತಾಣವಾಗಿದ್ದು, ಹಿಮಕಾಲದಲ್ಲಿ ಪ್ರವಾಸಿಗರಿಂದ ತುಂಬಿರುತ್ತದೆ. ಜೊತೆಗೆ Valley of Flowers National Park ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿದ್ದು, ಸಾವಿರಾರು ಹೂಗಳ ಸೌಂದರ್ಯದಿಂದ ಪ್ರಕೃತಿ ಪ್ರೇಮಿಗಳನ್ನು ಮೋಹಿಸುತ್ತದೆ.
ಒಟ್ಟಾರೆ ಬದರಿನಾಥ್ ಯಾತ್ರೆ ಕೇವಲ ಒಂದು ಧಾರ್ಮಿಕ ಪ್ರಯಾಣವಲ್ಲ, ಅದು ಭಕ್ತಿ, ಪೌರಾಣಿಕತೆ ಮತ್ತು ಹಿಮಾಲಯದ ಅದ್ಭುತ ಪ್ರಕೃತಿ ಸೌಂದರ್ಯವನ್ನು ಒಂದೇ ಅನುಭವದಲ್ಲಿ ಸೇರಿಸುವ ವಿಶಿಷ್ಟ ಆಧ್ಯಾತ್ಮಿಕ ಪ್ರಯಾಣವಾಗಿದೆ.
ದೇವಾಲಯದ ಪವಿತ್ರತೆ, ಮಾನಾ ಗ್ರಾಮದ ಪೌರಾಣಿಕ ಕಥೆಗಳು, ಜಲಪಾತಗಳು ಮತ್ತು ಹಿಮಾಚ್ಛಾದಿತ ಶಿಖರಗಳು-ಎಲ್ಲವೂ ಒಟ್ಟಾಗಿ ಹೃದಯದಲ್ಲಿ ಶಾಶ್ವತವಾಗಿ ಉಳಿಯುವ ಪ್ರಯಾಣವನ್ನು ಸೃಷ್ಟಿಸುತ್ತವೆ. ಇಲ್ಲಿ ಪ್ರತಿಯೊಂದು ಸ್ಥಳವೂ ಭಕ್ತಿಗೆ ಹೊಸ ಅರ್ಥವನ್ನು ನೀಡುತ್ತದೆ ಮತ್ತು ಪ್ರಕೃತಿಯ ಸೌಂದರ್ಯದಲ್ಲಿ ಆತ್ಮಶಾಂತಿಯನ್ನು ಹುಡುಕುವ ಅವಕಾಶವನ್ನು ನೀಡುತ್ತದೆ ನೀಡುತ್ತಿದೆ.