ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೇರಿ 2 ವರ್ಷ ಕಳೆದಿದ್ದು, ಸಾಕಷ್ಟು ನಿರೀಕ್ಷೆ ಮತ್ತು ಭರವಸೆಗಳೊಂದಿಗೆ ಅಧಿಕಾರದ ಗದ್ದುಗೆ ಏರಿದ್ದ ಎನ್ ಡಿಎ ಸರ್ಕಾರ ಕಳೆದ 2 ವರ್ಷಗಳಲ್ಲಿ ಸಾಕಷ್ಟು ಸಿಹಿಯೊಂದಿಗೆ ಕಹಿ ಅನುಭವ ಕೂಡ ಪಡೆದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ಅನುಭವಿಸಿದ ಪ್ರಮುಖ ಹಿನ್ನಡೆಗಳ ಪಟ್ಟಿ ಇಲ್ಲಿದೆ.
ಪ್ರಮುಖ ಮಸೂದೆಗಳ ಜಾರಿಯಲ್ಲಿ ವಿಫಲ
ಸಂಸತ್ತಿನ ಉಭಯ ಸದನಗಳಲ್ಲಿ ಅತೀ ಹೆಚ್ಚು ಸ್ಥಾನ ಹೊಂದಿರುವ ಎನ್ ಡಿಎ ಮೈತ್ರೀಕೂಟದ ಸರ್ಕಾರಕ್ಕೆ ಆತೀ ದೊಡ್ಡ ಹಿನ್ನಡೆ ಎಂದರೆ ಪ್ರಮುಖ ಮಸೂದೆಗಳ ಜಾರಿಯಲ್ಲಿನ ವಿಫಲತೆ. ಏಕೆಂದರೆ ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಎನ್ ಡಿಎ ಮೈತ್ರೀಕೂಟ ಅತೀ ಹೆಚ್ಚು ಸಂಖ್ಯಾಬಲವನ್ನು ಹೊಂದಿದೆ. ಹೀಗಿದ್ದೂ ಸರ್ಕಾರದ ಪ್ರಮುಖ ಉದ್ದೇಶಿತ ಮಸೂದೆಗಳಾದ ಜಿಎಸ್ ಟಿ, ಭೂ ಸ್ವಾಧೀನ ಮಸೂದೆ, ಜನಲೋಕಪಾಲ್ ಜಾರಿಯಲ್ಲಿ ಎನ್ ಡಿಎ ಸರ್ಕಾರ ವಿಫಲವಾಗಿದೆ.
ಯುಪಿಎ ಹಗರಣಗಳ ತನಿಖೆ
ಇನ್ನು ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಗೂ ಮೊದಲು ಯುಪಿಎ ಹಗರಣಗಳನ್ನು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕುರಿತು ಆಶ್ವಾಸನೆ ನೀಡಿದ್ದರು. ಆದರೆ ಸರ್ಕಾರ ರಚನೆಯಾಗಿ 2 ವರ್ಷಗಳೇ ಕಳೆದರೂ ಈ ವರೆಗೂ ಯುಪಿಎ ಅವಧಿಯಲ್ಲಿ ನಡೆದ ರಾಬರ್ಟ್ ವಾದ್ರಾ ಭೂಹಗರಣ, ಬಹುಕೋಟಿ ವಿವಿಐಪಿ ಕಾಪ್ಟರ್ ಖರೀದಿ ಹಗರಣ, ಕಲ್ಲಿದ್ದಲು ಹಗರಣ, ಕಾಮನ್ ವೆಲ್ತ್ ಕ್ರೀಡಾಕೂಟ ಹಗರಣ, ಐಪಿಎಲ್ ಹಗರಣ, 2ಜಿ ಸೇರಿದಂತೆ ಪ್ರಮುಖ ಹಗರಣಗಳ ತನಿಖೆ ಇನ್ನೂ ನಡೆಯುತ್ತಿದೆ. ಈ ಪೈಕಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿರ್ದೇಶನಗಳು ಮತ್ತು ಸರ್ಕಾರದ ಕೆಲ ದಿಟ್ಟ ನಡೆ ವೈಜ್ಞಾನಿಕ ರೀತಿಯಲ್ಲಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಾಗಲು ನೆರವಾಗಿದೆ. ಇದನ್ನು ಹೊರತು ಪಡಿಸಿದರೆ ಪ್ರಮುಖ ಹಗರಣಗಳ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಲ್ಲಿ ಈ 2 ವರ್ಷಗಳ ಅವಧಿಯಲ್ಲಿ ಎನ್ ಡಿಎ ಸರ್ಕಾರ ವಿಫಲವಾಗಿದೆ ಎಂದು ಹೇಳಬಹುದು.
ವಿದೇಶಾಂಗ ನೀತಿಯಲ್ಲಿನ ಮೃಧು ಧೋರಣೆ
ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಯಲ್ಲಿ ಪ್ರಶ್ನಾರ್ಥಕ ಚಿನ್ಹೆಯಾಗಿರುವ ಪಾಕಿಸ್ತಾನ ಮತ್ತು ಚೀನಾ ವಿಚಾರಗಳಲ್ಲಿ ಚುನಾವಣೆಗೂ ಮುಂಚಿನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೂ, ಚುನಾವಣೆಯ ನಂತರದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸಾಕಷ್ಟು ವ್ಯತ್ಯಾಸಗಳು ಕಂಡುಬಂದಿರುವ ಕುರಿತು ಮಾತುಗಳು ಕೇಳಿಬಂದಿವೆ. ಚುನಾವಣೆಗೂ ಮೊದಲು ಪಾಕಿಸ್ತಾನ ಮತ್ತು ಚೀನಾ ವಿರುದ್ಧ ಹರಿಹಾಯ್ದಿದ್ದ ನರೇಂದ್ರ ಮೋದಿ ಅವರು ಚುನಾವಣೆ ಗೆಲ್ಲುತ್ತಿದ್ದಂತೆಯೇ ಉಭಯ ನಾಯಕರಿಗೆ ಪ್ರಮಾಣವಚನಕ್ಕೆ ಆಹ್ವಾನ ನೀಡಿದ್ದರು. ಬಳಿಕ ಚೀನಾ ಪ್ರವಾಸ, ಅದರ ಬೆನ್ನಲ್ಲೇ ಚೀನಾ ಅಧ್ಯಕ್ಷರ ಭಾರತ ಪ್ರವಾಸ ಸರಣಿ ನಡೆದಿತ್ತು. ಇನ್ನೂ ಮಹತ್ತರ ಅಂಶವೆಂದರೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ಜನ್ಮ ದಿನದಂದು ದಿಢೀರ್ ಪಾಕಿಸ್ತಾನಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಖುದ್ಧು ಷರೀಫ್ ನಿವಾಸಕ್ಕೆ ತೆರಳಿ ಶುಭಕೋರಿದ್ದರು.
ಇನ್ನು ಚೀನಾದ ಪ್ರತ್ಯೇಕತಾವಾದಿ ಹಾಗೂ ಭಿನ್ನಮತೀಯ ನಾಯಕ ಡೋಲ್ಕನ್ ಇಸಾಗೆ ಚೀನಾದ ವಿರೋಧದ ನಡುವೆಯೂ ನೀಡಿದ್ದ ವೀಸಾವನ್ನು ಭಾರತ ರದ್ದು ಪಡಿಸಿತ್ತು. ಪಠಾಣ್‌ಕೋಟ್ ಉಗ್ರ ದಾಳಿ ರೂವಾರಿ ಮಸೂದ್ ಅಜರ್‌ನನ್ನು ವಿಶ್ವಸಂಸ್ಥೆಯು ‘ಭಯೋತ್ಪಾದಕ’ ಎಂದು ಘೋಷಿಸಲು ಚೀನಾ ಅಡ್ಡಗಾಲು ಹಾಕಿದ್ದರಿಂದ ಇಸಾ ಅವರಿಗೆ ಪ್ರವಾಸಿ ವೀಸಾ ನೀಡಲು ಮುಂದಾಗುವ ಮೂಲಕ ಭಾರತ ಸರ್ಕಾರ ಚೀನಾಗೆ ಟಾಂಗ್ ನೀಡಲು ಮುಂದಾಗಿದ್ದು. ಆದರೆ ವಿಶ್ವಮಟ್ಟದಲ್ಲಿ ಚೀನಾ ಹಾಕಿದ ಒತ್ತಡಕ್ಕೆ ಮಣಿಯಿತೋ ಅಥವಾ ವಿವಾದ ಬೇಡವೆಂದೋ ಏನೋ ಡೋಲ್ಕನ್ ಇಸಾಗೆ ನೀಡಿದ್ದ ವೀಸಾವನ್ನು ರದ್ದುಗೊಳಿಸಿತು. ಇವಿಷ್ಟೇ ಅಲ್ಲ ಇಟಲಿ ನಾವಿಕರ ಪ್ರಕರಣ, ಪಾಕ್ ಜೈಲಲ್ಲಿ ಸರಬ್ಜಿತ್ ಹತ್ಯೆ ಪ್ರಕರಣಗಳ ನಿರ್ವಹಣೆ ಈ ಎಲ್ಲ ಅಂಶಗಳನ್ನು ಗಮನಿಸಿದರೆ, ಚುನಾವಣಾ ಪೂರ್ವದಲ್ಲಿ ನರೇಂದ್ರ ಮೋದಿ ಅವರಲ್ಲಿದ್ದ ಆಕ್ರಮಣಶೀಲತೆ ಕಡಿಮೆಯಾಗಿ ಮೃಧು ಧೋರಣೆ ತಳೆದಿದ್ದಾರೆಯೇ ಎಂಬ ಅನುಮಾನ ಕಾಡತೊಡಗಿದೆ.
ಮೈತ್ರೀಕೂಟ ನಿರ್ವಹಣೆ
2014ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿದ್ದ ಬಿಜೆಪಿ ಪಕ್ಷ ಏಕಾಂಗಿಯಾಗಿ ಸರ್ಕಾರ ರಚಿಸುವ ಸಾಮರ್ಥ್ಯಹೊಂದಿತ್ತು. ಆದರೂ ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಚಿವ ಸ್ಥಾನ ನೀಡುವ ಮೂಲಕ ಅತ್ಯುತ್ತಮ ಮೈತ್ರೀಕೂಟ ನಿರ್ವಹಣೆಯ ಚಾಣಾಕ್ಷತನ ಪ್ರದರ್ಶಿಸಿತ್ತು. ಆದರೆ ಇದೇ ನಿರ್ವಹಣೆಯನ್ನು ಮುಂದುವರೆಸುವಲ್ಲಿ ಮೋದಿ ಸರ್ಕಾರ ವಿಫಲವಾಯಿತು ಎಂದು ತಜ್ಞರು ಹೇಳುತ್ತಿದ್ದಾರೆ. ಇದಕ್ಕೆ ಇತ್ತೀಚೆಗಿನ ಉದಾಹರಣೆ ಶಿವಸೇನೆ. ಚುನಾವಣೆಯಲ್ಲಿ ಎನ್ ಡಿಎಗೆ ಬೆಂಬಲ ಸೂಚಿಸಿ ಮೈತ್ರೀಕೂಟದಲ್ಲಿದ್ದ ಶಿವಸೇನೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತು. ಕೇವಲ ಇಷ್ಟೇ ಅಲ್ಲ ಇತ್ತೀಚೆಗಿನ ಪಂಚ ರಾಜ್ಯಗಳ ಚುನಾವಣೆಯಲ್ಲೂ ಶಿವಸೇನೆ ಬಿಜೆಪಿಗೆ ಮತನೀಡದಂತೆ ಮತದಾರರಲ್ಲಿ ಮನವಿ ಮಾಡುವ ಮೂಲಕ ಬಿಜೆಪಿ ತೀವ್ರ ಮುಜುಗರವನ್ನುಂಟು ಮಾಡಿತ್ತು. ಈ ಘಟನೆಗಳು ಮೈತ್ರೀಕೂಟ ನಿರ್ವಹಣೆಯಲ್ಲಿ ಬಿಜೆಪಿ ಎಡವುತ್ತಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಪ್ರಕರಣಗಳು
ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಅನೇಕ ಪ್ರಕರಣಗಳು ಈ ಎರಡು ವರ್ಷದ ಅವಧಿಯಲ್ಲಿ ನಡೆದಿದೆ. ಭಾರತದ ಬ್ಯಾಂಕುಗಳಿಂದ ಸಾಲ ಪಡೆದು ಅದನ್ನು ತೀರಿಸಲಾಗದೇ ವಿದೇಶದಲ್ಲಿ ಅವಿತಿರುವ ಉದ್ಯಮಿ ವಿಜಯ್ ಮಲ್ಯ ಪ್ರಕರಣ ಕೇಂದ್ರ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಕಾಶ್ಮೀರದ ಜಮ್ಮುವಿನಲ್ಲಿ ನಿರಾಶ್ರಿತರಾಗಿರುವ ಹಿಂದೂ ಪಂಡಿತರಿಗೆ ಪ್ರತ್ಯೇಕ ಕಾಲೋನಿ ನಿರ್ಮಿಸುವ ಮೋದಿ ಅವರ ಚುನಾವಣಾ ಪೂರ್ವ ಭರವಸೆ ಅಧಿಕಾರಕ್ಕೆ ಬಂದು 2 ವರ್ಷಗಳೇ ಕಳೆದರೂ ಇನ್ನೂ ಭರವಸೆಯಾಗಿಯೇ ಇದೆ. ಇತ್ತೀಚೆಗೆ ಕಾಲೋನಿ ನಿರ್ಮಾಣಕ್ಕೆ ಭೂಮಿ ಮಂಜೂರಾಗಿತ್ತಾದರೂ ಸ್ಥಳೀಯ ಪ್ರತ್ಯೇಕತಾ ವಾದಿಗಳ ವಿರೋಧದಿಂದಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆದಿತ್ತು. ಇನ್ನು ಅಂತಾರಾಷ್ಟ್ರೀಯ ಯೋಗದಿನ ವಿವಾದ ಕೂಡ ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಯೋಗ ಹೇರುವಿಕೆಯಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಆರೋಪಿಸಿ ದೇಶಾದ್ಯಂತ ಅಲ್ಪ ಸಂಖ್ಯಾತ ಸಮುದಾಯಗಳು ವ್ಯಾಪಕ ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ಅಂತಿಮವಾಗಿ ಯೋಗದಲ್ಲಿ ಓಂ ಪದವನ್ನು ಆಯ್ಕೆಯ ವಿಚಾರ ಮಾಡಿತು.
ಚುನಾವಣೆ ಸೋಲು
ಇನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರಮುಖ ಹಿನ್ನಡೆಗಳಲ್ಲಿ ಚುನಾವಣಾ ಸೋಲುಗಳು ಕೂಡ ಪ್ರಮುಖ. ಅಧಿಕಾರಕ್ಕೇರಿದ ಮೊದಲ ವರ್ಷದಲ್ಲೇ ದೆಹಲಿ, ಬಿಹಾರ ಮತ್ತು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲುಂಡಿತ್ತು. ಬಳಿಕ ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲೂ ಅಸ್ಸಾಂ ಅನ್ನು ಹೊರತು ಪಡಿಸಿದರೆ ಉಳಿದ ನಾಲ್ಕು ರಾಜ್ಯಗಳಲ್ಲಿನ ಬಿಜೆಪಿ ಸಾಧನೆ ಕಡಿಮೆಯೇ ಎಂದು ಹೇಳಬಹುದು.
ಕಪ್ಪುಹಣ ವಿಚಾರ
ಚುನಾವಣೆಗೂ ಮೊದಲು ಪ್ರತೀ ಭಾಷಣದಲ್ಲೂ ಕಪ್ಪುಹಣವನ್ನೇ ಕೇಂದ್ರವಾಗಿಟ್ಟುಕೊಂಡು ಭಾಷಣ ಮಾಡುತ್ತಿದ್ದ ಪ್ರಧಾನಿ ಮೋದಿ ಅಧಿಕಾರಕ್ಕೇರಿದ ಬಳಿಕ ವಿದೇಶದಲ್ಲಿದೆ ಎಂದು ಹೇಳಲಾಗುತ್ತಿರುವ ಅಗಾಧ ಪ್ರಮಾಣದ ಕಪ್ಪುಹಣವನ್ನು ಭಾರತಕ್ಕೆ ವಾಪಸ್ ತರುವ ನಿಟ್ಟಿನಲ್ಲಿ ಮಾಡಿದ ಪ್ರಯತ್ನಗಳು ಯಶಕಂಡಿಲ್ಲ. ಈ ಬಗ್ಗೆ ತಮ್ಮದೇ ಪಕ್ಷದ ಪ್ರಮುಖ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ವಿರುದ್ಧ ಪ್ರಧಾನಿ ಪತ್ರ ಬರೆಯುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಪನಾಮಾ ಪೇಪರ್ ಲೀಕ್ ಪ್ರಕರಣ ಕೂಡ ಇದಕ್ಕೆ ಇತ್ತೀಚಿನ ಉದಾಹರಣೆಯಷ್ಟೇ.
ಅಸಹಿಷ್ಣುತೆ ಮತ್ತು ಬಿಜೆಪಿ ಮುಖಂಡರ ವಿವಾದಾತ್ಮಕ ಹೇಳಿಕೆ
ಹಿಂದುತ್ವದ ಆಧಾರದ ಮೇಲೆ ಪ್ರಧಾನಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂಬ ಆರೋಪಗಳು ಕೇಳಿಬರುತ್ತಿರುವಂತೆಯೇ ಸರ್ಕಾರದ ಆರಂಭಿಕ ದಿನಗಳಲ್ಲಿ ಸರ್ಕಾರದ ವಿರುದ್ಧ ಅಸಹಿಷ್ಣುತೆಯ ಮಾತುಗಳು ಕೇಳಿಬಂದಿದ್ದವು. ಬಾಲಿವುಡ್ ಪ್ರಮುಖ ನಟರ ಹೇಳಿಕೆಗಳು ವ್ಯಾಪಕ ಪ್ರಚಾರ ಪಡೆದಿದ್ದವು. ಇದಕ್ಕೆ ಇಂಬು ನೀಡುವಂತೆ ದಾದ್ರಿ, ಕಲ್ಬುರ್ಗಿ ಹತ್ಯೆ, ಮಹಾರಾಷ್ಟ್ರದಲ್ಲಿ ಚಿಂತಕರ ಹತ್ಯೆಯಂತಹ ಪ್ರಕರಣಗಳು ಮೋದಿ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದ್ದವು. ಇದರ ಬೆನ್ನಲ್ಲೇ ಪ್ರಶಸ್ತಿ ವಾಪ್ಸೀ ಪ್ರಕರಣ ಕೂಡ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಇದರ ನಡುವೆಯೇ ಬಿಜೆಪಿ ಮುಖಂಡರ ವಿವಾದಾತ್ಮಕ ಹೇಳಿಕೆಗಳು ಗಾಯದ ಮೇಲೆ ಉಪ್ಪು ಸುರಿವಂತೆ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು. ಇದಕ್ಕೆ ಖಡಕ್ ಎಚ್ಚರಿಕೆ ನೀಡಿದ್ದ ಪ್ರಧಾನಿ ಮೋದಿ ವಿವಾದಾತ್ಮಕ ಹೇಳಿಕೆ ನೀಡುವ ಸಂಸದರಿಗೆ ಕಿವಿಮಾತು ಹೇಳಿದ್ದರು. ಆದರೂ ಇಂದಿಗೂ ಸಾಕ್ಷಿ ಮಹಾರಾಜ್, ಸಾಧ್ವಿ ನಿರಂಜನ್ ರಂತಹ ಬಿಜೆಪಿ ಮುಖಂಡರ ವಿವಾದಾತ್ಮಕ ಹೇಳಿಕೆ ಸರಣಿಗೆ ಬ್ರೇಕ್ ಬಿದ್ದಿಲ್ಲ.
ಒಆರ್ ಒಪಿ ಮತ್ತು ಬುಲೆಟ್ ಪ್ರೂಫ್ ಜಾಕೆಟ್ ಅಭಿಯಾನ
ಅಭಿವೃದ್ಧಿ ಮಂತ್ರದ ಮೇಲೆ ಅಧಿಕಾರಕ್ಕೇರಿದ ಎನ್ ಡಿಎ ಸರ್ಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿದ ಪ್ರಕರಣಗಳಲ್ಲಿ ಸೈನಿಕರಿಗೆ ಭಡ್ತಿ ಮತ್ತು ಪಿಂಚಣಿ ನೀಡುವ ಒಆರ್ ಒಪಿ ಯೋಜನೆ ಕೂಡ ಒಂದು. ದೇಶದ ಭದ್ರತೆಗಾಗಿ ಗಡಿಯಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಕಾವಲು ಕಾಯುವ ಯೋಧರಿಗೆ ಭಡ್ತಿ ಮತ್ತು ಪಿಂಚಣಿ ನೀಡಲು ಕೇಂದ್ರ ಸರ್ಕಾರ ಮೀನಾಮೇಷ ಎಣಿಸಿದ್ದು, ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಮಾಜಿ ಮತ್ತು ಹಾಲಿ ಸೈನಿಕರ ವ್ಯಾಪಕ ಪ್ರತಿಭಟನೆಯ ಬಳಿಕ ಕೇಂದ್ರ ಸರ್ಕಾರ ಒಆರ್ ಒಪಿ ಯೋಜನೆಗೆ ಅಸ್ತು ಎಂದಿತ್ತು. ಇನ್ನು ಸೈನಿಕರ ರಕ್ಷಣೆಗಾಗಿ ಬುಲೆಟ್ ಪ್ರೂಫ್ ಜಾಕೆಟ್ ನೀಡಬೇಕು ಎನ್ನುವ ದಶಕಗಳ ಹಳೆಯ ಬೇಡಿಕೆಗೆ ದೇಶಾದ್ಯಂತ ಭಾರಿ ದೊಡ್ಡ ಮಟ್ಟದಲ್ಲಿ ಅಭಿಯಾನವೇ ನಡೆದು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಯಾದ ಬಳಿಕ ಕೇಂದ್ರ ಸರ್ಕಾರ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್ ಒದಗಿಸುವ ನಿರ್ಧಾರಕ್ಕೆ ಬಂದಿತು. ದೇಶ ಕಾಯುವ ಸೈನಿಕರಿಗೆ ನೀಡಬೇಕಾದ ಈ ಸವಲತ್ತುಗಳನ್ನು ನೀಡಲು ಕೇಂದ್ರ ಸರ್ಕಾರ ಈ ಪರಿ ಯೋಚಿಸಬೇಕಿತ್ತೆ ಎಂಬ ವಿಚಾರ ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.