ನಾವು ಆಯ್ಕೆ ಮಾಡಿಕೊಂಡಿರುವ ಬಿಡುವಿಲ್ಲದ ಜೀವನಶೈಲಿಯಲ್ಲಿ ಎಲ್ಲ ಕಾಲದಲ್ಲೂ ಅದರಲ್ಲೂ ಬೆವರುವ ಬೇಸಿಗೆಯಲ್ಲಿ ಕೂದಲು ಆರೈಕೆಯನ್ನು ನಿರ್ಲಕ್ಷಿಸಿಸುತ್ತಿದ್ದೇವೆ.
ಸೂರ್ಯನ ಕಿರಣ ನಮ್ಮ ತಲೆಕೂದಲನ್ನು ಸುಟ್ಟು ಹಾಕುವುದಿಲ್ಲ ನಿಜ. ಆದರೆ ನಮ್ಮ ತಲೆ ಕೂದಲುಗಳಲ್ಲಿರುವ ನೈಸರ್ಗಿಕ ಸುರಕ್ಷತಾ ಪದರವನ್ನು ಹಾಳುಗೆಡವುತ್ತವೆ. 3-4 ದಿನಗಳವರೆಗೆ ಸತತವಾಗಿ ಬಿಸಿಲನ್ನು ಎದುರಿಸುತ್ತಿದ್ದರೆ, ತಲೆಯಲ್ಲಿರುವ ರಕ್ಷಣಾ ಜೀವಕೋಶಗಳು ನಾಶವಾಗುತ್ತವೆ. ಇದರಿಂದ ಕೂದಲು ಶುಷ್ಕವಾಗುತ್ತದೆ, ಕಳೆಗುಂದುತ್ತದೆ, ಒಡೆಯುತ್ತದೆ ಮತ್ತು ಉದುರುತ್ತದೆ.
ಹಾಗಾದರೆ ಬೇಸಗೆಯಲ್ಲಿ ಕೂದಲಿನ ಆರೈಕೆ ಹೇಗೆ?
ಬೇಸಿಗೆಯಲ್ಲಿ ತೇವಾಂಶ ಅಧಿಕವಾದುದರಿಂದ ಅವು ತಲೆಕೂದಲನ್ನು ಹಾಳು ಮಾಡುತ್ತವೆ. ಆದ್ದರಿಂದ ಪ್ರತಿನಿತ್ಯ ತಲೆ ಸ್ನಾನ ಮಾಡಬೇಕು ಮತ್ತು ನಂತರ ಕೂದಲನ್ನು ಹಿತವಾಗಿ ಒಣಗಿಸಿಕೊಳ್ಳಬೇಕು.
ಬೇಸಿಗೆಯಲ್ಲಿ ಪ್ರಯಾಣ ಮಾಡುವಾಗ ಹೋರಗಿನ ಗಾಳಿಯನ್ನು ಆನಂದಿಸುವುದಕ್ಕಾಗಿ ಕಿಟಕಿಯನ್ನು ತೆರೆದಿಡುತ್ತೇವೆ. ಇದು ಖಂಡಿತಾ ಒಳ್ಳೆಯದಲ್ಲ. ಬಿಸಿ ಗಾಳಿಯು ಕೂದಲನ್ನು ಶುಷ್ಕಗೊಳಿಸಿ ತಲೆಕೂದಲ ತುದಿ ಒಡೆಯುತ್ತದೆ.
ಬಿಸಿಲಿನ ವೇಳೆಯಲ್ಲಿ ಹೊರಗೆ ಅಡ್ಡಾಡುವುದನ್ನು ಕಡಿಮೆ ಮಾಡಿ. ಅನಿವಾರ್ಯವಾದರೆ ತಲೆಗೆ ಸ್ಕಾರ್ಫ್ ಧರಿಸಿ.
ಪ್ರತಿನಿತ್ಯ ಒಂದೂವರೆ ಲೀಟರ್‌ನಷ್ಟು ನೀರು ಕುಡಿಯಿರಿ. ಈ ಮೂಲಕ ದೇಹದಿಂದ ವಿಷಪದಾರ್ಥಗಳನ್ನು ತೆಗೆದು ಹಾಕಬಹುದು.
ಕೂದಲಿನ ಆರೋಗ್ಯ ಕಾಪಾಡುವಲ್ಲಿ ಆಹಾರವೂ ಪ್ರಮುಖ ಪಾತ್ರ ವಹಿಸುತ್ತದೆ. ಸೋಯಾ ಮತ್ತು ಮೊಳಕೆ ಬರಿಸಿದ ಕಾಳುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಿ.
ಹೊಟ್ಟು ತೆಗೆಯಲು ಹಗುರವಾದ, ನೈಸರ್ಗಿಕ ಆ್ಯಂಟಿ ಡ್ಯಾಂಡ್ರಫ್ ಶಾಂಪೂ ಬಳಸಿ.
ಸ್ವಿಮ್ಮಿಂಗ್ ಪೂಲ್‌ನಲ್ಲಿರುವಾಗ ರಬ್ಬರ್ ಕ್ಯಾಪ್ ಧರಿಸಿ. ಈಜಿದ ಬಳಿಕ ತಕ್ಷಣವೇ ನಲ್ಲಿ ನೀರಿನಲ್ಲಿ ಕೂದಲನ್ನು ತೊಳೆಯಿರಿ. ಇದರಿಂದ ತಲೆಯಲ್ಲಿ ಸೇರಿಕೊಂಡಿರುವ ಕ್ಲೋರಿನ್ ತೆಗೆದು ಹಾಕಬಹುದು.
ಕಲರ್ ಹಚ್ಚುವುದು, ಸ್ಟ್ರೈಟನಿಂಗ್, ಐರನಿಂಗ್, ಕ್ರಿಂಪಿಂಗ್ ಮೊದಲಾದ ರಾಸಾಯನಿಕ ಶುಶ್ರೂಷೆಗಳನ್ನು ಮಾಡಿಕೊಳ್ಳಬೇಡಿ. ಕಲರ್ ಹಚ್ಚಲೇಬೇಕೆಂದಾದಲ್ಲಿ ನೈಸರ್ಗಿಕವಾದ ಅಮೋನಿಯಮುಕ್ತ ಹೇರ್‌ಕಲರ್ ಬಳಸಿ.
ಹೇರ್ ಡ್ರೈಯರ್ ಬಳಸುತ್ತೀರಾದಲ್ಲಿ ಕೋಲ್ಡ್ ಬ್ಲೋ ಸ್ವಿಚ್ ಆನ್ ಮಾಡಿ.
-ಡಾ. ಅಕ್ಷಯ್ ಬಾತ್ರಾ