ಹಾಸಿಗೆಯ ಮೇಲೆ ಕುಳಿತೇ ಇವತ್ತಿಗೆ ಸಿಗಬಹುದಾದ ಕಾಂಟ್ರಾಕ್ಟಿನ ಬಗ್ಗೆ ಯೋಚಿಸುತ್ತಿದ್ದವನಿಗೆ ಅಂಗಡಿಗೆ ಹೋಗಿ ಕೊತ್ತಂಬರಿ ಸೊಪ್ಪು ತರಲು ಹೆಂಡತಿಯಿಂದ ಆದೇಶ. ಇನ್ನೇನು ತರಕಾರಿ ಅಂಗಡಿ ಪಕ್ಕದಲ್ಲಿದೆ ಅಂದುಕೊಳ್ಳುವಾಗ, ಕಾರೊಂದು ಜೋರಾಗಿ ಗುದ್ದಿ ಜನಗಳು ಗುಂಪು ಸೇರುವ ಮುನ್ನ ಮಾಯವಾಗುತ್ತದೆ. ಹತ್ತಡಿ ಎಗರಿ ಬಿದ್ದವನು ಎದ್ದು ಕೂರಬೇಕೆಂದುಕೊಳ್ಳುತ್ತಾನೆ. ಕೃಕಾಲುಗಳು ಸಹಕರಿಸುತ್ತಿಲ್ಲ.
ಯಾರೋ ಪುಣ್ಯಾತ್ಮರು ರಸ್ತೆಯ ಪಕ್ಕಕ್ಕೆ ಎತ್ತಿ ಕೂರಿಸಿ ನೀರು ಕುಡಿಸುತ್ತಾರೆ. ಮನೆಗೆ ಫೋನ್ ಮಾಡಬೇಕೆಂದವನಿಗೆ ಮೊಬೃಲನ್ನು ಮನೆಯಲ್ಲೇ ಮರೆತು ಬಂದ ನೆನಪಾಗುತ್ತದೆ. ಯಾರದೋ ಮೊಬೃಲ್ ಪಡೆದು ಹೆಂಡತಿಯ ನಂಬರಿಗೆ ಫೋನ್ ಮಾಡಿದರೆ ಆಕೆ ಕರೆ ಸ್ವೀಕರಿಸುತ್ತಿಲ್ಲ. ಬಹುಶಃ ಫೋನನ್ನು ಬೇರೆಲ್ಲೋ ಇಟ್ಟು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರಬೇಕು.
ಯಾರೋ ಕೂರಿಸಿ ಕಳುಹಿಸಿದ ಆಟೋದಲ್ಲಿ ಆಸ್ಪತ್ರೆಗೆ ಬಂದರೆ ಆಟೋದವನಿಗೆ ಕೊಡಲು ದುಡ್ಡೂ ಇಲ್ಲ. ಅಪಘಾತದ ಸಮಯದಲ್ಲಿ ಜೇಬಿನಿಂದ ಬಿದ್ದ ಪರ್ಸನ್ನು ಯಾವನೋ ಜೇಬಿಗಿಳಿಸಿ ಮಾಯವಾಗಿದ್ದ. ಸರಿ, ಆಸ್ಪತ್ರೆಗೆ ದಾಖಲಾದರೆ, ವೃದ್ಯರು 'ಮೂಳೆ ಮುರಿದಿದೆ. ಶಸ್ತ್ರಚಿಕಿತ್ಸೆ ಮಾಡಬೇಕು, ಕನಿಷ್ಠ ಮೂರು ತಿಂಗಳ ವಿಶ್ರಾಂತಿ ಅಗತ್ಯವಿದೆ' ಅನ್ನುತ್ತಾರೆ. ಹಾಗೂ ಹೀಗೂ ವಿಷಯ ತಿಳಿದು ಆಸ್ಪತ್ರೆ ಹುಡುಕಿ ಬಂದ ಮಡದಿ ಇವನನ್ನು ನೋಡಿ ಆಘಾತಕ್ಕೊಳಗಾಗುತ್ತಾಳೆ. ಅಂದು ನಡೆಯಬೇಕಿದ್ದ ಮೀಟಿಂಗ್‌ನಲ್ಲಿ ಪಾಲ್ಗೊಳ್ಳದ ಕಾರಣ ಕೋಟಿ ಪ್ರಾಜೆಕ್ಟನ್ನು ಗಿಟ್ಟಿಸಲು ಪಟ್ಟ ಪ್ರಯತ್ನ ಮಣ್ಣು ಪಾಲಾಗಿದೆ. ಏನಿಲ್ಲವೆಂದರೂ ಪ್ರಾಜೆಕ್ಟಿನಲ್ಲಿ ಬರಬಹುದಾಗಿದ್ದ ಲಾಭ, ಆಸ್ಪತ್ರೆ ಖರ್ಚು ಎಲ್ಲ ಸೇರಿ ಆದ ನಷ್ಟ ಬರೋಬ್ಬರಿ ಇಪ್ಪತ್ತೃದು ಲಕ್ಷ!
ಮೈ ಗಾಡ್! ಅಸಲಿಗೆ ಒಂದು ಕಂತೆ ಕೊತ್ತಂಬರಿ ಸೊಪ್ಪಿನ ಬೆಲೆ ಇಪ್ಪತ್ತೃದು ಲಕ್ಷವೇ? ತಮಾಷೆಯಲ್ಲ, ಬದುಕೆಂದರೇ ಹೀಗೆ. ಯಾವ ಕ್ಷಣದಲ್ಲಿ ನಮಗೆ ಐಶ್ವರ್ಯವನ್ನು ಅನಿರೀಕ್ಷಿತವಾಗಿ ದೊರಕಿಸಿಕೊಡುತ್ತದೋ, ಅದೇ ಮಾಯದಲ್ಲಿ ಅದನ್ನು ನಮ್ಮಿಂದ ಕಿತ್ತುಕೊಳ್ಳುತ್ತದೆ ಕೂಡ. ಅದು ಕೇವಲ ಹಣದ ಮಾತಲ್ಲ, ಕಷ್ಟ, ಸುಖ, ಅವಘಡ, ಅಧಿಕಾರ, ಲಾಭ, ನಷ್ಟ, ಕೀರ್ತಿ ಎಲ್ಲವನ್ನೂ ಯಾವ ಕ್ಷಣದಲ್ಲಿ ಬೇಕಾದರೂ ನಮ್ಮ ಕಿಸೆಯೊಳಗೆ ಹಾಕಿ, ಅದೇ ವೇಗದಲ್ಲಿ ಎಗರಿಸಿಬಿಡುತ್ತದೆ. ಅದೇ ವಾಸ್ತವ. ಆದರೆ ಆ ಕಿಸೆಯೊಳಗೆ ಬರೀ ಕಷ್ಟವೊಂದೇ ಇಲ್ಲ, ಸುಖವೂ ಇದೆ. ಆಶ್ಚರ್ಯವೆಂದರೆ ಸಂತೋಷದ ಕ್ಷಣಗಳನ್ನು ಸ್ವೀಕರಿಸುವಾಗ ಇರುವ ಮನೋಭಾವ, ಅವುಗಳನ್ನು ಕಳೆದುಕೊಳ್ಳುವಾಗ ಇರುವುದಿಲ್ಲ.
ಅಳು ಪರಿಹಾರವಲ್ಲ
ಒಮ್ಮೆ ಯೋಚಿಸಿ ನೋಡಿ, ಕೊತ್ತಂಬರಿ ಸೊಪ್ಪು ತರಲು ಕಳುಹಿಸಿದ್ದಕ್ಕೆ ಹೀಗಾಯ್ತು ಅಂತ ಹೆಂಡತಿ ಹಲುಬುತ್ತಾ, ಅಳುತ್ತಾ ಕುಳಿತುಬಿಟ್ಟರೆ, ಸದ್ಯದ ಪರಿಸ್ಥಿತಿಯನ್ನು ನಿಭಾಯಿಸುವುದಾದರೂ ಹೇಗೆ? ಇದು ಕೇವಲ ಉದಾಹರಣೆಯಷ್ಟೆ. ಪ್ರಪಂಚದಲ್ಲಿ ದೊಡ್ಡ ಹೆಸರು ಮಾಡಿದ ಉದ್ಯಮಿಗಳೇ ಅನಿರೀಕ್ಷಿತವಾಗಿ ಸಂಭವಿಸುವ ಈ ಬಗೆಯ ಅವಘಡ, ವಂಚನೆ, ಷೇರುಗಳ ಬೆಲೆಯಿಳಿಕೆ, ವಿರೋಧಿಗಳ ಸ್ಪರ್ಧೆಗಳಂತಹ ಪ್ರಕ್ರಿಯೆಗಳಿಂದ ನಷ್ಟವಾಗಿ ಬೆಳಗಾಗುವುದರೊಳಗೆ ದಿವಾಳಿಯಾಗುವ ಹಂತಕ್ಕೆ ತಲುಪಿರುತ್ತಾರೆ. ಮತ್ತೆ ಒಂದಷ್ಟು ಸಮಯದಲ್ಲಿ ತಮಗೇನೂ ಆಗಿಯೇ ಇಲ್ಲವೆಂಬಂತೆ ಎದ್ದು ನಿಂತಿರುತ್ತಾರೆ. ಆದರೆ ಅವರು ಅಪ್ಪಿತಪ್ಪಿಯೂ ಆತ್ಮಹತ್ಯೆಗಳಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಅದಕ್ಕೆಲ್ಲ ಕಾರಣವಾಗುವ ಅವರ ಆತ್ಮವಿಶ್ವಾಸದ ಹಿಂದೆ ಇಂತಹ ಸಾವಿರಾರು ಅಡೆತಡೆಗಳನ್ನು ಎದುರಿಸಿದ ಅನುಭವವಿರುತ್ತದೆ. ವಿರುದ್ಧ ದಿಕ್ಕಿನಲ್ಲೇ ಗಾಳಿ ಬೀಸುತ್ತಿದ್ದರೂ, ಚಿಕ್ಕ ಅಲೆಗಳಿಗೆಲ್ಲ ಧೃತಿಗೆಡದೆ ಹುಟ್ಟು ಹಾಕಿದರಷ್ಟೇ ದೋಣಿಯನ್ನು ತೀರದತ್ತ ಮುನ್ನಡೆಸಲು ಸಾಧ್ಯ ಎಂಬ ಸತ್ಯದ ಅರಿವು ಅವರಿಗಿರುತ್ತದೆ.
ಎದುರಿಸುವುದು ಹೇಗೆ?
ಇಂತಹ ಸಂದರ್ಭಗಳಲ್ಲಿ ಕೆಟ್ಟದ್ದನ್ನೇ ಯೋಚಿಸುವ ನಮ್ಮ ಮನಸ್ಸಿಗೆ ನಾವೇ ಬುದ್ಧಿ ಹೇಳಬೇಕು. ಹೇಗೆ ಸುಖಕ್ಕೆ ಕೊನೆಯೆಂಬುದಿರುತ್ತದೆಯೋ, ಹಾಗೇ ದುಃಖಕ್ಕೂ ಇರುತ್ತದೆ. ಅಂತಹ ಸಮಯದಲ್ಲಿ ನಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುವವರೆಂದರೆ ನಮ್ಮ ಕುಟುಂಬದವರು. ಅವರ ಸಾಂತ್ವನವೇ ನಮಗಿನ್ನಷ್ಟು ಮಾನಸಿಕ ಸ್ಥೈರ್ಯವನ್ನು ತುಂಬಬಲ್ಲದು.
ಇದೆಲ್ಲಕ್ಕಿಂತ ಮುಖ್ಯವಾದದ್ದು, ಏನೇ ಆದರೂ ಆಗಿದ್ದನ್ನು ನೆನೆಯುತ್ತ ಅಳುತ್ತಾ ಕೂರುವ ಬದಲು ಮುಂದೇನು ಮಾಡಬೇಕು? ಎನ್ನುವುದರ ಬಗ್ಗೆ ತಾಳ್ಮೆಯಿಂದ ವಿಚಾರ ಮಾಡುವುದು. ಇದರಿಂದ ಮನಸ್ಸು ಕೂಡ ತಕ್ಷಣಕ್ಕೆ ಆಘಾತದಿಂದ ಹೊರಬರುವ ಪ್ರಯತ್ನ ಮಾಡುತ್ತದೆ. ಹೀಗೆ ಒಂದೊಂದೇ ತೊಡಕನ್ನು ನಿವಾರಿಸುತ್ತ ಮುಂದೆ ಹೋದಾಗ ಕಡೆಗೆ ಸಿಗುವ ಗಮ್ಯದಲ್ಲೊಮ್ಮೆ ತಿರುಗಿ ನೋಡಿದರೆ, ಸಾಗಿ ಬಂದ ಹಾದಿಯ ಮುಳ್ಳುಗಳು ಕಾಣುವುದೇ ಇಲ್ಲ. ಅಷ್ಟಕ್ಕೂ ನಾವು ಈ ಬದುಕನ್ನು ಪ್ರೀತಿಸಬೇಕಿರುವುದೇ ಅದಕ್ಕೆ. ಅದರ ದ್ವಂದ್ವಕ್ಕೆ, ಅದು ಕೊಡುವ ಅನಿರೀಕ್ಷಿತ ಏಳುಬೀಳುಗಳೆಂಬ ತಿರುವುಗಳಿಗೆ. ಥೇಟ್ ಸಸ್ಪೆನ್ಸ್ ಸಿನಿಮಾದಂತೆ. ಪ್ರತೀ ದೃಶ್ಯವನ್ನೂ ಅನುಭವಿಸುವುದಷ್ಟೇ ನಮ್ಮ ಕೆಲಸ.
- ಸಂತೋಷ್‌ಕುಮಾರ್ ಎಲ್.ಎಂ.