ಏಪ್ರಿಲ್, ಮೇ ಬಂದರೆ ಸೂರ್ಯನ ಶಾಖವನ್ನು ಸಹಿಸಲಸಾಧ್ಯ. ದೇಹದ ತುಂಬೆಲ್ಲ ಬೆವರಿನ ಗುಳ್ಳೆಗಳು... ಯಾವ ಕೂಲ್ ಪೌಡರ್, ಸೋಪ್ ಬಳಸಿದರೂ ಪ್ರಯೋಜನವಿಲ್ಲ. ಫ್ಯಾನ್, ಎಸಿ ಸ್ವಿಚ್ ಆನ್ ಮಾಡೋಣ ಎಂದರೆ ಕರೆಂಟೇ ಇಲ್ಲ. ದೊಡ್ಡವರು ಈ ಬಿಸಿಲನ್ನು ಹೇಗೋ ತಡೆದುಕೊಳ್ಳುತ್ತಾರೆ. ಅದೇ ಚಿಕ್ಕ ಮಕ್ಕಳು ಹೇಗೆ ಈ ಬಿರು ಬಿಸಿಲನ್ನು ಸಹಿಸಬೇಕು? ಅವುಗಳಿಗೆ ಅಳುವುದೊಂದು ಬಿಟ್ಟರೆ ಬೇರೇನೂ ತೋಚುವುದಿಲ್ಲ. ಅದಕ್ಕಾಗಿಯೇ ಈ ಬೇಸಿಗೆಗೆ ಮಕ್ಕಳನ್ನು ಆದಷ್ಟು ಕೂಲ್ ಆಗಿ ಇಡುವುದು ಹೇಗೆ ಎಂಬ ಬಗ್ಗೆ ಇಲ್ಲದೆ ಕೆಲವು ಸಲಹೆಗಳು...
* ಮಕ್ಕಳನ್ನು ಸಾಕಷ್ಟು ಗಾಳಿ, ಬೆಳಕು ಬರುವ ಕೋಣೆಯಲ್ಲೇ ಮಲಗಿಸಿ. ಕಿಟಕಿಗಳನ್ನು ತೆರೆದಿಡಿ.
* ಮಕ್ಕಳಿಗೆ ಎಣ್ಣೆ ಹಚ್ಚಿ ಬೇಗ ಸ್ನಾನ ಮಾಡಿಸಿ. ಎಣ್ಣೆ ಹಚ್ಚಿ ತುಂಬಾ ಹೊತ್ತು ಬಿಟ್ಟಾಗ ಬೆವರಿಗೆ ಅದು ಅಂಟಿದಂತಾಗಿ ಮತ್ತಷ್ಟು ಕಿರಿಕಿರಿಯಾಗಿ ಮಕ್ಕಳು ರಚ್ಚೆ ಹಿಡಿಯಬಹುದು. ಸ್ನಾನಕ್ಕೆ ಹದವಾದ ಬಿಸಿ ನೀರು ಬಳಸಿ.
*ರಾತ್ರಿ ಮಲಗುವ ಮುಂಚೆ ಅವುಗಳ ಮೈಯನ್ನು ಒದ್ದೆ ಬಟ್ಟೆಯಿಂದ ಒರೆಸಿ ಬೇರೆ ಬಟ್ಟೆ ಹಾಕಿದಾಗ ರಿಫ್ರೆಶ್ ಆಗುತ್ತವೆ.
* ಸ್ನಾನವಾದ ಮೇಲೆ ಮಕ್ಕಳ ಮೈಯನ್ನು ಚೆನ್ನಾಗಿ ಒರೆಸಿ ಎಲ್ಲ ಕಡೆಗೂ ಪೌಡರ್ ಹಾಕಿ. ಎರಡು ಮೂರು ತಿಂಗಳ ಮಕ್ಕಳಾಗಿದ್ದರೆ ಅವುಗಳಿಗೆ ಬಟ್ಟೆ ಸುತ್ತುವಾಗ ಕಾಟನ್ ಬಟ್ಟೆಗಳನ್ನೇ ಸುತ್ತಿ ಮಲಗಿಸಿ. ನಾಲ್ಕೈದು ತಿಂಗಳ ಮಕ್ಕಳಾಗಿದ್ದರೆ ತೆಳುವಾದ ಕಾಟನ್ ಅಂಗಿಗಳನ್ನು ಹಾಕಿ. ಸಿಂಥೆಟಿಕ್, ಪಾಲಿಸ್ಟರ್ ಬಟ್ಟೆಗಳು ಬೇಸಿಗೆಗೆ ಉತ್ತಮ ಅಲ್ಲ.
* ಮಕ್ಕಳನ್ನು ತೊಟ್ಟಿಲಲ್ಲಿ ಮಲಗಿಸುವಾಗ ರಬ್ಬರ್ ಶೀಟ್ ಮೇಲೆ ದಪ್ಪವಾದ ಕಾಟನ್ ಬಟ್ಟೆಗಳನ್ನು ಹಾಸಿ. ಮಕ್ಕಳು ಮಲಗಿದಾಗ ಮೈ ಶಾಖಕ್ಕೆ ರಬ್ಬರ್ ಶೀಟ್ ಕೂಡ ಬಿಸಿಯಾಗುವುದರಿಂದ ಮಕ್ಕಳು ಸೆಕೆ ತಾಳಲಾರದೆ ಬೇಗ ಏಳಬಹುದು. ಆಗ ಅವುಗಳ ಅಳು ನಿಲ್ಲಿಸುವುದೇ ಕಷ್ಟವಾಗಬಹುದು. ತೆಳುವಾದ ಕಾಟನ್ ಬಟ್ಟೆಯನ್ನು (ಪಂಚೆಯೋ, ಸೀರೆಯೋ) ಮೇಲೆ ಹೊದಿಸುವುದು ಸೂಕ್ತ.
* ನೀವು ಮಕ್ಕಳಿಗೆ ಮನೆಯಲ್ಲಿರುವಾಗಲೂ ಡೈಪರ್ ಬಳಸುತ್ತಿದ್ದರೆ ಮಕ್ಕಳು ಮೂರ್ನಾಲ್ಕು ಬಾರಿ ಮೂತ್ರ ಮಾಡಿದ ಕೂಡಲೇ ಬದಲಿಸುವುದು ಒಳ್ಳೆಯದು. ಡೈಪರ್ ನೀರನ್ನು ಹೀರಿಕೊಂಡರೂ ಗಾಳಿಯಾಡದೇ ಇರುವುದರಿಂದ ಕಿರಿಕಿರಿಯಾಗಬಹುದು. ಅಲ್ಲದೆ ಸಣ್ಣ ಗುಳ್ಳೆಗಳಾಗಿ ಉರಿಯಬಹುದು.
* ಮನೆಯಲ್ಲಿರುವಾಗ ಮಕ್ಕಳಿಗೆ ಆದಷ್ಟು ನಾವೇ ಬಟ್ಟೆಯಿಂದ ಮಾಡಿದ ನ್ಯಾಪ್‌ಕಿನ್‌ಗಳನ್ನು ಬಳಸುವುದು ಒಳ್ಳೆಯದು. ಕಾಟನ್ ಬಟ್ಟೆಗಳಿಂದ ಹತ್ತು ಹದಿನೈದು ನ್ಯಾಪ್‌ಕಿನ್‌ಗಳನ್ನು ಮಾಡಿಟ್ಟುಕೊಂಡರೆ ಮಕ್ಕಳು ಮೂತ್ರ ಮಾಡಿದಾಗ ಆಗಾಗ ಬದಲಿಸಲು ಸುಲಭವಾಗುತ್ತದೆ.
* ತಾಯಿಯ ಹಾಲಿನ ಜತೆಗೆ ಮಕ್ಕಳಿಗೆ ಆಗಾಗ ಸ್ವಲ್ಪ ಸ್ವಲ್ಪ ನೀರನ್ನು ಕುಡಿಸಿ. ಮಕ್ಕಳು ದಿನಕ್ಕೆ ಹತ್ತರಿಂದ ಹನ್ನೆರಡು ಸಲ ಮೂತ್ರ ಮಾಡುವುದರಿಂದ ಹಾಗೂ ಬೇಸಿಗೆಗೆ ಮೈ ಬೆವರುವುದರಿಂದ ನೀರಿನ ಅಂಶ ದೇಹದಲ್ಲಿ ಕಡಿಮೆಯಾಗುತ್ತದೆ. ನೀವು ಕೆಲಸಕ್ಕೆ ಹೋಗುವವರಾದರೆ ಮಕ್ಕಳಿಗೆ ಆ ಸಮಯದಲ್ಲಿ ಎದೆಹಾಲು ಸಿಗದೆ ಇರುವುದರಿಂದ ಮಕ್ಕಳ ಬಾಯಿ ಒಣಗಿದಂತಾಗಬಹುದು. ಹಾಗಾಗಿ ನೀರು ಅಥವಾ ಮೂಸಂಬಿ ಹಣ್ಣಿನ ರಸ ಕುಡಿಸಲು ಅಭ್ಯಾಸ ಮಾಡಿಕೊಳ್ಳಿ.
* ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗುವಾಗ ಬಿಸಿಲಿನ ಕಿರಣಗಳು ನೇರವಾಗಿ ಮಕ್ಕಳ ಮೈಗೆ ತಾಗದಂತೆ ಎಚ್ಚರ ವಹಿಸಿ. ಮಕ್ಕಳ ಚರ್ಮ ಸೂಕ್ಷ್ಮವಾಗಿರುವುದರಿಂದ ಸನ್‌ಬರ್ನ್ ಆಗಬಹುದು. ಮೈ ಮೇಲೆ ತೆಳುವಾದ ಬಟ್ಟೆಯನ್ನು ಹೊದಿಸಿಕೊಳ್ಳುವುದು ಉತ್ತಮ.
* ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗುವಾಗ ಆದಷ್ಟು ಸಂಜೆಯ ಹೊತ್ತಿನಲ್ಲೇ ಕರೆದುಕೊಂಡು ಹೋಗಿ.
* ಬೇಸಿಗೆ ಬಂತೆಂದರೆ ಮದುವೆ, ಮುಂಜಿಗಳೂ ಜಾಸ್ತಿ. ಇಂಥ ಫಂಕ್ಷನ್‌ಗಳಲ್ಲಿ ಜನ ಜಾಸ್ತಿ ಇರುವುದರಿಂದ ಮಕ್ಕಳಿಗೆ ಒಂದೆಡೆ ಸೆಕೆಯಾದರೆ ಇನ್ನೊಂದು ಕಡೆ ಅಷ್ಟೊಂದು ಜನ, ಅಲ್ಲಿನ ಸೌಂಡ್‌ಗಳಿಂದ ತುಂಬಾ ಕಿರಿಕಿರಿ ಅನುಭವಿಸುತ್ತವೆ. ಹೇಳಿಕೊಳ್ಳಲಾಗದ ಅವು ರಚ್ಚೆ ಹಿಡಿಯುತ್ತವೆ. ಮೊದಲೇ ತಡೆಯಾಲರದಷ್ಟು ಸೆಕೆ, ಇನ್ನು ಮಗುವೂ ಅಳುತ್ತಿದ್ದರೆ ತಾಯಿಗೆ ಸಿಟ್ಟು ಬರುವುದಂತೂ ಗ್ಯಾರಂಟಿ. ಹಾಗಾಗಿ ಫಂಕ್ಷನ್‌ಗಳಿಗೆ ಹೋಗುವಾಗ ಮಕ್ಕಳನ್ನು ಯಾರೊಂದಿಗಾದರೂ ಮನೆಯಲ್ಲೇ ಬಿಟ್ಟು ಹೋಗುವುದು ಉತ್ತಮ. ಅನಿವಾರ್ಯವಾದಲ್ಲಿ ಮಕ್ಕಳಿಗೆ ತುಂಬಾ ಝಗಮಗಿಸುವ ಬಟ್ಟೆಯನ್ನು ಹಾಕದೆ ಸಿಂಪಲ್ ಆಗಿರುವಂಥ ಸ್ಲೀವ್‌ಲೆಸ್ ಉಡುಪುಗಳನ್ನು ತೊಡಿಸಿ ಕರೆದುಕೊಂಡು ಹೋಗಿ.
-ಚಿತ್ರಾ. ಸಿ.ಆರ್.