ಬೆರಳ ತುದಿಯಲ್ಲೇ ಬಂದಿರುವ ಸ್ಮಾರ್ಟ್‌ಫೋನ್‌ಗಳು ಜಗತ್ತನ್ನೇ ನಿಬ್ಬೆರಗಾಗಿಸಿವೆ. ಯಾವುದೇ ವೈರ್‌ಗಳ ಸಂಪರ್ಕ ಇಲ್ಲದೆ ಬೇಕಾದ ಮಾಹಿತಿಯನ್ನು ಕುಳಿತಲ್ಲಿಯೇ ಹೆಕ್ಕಿ ತೆಗೆಯಬಹುದಾಗಿದೆ. ಈಗ ಅದರ ಹಿಂದೆಯೇ ಹೊಸದೊಂದು ಟ್ರೆಂಡ್ ಆರಂಭವಾಗಿದೆ.
ಅದುವೇ ಸ್ಮಾರ್ಟ್ ಹೋಮ್!
ಹೌದು. ಈಗಿನ ಆಧುನಿಕ ಜಗತ್ತಿನಲ್ಲಿ ಎಲ್ಲರೂ ಹೆಚ್ಚು ಇಷ್ಟಪಡುತ್ತಿರುವ, ಹೆಚ್ಚೆಚ್ಚು ಹುಚ್ಚು ಹಿಡಿಸಿಕೊಂಡಿರುವ ಮನೆ ಸ್ಮಾರ್ಟ್ ಹೋಮ್. ಈ ಟ್ರೆಂಡ್ ಈಗ ಮೊಬೈಲ್ ಕ್ಷೇತ್ರದಷ್ಟೇ ವೇಗದಲ್ಲಿ ಬೆಳೆಯುತ್ತಿದೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಈ ಅಲೆ ಬೇಗ ಅಪ್ಪಳಿಸುತ್ತಿದೆ.
ಇಂದು ಮನೆ ನಿರ್ಮಾಣ ಕ್ಷೇತ್ರವೂ ಸ್ಮಾರ್ಟ್‌ನತ್ತ ಹೊರಳಿದೆ. ಹೀಗಾಗಿ ಮನೆ ವಿನ್ಯಾಸಕಾರರು, ಬಿಲ್ಡರ್ಸ್‌ಗಳು ಮತ್ತು ಮನೆ ಮಾಲೀಕರು ಈಗ ವಿನೂತನ ಶೈಲಿಯ ಸ್ಮಾರ್ಟ್ ಮನೆಗೆ ಮರುಳಾಗುತ್ತಿದ್ದಾರೆ. ತಮ್ಮ ಮನೆಗಳು ಸ್ಮಾರ್ಟ್ ಆಗಲು ಬೇಕಾದ ಎಲ್ಲ ತಂತ್ರಜ್ಞಾನವನ್ನೂ ಅಳವಡಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಸಮಯ, ಹಣ ಎಲ್ಲವನ್ನೂ ಉಳಿಸಿಕೊಳ್ಳುವತ್ತ ಹೆಜ್ಜೆ ಹಾಕುತ್ತಿದ್ದಾರೆ.
ಜತೆಗೆ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲಕ್ಕೆ ತಕ್ಕಂತೆ ಮನೆಯೊಳಗಿನ ವಾತಾವರಣ ಬದಲಾಗುವಂಥ ತಂತ್ರಜ್ಞಾನ ಹಾಗೂ ಎಲೆಕ್ಟ್ರಿಸಿಟಿ ಮಾಡಿಕೊಳ್ಳುತ್ತಿದ್ದಾರೆ. ಜತೆಗೆ ಪ್ರತಿಯೊಂದು ಕೋಣೆಗಳಿಗೆ, ಹಾಲ್‌ನಲ್ಲಿಯೂ ಇಂಟರ್‌ನೆಟ್, ಮೊಬೈಲ್ ಆಕ್ಸೆಸ್ ಆಗಲು ಬೇಕಾದ ಎಲ್ಲ ತಂತ್ರಜ್ಞಾನವನ್ನೂ ಈಗಲೇ ಅಳವಡಿಸಿಕೊಳ್ಳುತ್ತಿದ್ದಾರೆ.
ಹೊಸ ಮನೆಗೆ ನೂತನ ತಂತ್ರಜ್ಞಾನ ಬಳಕೆ ಮಾಡುವ ಆತುರದಲ್ಲಿ ಕೆಲವು ಎಡವಟ್ಟುಗಳೂ ಆಗುವುದುಂಟು. ಆದರೆ, ಹೀಗಾಗದಂತೆ ತಡೆಯಲು ಮೊದಲೇ ಅದರ ಬಗ್ಗೆ ತಿಳಿದುಕೊಳ್ಳಿ. ಅಥವಾ ಕಟ್ಟಡ ವಿನ್ಯಾಸಕಾರರಿಂದ ಮಾಹಿತಿ ಪಡೆದುಕೊಳ್ಳುವುದು ಒಳಿತು.
ಮನೆಗೆ ಎಷ್ಟೇ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದರೂ ಅವು ಮುಂದಿನ ಕೆಲವೇ ದಿನಗಳಲ್ಲಿ ಅಳಿಸಿ ಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಸ್ಮಾರ್ಟ್ ಮನೆಗೆ ಸ್ಮಾರ್ಟ್ ತಂತ್ರಜ್ಞಾನ ಅಳವಡಿಸುವಾಗ ಕೆಲವು ಎಚ್ಚರಿಕೆ ಜತೆಗೆ ಮಾಹಿತಿ ಸಂಗ್ರಹಿಸಿಕೊಂಡಿದ್ದರೆ ಒಳ್ಳೆಯದು...
ವಿಶಿಷ್ಟ ಶೈಲಿ ಟೆಕ್ನಾಲಜಿ
ಸ್ಮಾರ್ಟ್ ಮನೆಯ ಪರಿಪೂರ್ಣ ತಂತ್ರಜ್ಞಾನ ನಿಮ್ಮ ಮನೆಗೂ ಹೊಸ ಲುಕ್ ನೀಡುತ್ತದೆ. ಒಮ್ಮೆ ಅಳವಡಿಸಿದ ಮೇಲೆ ಪದೇಪದೇ ರಿಪೇರಿ ಮಾಡುವ ಅಗತ್ಯ ಬೀಳದಂತೆ ನೋಡಿಕೊಳ್ಳಿ. ಅದಕ್ಕಾಗಿ ಉತ್ಕೃಷ್ಟ ದರ್ಜೆಯಎಲೆಕ್ಟ್ರಾನಿಕ್ ವಸ್ತುಗಳನ್ನು ಅಳವಡಿಸಿ. ಎಸಿ, ಕೇಬಲ್‌ಗಳು, ಲೈಟಿಂಗ್ ವ್ಯವಸ್ಥೆ, ಕೇಬಲ್ ಇಲ್ಲದೆ ಫೋನ್ ಸಂಪರ್ಕ, ಭದ್ರತೆಗೆ ಅಳವಡಿಸುವ ಕ್ಯಾಮೆರಾಗಳು, ವಿಡಿಯೋ, ವೈ ಫೈ ಸಂಪರ್ಕ... ಹೀಗೆ ಎಲ್ಲದರಲ್ಲೂ ಗುಣಮಟ್ಟ ಕಾಯ್ದುಕೊಳ್ಳಿ. ಭವಿಷ್ಯಕ್ಕೂ ಅದು ಉಪಯುಕ್ತವಾಗುವಂತೆ ಇರಲಿ.
ಅಂದದ ಅಡುಗೆಮನೆ
ಇಂದಿನ ಸ್ಮಾರ್ಟ್ ಕಿಚನ್‌ನಲ್ಲಿ ಮನರಂಜನೆಯೂ ಜಾಗ ಪಡೆದಿದೆ. ಅಡುಗೆಮನೆಯ ಗೋಡೆಗಳಲ್ಲಿ ಟ್ಯಾಬ್ಲೆಟ್‌ಗಳನ್ನು ಅಳವಡಿಸಿ ಸಂಗೀತದ ಜತೆಗೆ ಬೇಕಾದ ಆಹಾರದ ತಯಾರಿಸುವ ಫೇವರಿಟ್ ಚಾನೆಲ್‌ಗಳನ್ನೂ ವೀಕ್ಷಿಸಬಹುದು. ಅಲ್ಲದೆ, ಇದರಿಂದ ಅಂತರ್ಜಾಲವನ್ನೂ ಬಳಸಬಹುದು. ಅಷ್ಟೇ ಅಲ್ಲ, ಗ್ಯಾಸ್ ಮೇಲೆ ಇಟ್ಟಿರುವ ಪದಾರ್ಥಗಳನ್ನು ಬಟನ್ ಒತ್ತುವ ಮೂಲಕ ಎಷ್ಟು ಬೇಕೋ ಅಷ್ಟು ಬಿಸಿ ಮಾಡಬಹುದು. ಹಾಲನ್ನು ಕುದಿಸುವಾಗ ನಿರ್ದಿಷ್ಟ ಉಷ್ಣಾಂಶ ಇಟ್ಟರೆ ಸಾಕು. ಅದಾಗಿಯೇ ಆಫ್ ಆಗುತ್ತದೆ.
ಸ್ಮಾರ್ಟ್ 'ಬಾತ್'ರೂಮ್
ಸ್ನಾನದ ಮನೆಗೂ ತಂತ್ರಜ್ಞಾನ ಕಾಲಿಟ್ಟಿದೆ. ಶೋವರ್, ಟಬ್, ಲೈಟಿಂಗ್, ಬಾತ್‌ರೂಮ್ ಸ್ವಚ್ಛವಾಗಿಟ್ಟುಕೊಳ್ಳಲು, ಟಾಯ್ಲೆಟ್ ಶುಚಿಯಾಗಿರಲು ತಂತ್ರಜ್ಞಾನದ ನಿಮಗೆ ಸಹಾಯಕ. ಕೇವಲ ಒಂದು ಬಟನ್ ಒತ್ತುವುದರಿಂದ ನಿಮಗೆ ಎಷ್ಟು ಪ್ರಮಾಣದ ಬಿಸಿನೀರು ಬೇಕೋ ಅಷ್ಟನ್ನು ತಕ್ಷಣ ನೀಡುತ್ತದೆ. ನೀವು ಸ್ನಾನ ಮಾಡುವಾಗ ಹೊರಗೆ ಯಾರಾದರೂ ಬಂದಲ್ಲಿ, ಅವರನ್ನು ಬಾತ್‌ರೂಮ್‌ನಲ್ಲಿ ಅಳವಡಿಸಿರುವ ಸಿಸಿ ಟಿವಿಯಿಂದ ಅಥವಾ ಟ್ಯಾಬ್ಲೆಟ್‌ನಿಂದ ವೀಕ್ಷಿಸಬಹುದು. ಅಷ್ಟೇ ಅಲ್ಲ, ಇಲ್ಲಿಂದಲೇ ನೀವು ಮನೆಯ ಮುಖ್ಯದ್ವಾರವನ್ನು ತೆರೆಯಬಹುದು!
ಭದ್ರತೆ
ಮನೆಯ ಸುರಕ್ಷತೆಯನ್ನು ಎಲ್ಲರೂ ಬಯಸುತ್ತಾರೆ. ಹೀಗಾಗಿ ಭದ್ರತಾ ಸಿಬ್ಬಂದಿಗಿಂತ ಇಂದು ಹೆಚ್ಚು ನಂಬುವುದು ಈ ಸಿಸಿ ಕ್ಯಾಮೆರಾಗಳನ್ನೇ. ಇದು ಸ್ಮಾರ್ಟ್ ಹೋಮ್‌ಗೆ ಉತ್ತಮ ಆಯ್ಕೆ ಕೂಡ. ಲಾಕ್‌ಗಳಿಗಿಂತಲೂ ಪಾಸ್‌ವರ್ಡ್ ಮೂಲಕ ಲಾಕ್ ಮಾಡುವ ಬಾಗಿಲುಗಳು ಈಗ ಹೆಚ್ಚಾಗುತ್ತಿವೆ. ಅವುಗಳನ್ನು ನಿಮ್ಮ ಸ್ಮಾರ್ಟ್ ಮೊಬೈಲ್ ಮೂಲಕ ಥಳುಕು ಹಾಕಲಾಗುತ್ತಿದೆ. ಇವಿಷ್ಟೇ ಅಲ್ಲ, ಹಾಲ್‌ನಲ್ಲಿ ಫೋನ್, ಎಲ್‌ಇಡಿ ಟಿವಿ, ಕಂಪ್ಯೂಟರ್‌ಗಳನ್ನು ಮತ್ತಷ್ಟು ಸ್ಮಾರ್ಟ್ ಆಗಿಸುವ ತಂತ್ರಜ್ಞಾನಗಳು ಈಗ ಮಾರುಕಟ್ಟೆಯನ್ನು ನುಂಗಿದ್ದು ಮಾತ್ರವಲ್ಲ, ಮನೆಗಳಿಗೂ ಲಗ್ಗೆ ಇಟ್ಟಿವೆ. ಆದರೆ, ಇವುಗಳು ಎಷ್ಟು ಸುರಕ್ಷಿತ ಎನ್ನುವುದು ಬಳಕೆಯ ಆಧಾರದ ಮೇಲೆ ನಿಂತಿದೆ.
- ಬ್ರಹ್ಮಾನಂದ ಎನ್. ಹಡಗಲಿ