ಅದು ಹಾಗೇಕೋ ಕಾಣೆ. 'ಅಬ್ಬ ಎಂಥ ಒಳ್ಳೆಯ ಲಡ್ಡು ಕೊಟ್ಟಿರಿ? ಬಾಯಿಗೆ ಹಾಕುವುದೇ ತಡ ಕರಗುವುದು' ಎನ್ನುವ ಮನಸಿಗೆ ಕಡಲೆ ಉತ್ತು ಬಿತ್ತು ಬೆಳೆದ, ಕಬ್ಬು ಅರೆದ, ಕಡೆಗೆ ಹದ ಪಾಕವಿಳಿಸಿದ ಕೈಗಳ ನೆನಪು ಅಪ್ಪಿತಪ್ಪಿಯೂ ಬರುವುದಿಲ್ಲ. ಎಂಥ ವಿಪರ್ಯಾಸ! ಅದೆಷ್ಟು ಉಪಕಾರಿ, ಆಪದ್ಬಂಧುಗಳನ್ನು ಕಂಡೂ ಕಾಣದಂತೆ ಕಡೆಗಣಿಸಿಬಿಡುತ್ತೇವೆ. ಅವರ ಸೇವೆ ಸೇವೆಯೇ ಅಲ್ಲ ಎನ್ನುವ ಹಾಗೆ ನಮ್ಮ ನಿಲುವು, ನಿರ್ಲಕ್ಷ್ಯ.
ಪೇಪರ್ ಹುಡುಗ ಬೆಳ್ಳಂಬೆಳಗ್ಗೆ ನೀರಿನಲ್ಲಿ ಪೇಪರ್ ಹಾಕಿ ಹೋದನೆಂದು ಪಕ್ಕದ ಮನೆಯಾತ ಆತನನ್ನು ಅರ್ಧ ತಾಸು ಶಪಿಸಿದ್ದೇ ಶಪಿಸಿದ್ದು. ಹೋಗಲಿ ಬಿಡಿ ಪಾಪ, ನಿತ್ಯವೂ ಪೇಪರ್ ತಂದುಕೊಡುತ್ತಾನೆ. ಆಗೊಮ್ಮೆ ಈಗೊಮ್ಮೆ ಹೀಗಾದೀತು. ಅವನೇನು ಬಕೆಟ್ ನೀರಿನಲ್ಲಿ ಪೇಪರ್ ಮುಳುಗಿಸಲಿಲ್ಲವಲ್ಲ ಅಂತ ಆತನ ಪತ್ನಿ ಶಾಂತವಾಗಿಸಿದ್ದಾಯ್ತು.
ಕೆಲಸದಾಕೆ ಒಂದು ದಿನ ಗೈರಾಗುವುದಿರಲಿ, ಹತ್ತೇ ಹತ್ತು ನಿಮಿಷ ತಡವಾಗಿ ಬಂದರೂ 'ಏನು ಜವಾಬ್ದಾರಿ ಬೇಡ್ವಾ? ನಾವು ಕಾಸಲ್ದೇ ಕಲ್ಲಾ ನಿಂಗೆ ಕೊಡೋದು? ಆಗ್ದಿದ್ರೆ ಬಿಟ್ಬಿಡು' ಅಂತೆಲ್ಲ ಏರುದನಿಯಲ್ಲಿ ತಾಕೀತುಗಳು. 'ಪ್ರತಿದಿನ ಕೆಲಸ ಮಾಡಿಕೊಟ್ಟು ಹೋಗ್ತೀನಲ್ಲಾ, ಒಂದು ದಿನನಾದ್ರೂ, ಸರಿ ಹೋಗಿ ಬಾಮ್ಮಾ ಅಂದಿದ್ದೀರಾ' ಎಂದು ಆಕೆ ಪ್ರಶ್ನಿಸಿದರೆ ಮನೆಯವರು ಏನು ಉತ್ತರಿಸುತ್ತಾರೆ?
ಸದ್ಯ, ಪ್ಯಾಕೆಟ್ ಹಾಲು ಸರಬರಾಜು ಮಾಡುವ ಹುಡುಗನಿಗೆ ಹಾಲು ನೀರೆಂಬ ಮನೆಯವರ ಆವಾಜ್‌ನಿಂದ ಮುಕ್ತಿ! ಇನ್ನುಳಿದಂತೆ ಸ್ವಲ್ಪ ತಡ ಮಾಡಿದರೂ ಗೊಣಗು ತಪ್ಪಿದ್ದಲ್ಲ. ವ್ಯಾನ್ ಬರುವುದೇ ತಡವಾಗಬಹುದು. ಆತನ ಬೈಸಿಕಲ್ ಪಂಕ್ಚರ್ ಆಗಿರಬಹುದು. ಈಚೆಗಂತೂ ನಗರಗಳಲ್ಲಿ ನಸುಕಿನಲ್ಲೇ ಟ್ರಾಫಿಕ್ ಜಾಮ್ ಬೇರೆ.ನಾವೇಕೆ ಅಂಥ ಸಂಭಾವ್ಯಗಳನ್ನು ಪರಿಗಣಿಸುವುದಿಲ್ಲ? ಮೂಲೆ ಮನೆ ವರದಜ್ಜನನ್ನು ಮೆಚ್ಚಲೇಬೇಕು. ಪ್ರತಿ ತಿಂಗಳೂ ಮೊದಲ ತೇದಿ ಹಾಲಿನವನಿಗೆ ಹಣ ಪಾವತಿಸಿ ಕೂಪನ್ ಕೊಂಡು ಸ್ವಲ್ಪ ಇರಪ್ಪ, ತಿಂಗಳು ಪೂರ್ತಿ ಹಾಲು ತಂದುಕೊಡ್ತಿ, ಒಂದು ಲೋಟ ಕಾಫಿ ಕುಡಿಯುವಿಯಂತೆ ಎಂದು ಸೌಜನ್ಯ ಮೆರೆಯುತ್ತಾರೆ. ಇಲ್ಲಿ ಸನ್ಮಾನ ಸರಿ, ಉಳಿದ ಮನೆಗಳಲ್ಲಿ ಇನ್ನೇನು ಅವಮಾನ ಕಾದಿದೆಯೋ ಎಂದು ಅವನು ಗಟಗಟನೆ ನೀರು ಕುಡಿದಂತೆಕಾಫಿ ಕುಡಿದು ಮಾಯವಾಗಿರುತ್ತಾನೆ. ಆದರೆ ಅಜ್ಜನ ಸಮಾಧಾನ ಅಜ್ಜನಿಗೆ. ಇದರಿಂದ ಸ್ಫೂರ್ತಿಗೊಂಡ ಸೊಸೆ ಶೀಲಾ ಹಬ್ಬಗಳಂದು ಬೀದಿ ಕಸ ಗುಡಿಸುವವರಿಗೆ ತಿಂಡಿ ನೀಡುತ್ತಾಳೆ.
ಪಾರ್ಸೆಲ್, ಅಮೂಲ್ಯ ಕಾಗದ ಪತ್ರ ಏನೇ ಇರಲಿ, ಮುತುವರ್ಜಿಯಿಂದ ಮನೆ ಬಾಗಿಲಿಗೆ ತಂದು ಹಾಕುವ ಅಂಚೆಯಣ್ಣನಿಗೊಂದು ಸಲಾಮ್, ಶಾಲೆಗೆ ನಿತ್ಯವೂ ಮಕ್ಕಳನ್ನು ಜೋಪಾನವಾಗಿ ಕರೆದೊಯ್ಯುವಾಕೆಗೊಂದು ವಂದನೆ ದುಬಾರಿಯೇನಲ್ಲ. ಬೀಟ್‌ನವನಿಗೆ ಟಿಪ್ಸ್ ಕೊಡುವಾಗ ಪ್ರತಿನಿತ್ಯ ಅವನಿದ್ದಾನೆ ಎಂಬ ನಂಬಿಕೆಗೇ ನಾವು ಚೆನ್ನಾಗಿ ನಿದ್ದೆ ಮಾಡುತ್ತಿದ್ದುದೆಂಬ ಸ್ಮರಣೆ, ಕಸದ ವಿಲೇವಾರಿ ನೋಡಿಕೊಳ್ಳುವ ಶ್ರಮಿಕರಿಗೆ ನಮನ ಸಲ್ಲಿಸಲೇನಡ್ಡಿ? ಕುಕ್ಕರ್, ಮಿಕ್ಸರ್ ರಿಪೇರಿಯವರು, ಪಾತ್ರೆ ಪಗಡಗಳಿಗೆ ಕಲಾಯಿ ಹಾಕುವವರು ಮನೆ ಮುಂದೆ ಬಂದು ಕೆಲಸ ಮಾಡಿಕೊಡುತ್ತಾರಲ್ಲಾ, ಆ ಚಿಕ್ಕ ಕೆಲಸದಿಂದ ನಮ್ಮ ಎಷ್ಟು ಕೆಲಸಗಳು ಹಗುರವಾಯಿತು ಎಂಬ ಬಗ್ಗೆ ನಾವು ಯೋಚಿಸುವುದೇ ಇಲ್ಲ. ಟ್ಯಾಂಕ್ ಕ್ಲೀನ್ ಮಾಡಿಸ್ತೀರಾ? ತೆಂಗಿನಕಾಯಿ ಕೀಳಿಸ್ತೀರಾ ಅಂತ ಬರುವವರುಂಟು. ಅವರ ಸೇವೆ ಪಡೆದುಕೊಂಡರೆ ನಮ್ಮ ಅನಿವಾರ್ಯಕ್ಕೂ ಪರಿಹಾರ. ಅವರಿಗೂ ಒಂದಿಷ್ಟು ಪಗಾರ. ಇವರ ಬಳಿಯೆಲ್ಲಾ ಒಂದು ರುಪಾಯಿಗೆ ಗಂಟೆಗಟ್ಟಲೆ ವರಾತ ತೆಗೆಯುವ ನಾವು ಮಾಲ್‌ಗಳಲ್ಲಿ ಸಾವಿರಗಟ್ಟಲೆ ಸುರಿದು ಬರುವುದಿಲ್ಲವೇ? ಇವರನ್ನೆಲ್ಲಾ ಪ್ರೀತಿಯಿಂದ ಕಾಣುವುದು, ಒಂದೆರಡು ರುಪಾಯಿ ಹೆಚ್ಚೇ ಕೊಟ್ಟು ಕಳಿಸುವುದು ನಮ್ಮ ಸಾಮಾಜಿಕ ಜವಾಬ್ದಾರಿಯಲ್ಲವೇ?
ಮನೆ ಮನೆ ಪರಿಚಾರಕರೆನ್ನಿ, ಸರಬರಾಜುದಾರರೆನ್ನಿ, ಅವರಿಗೆಲ್ಲ ವರ್ಷಕ್ಕೊಮ್ಮೆ, ಕಡೇ ಪಕ್ಷ ಒಮ್ಮೆ ಥ್ಯಾಂಕ್ಸ್ ಹೇಳುವಷ್ಟು ಸಂವೇದನೆ ನಮ್ಮಲ್ಲಿನ್ನೂ ಉಳಿದಿದೆಯಲ್ಲವೇ?
-ಬಿಂಡಿಗನವಿಲೆ ಭಗವಾನ್