ಪ್ರೀತಿಯ ಮಗಳೆ,
ನಿನ್ನ ಪುಸ್ತಕಗಳ ಮಧ್ಯೆ ಅವಿತಿರಿಸಿದ್ದ ಪತ್ರ ಅದೇಗೋ ನನ್ನ ಕೈಗೆ ಸಿಕ್ಕಿತು. ಓದುತ್ತಾ ಓದುತ್ತಾ ಇದೇಕೆ ಎಂದು ಮನಸ್ಸು ಅರಿಯುವ ವೇಳೆಗೆ ಕೆನ್ನೆಯ ಮೇಲಿಂದ ಜಾರಿದ ಹನಿಗಳು ಲೆಕ್ಕವಿಲ್ಲದಷ್ಟಾಗಿದ್ದವು. ನೆಟ್ಟ ನೋಟ ಸಮಯವ ಬದಿಗೆ ಸರಿಸಿತ್ತು. ನಾನು ನಿಜವಾದ ತಾಯಿಯಾ? ತಾಯ್ತನಕ್ಕೇ ಅಪವಾದವಾ? ಎಂದು ಕೊರಗುವಂತಾಯಿತು... ಚಿಂತೆಯ, ಪ್ರಶ್ಚಾತ್ತಾಪದ ಗದ್ದೆಯಲ್ಲಿನ ಕೆಸರು ನನ್ನನ್ನು ಬಿಡದೆ ಕಾಡಿತ್ತು.
ನನ್ನ ವರ್ತನೆಯಿಂದ ನಿನ್ನ ಮುಗ್ಧ ಮನಸ್ಸಿನ ಮೇಲಾಗುವ ಪರಿಣಾಮ ನನ್ನ ಕಲ್ಮಶ ತುಂಬಿದ ಬುದ್ಧಿಗೆ ಹೊಳೆಯಲೇ ಇಲ್ಲ ನೋಡು. ನಿನ್ನೆಗಳ ನನ್ನ ನಡವಳಿಕೆಯ ನೆನೆದರೆ ನನ್ನ ಮೇಲೇ ನನಗೆ ಅಸಹ್ಯ ಹುಟ್ಟುತ್ತಿದೆ. ಅವು ನನ್ನನ್ನೇ ಇಂದು ಪ್ರಶ್ನಿಸುತ್ತಿವೆ. ಬದುಕು ಇದೇ ನೋಡು ಮಗೂ, ಇಲ್ಲಿ ನಾವು, ದೊಡ್ಡವರೆನಿಸಿಕೊಂಡವರು ಕೂಡ ತಪ್ಪು ಮಾಡಿ ಅರಳುತ್ತಿರುವ ಪುಟ್ಟ ಕುಸುಮಗಳ ಭಾವನೆಗಳೊಟ್ಟಿಗೆ ಚೆಲ್ಲಾಟವಾಡಿ ಬಿಡುತ್ತೇವೆ. ಅದರ ಅರಿವಾಗುವುದು ನಿನ್ನಂತಹ ಹೆಮ್ಮೆ ತರುವ ಮಗಳು ಜನಿಸಿದರೆ ಮಾತ್ರ. ನೀನು ನನ್ನ ಮಗಳಲ್ಲ, ನನ್ನ ಅಂಧಕಾರ ತುಂಬಿದ ಕಣ್ಣುಗಳನ್ನು ತೆರೆಸಿದ ದೇವತೆ.
ನಿಜ ಹೇಳುತ್ತೀನಿ ಕೇಳು, ನಮ್ಮ ಎಂಟು ವರ್ಷಗಳ ಪ್ರೀತಿಯ ಪರಿತಪನೆಗೆ ದೇವರು ನೀಡಿದ ವರ ನೀನು. ಮಗುವಿಗಾಗಿ ಹಾತೊರೆಯುತ್ತಿದ್ದ ಆ ದಿನಗಳಲ್ಲಿ ದೇವರನ್ನು ಬೇಡಿದ್ದು ಮುದ್ದಾದ ಮಗುವಿಗಷ್ಟೇ ಹೊರತು ಹೆಣ್ಣಾಗಲಿ ಅಥವಾ ಗಂಡಾಗಲಿ ಎಂದಲ್ಲ. ನಿನ್ನ ಆಗಮನದ ಆ ದಿನ ಇನ್ನೂ ಹಸಿರಾಗಿದೆ, ನಮ್ಮ ಮನೆ ಮನದಲ್ಲಿ ಹರುಷ ಹೊಳೆ ಉಕ್ಕಿ ಹರಿಯಲು ಶುರುಮಾಡಿದ ದಿನವದು. ಮಳೆಯ ಎದುರು ನೋಡುತ್ತಿದ್ದ ಬರಗಾಲದ ಬರಡು ಭೂಮಿಗೆ ಸುರಿದ ಹನಿ ನೀನಾಗಿದ್ದೆ. ಅಂದಿನಿಂದ ಬಂಜೆ ಎಂದು ದೂಷಿಸುತ್ತಿದ್ದ ಜನರೆದುರು ತಲೆ ಎತ್ತಿ ನಡೆಯುವಂತೆ ಮಾಡಿದ್ದೆ ನೀನು. ಆದರೆ ಮನುಷ್ಯನ ಆಸೆಗೆ ತೃಪ್ತಿ ಎಲ್ಲಿದೆ? ಅದಕ್ಕೇ ನಿನ್ನ ಬೆನ್ನಹಿಂದೆ ತಮ್ಮನನ್ನೂ ಬರಮಾಡಿಕೊಳ್ಳುವ ನಿರ್ಧಾರ ಮಾಡಿದೆವು. ಆಗ ಸುತ್ತಮುತ್ತಲಿನ ಜನರ, ಸಂಬಂಧಿಕರ ಮಾತುಗಳು ನನ್ನನ್ನೂ ಗಂಡು ಮಗುವೇ ಬೇಕೆಂಬ ಆಸೆಯು ಚಿಗುರೊಡೆಯಲು ಪ್ರೇರೇಪಿಸಿತು. ನಮ್ಮ ಆಸೆಯಂತೆಯೇ ನಿನ್ನ ತಮ್ಮನೂ ಬಂದು ಸೇರಿಬಿಟ್ಟ.
ಆಗ ಹೆಣ್ಣೆಂದರೆ ಕೀಳಾಗಿ ಕಾಣುವ, ಹುಟ್ಟಿದ ಮನೆಗೆ ಹೊರೆ ಎಂದು ಭಾವಿಸುವ ಈ ಸಮಾಜದ ಗುಂಪಿಗೆ ನಾನೂ ಸೇರಿಬಿಟ್ಟೆ. ನಾನೂ ಒಂದು ಹೆಣ್ಣೇ ಎನ್ನುವುದನ್ನು ಮರೆತುಬಿಟ್ಟೆ. ನಿಮ್ಮಿಬ್ಬರ ಮಧ್ಯೆ ನನಗೆ ತಿಳಿದೋ ತಿಳಿಯದೆಯೋ ವ್ಯತ್ಯಾಸ ಗುರುತಿಸತೊಡಗಿದೆ. ಕೊಡುವ ಊಟದಲ್ಲೂ, ಮಾಡುವ ಪ್ರತಿ ಕಾರ್ಯದಲ್ಲೂ ಗಂಡು ಹುಡುಗ ಶ್ರೇಷ್ಠ ಎನ್ನುವ ಬೀಜವ ನನ್ನ ಮನದಲ್ಲಿ ನಾನೇ ಬಿತ್ತಿಕೊಂಡೆ. ಅದಕ್ಕೇ ಹೇಳುವುದು ಕಂದಾ, ಯಾರದಾದರೂ ಸಲಹೆ ತೆಗೆದುಕೊಳ್ಳುವುದಾದರೆ ಯೋಚಿಸಿ ಮುಂದುವರೆಯಬೇಕು, ಎಲ್ಲದರಲ್ಲೂ ನಮ್ಮತನವ ಉಳಿಸಿಕೊಳ್ಳಬೇಕು ಎಂದು. ಇದರ ಅರಿವು ನಿನ್ನ ಪತ್ರವ ಕದ್ದು ಓದಿದ ಮೇಲೆ ನನಗಾಗಿದೆ.
ಹೆಣ್ಣಾಗಿ ಹುಟ್ಟಿದ್ದು ತಪ್ಪಲ್ಲಾ ಕಂದಾ... ಅಂತಹ ಭಾವನೆಗಳನ್ನು ಸೃಷ್ಟಿಸುವ ನಾನು ಮತ್ತು ನನ್ನಂತಹ ಸಮಾಜ ತಪ್ಪು. ಏಕೆಂದರೆ ಭಾರತದ ಪ್ರಧಾನಿಯಾಗಿ ಆಳಿದ ಇಂದಿರಾ ಗಾಂಧಿ, ಅಂತರಿಕ್ಷಕ್ಕೆ ಲಗ್ಗೆ ಇಟ್ಟು ಮಿಂಚಿದ ಕಲ್ಪನಾ ಚಾವ್ಲಾ, ಕರುಣೆ ಮತ್ತು ಪ್ರೀತಿಯಿಂದ ಜನಮನದ ಮಾತಾದ ಮದರ್ ತೆರೇಸಾ .... ಎಲ್ಲರೂ ಹೆಣ್ಣೇ ಅಲ್ಲವಾ? ಹೆಣ್ಣು ನಾಡಿನ, ಮನೆ, ಮನದ ಕಣ್ಣು. ಹೆಣ್ಣಿಂದಲೇ ಎಲ್ಲಾ. ಆದರೆ ಆ ಹೆಣ್ಣು ಹೂವನು ಮುದುಡುವುದಕ್ಕೆ ಪ್ರೇರೇಪಿಸುವ ಕಿರಾತಕಿ ಕೂಡ ಹೆಣ್ಣೇ ಎಂದು ನಾನು ನಿರೂಪಿಸಿಬಿಟ್ಟಿರುವೆ.
ಇಷ್ಟೆಲ್ಲಾ ಕೇಳಿದ ಮೇಲೆ ನಿನ್ನಲ್ಲಿ ಅಮ್ಮನ ಮೇಲಿರುವ ಪ್ರೀತಿ ಹಾಗೆಯೇ ಉಳಿಸಿಕೋ ಎಂದರೆ ನಾನು ಮತ್ತಿನೊಂ್ನದು ತಪ್ಪು ಮಾಡುತ್ತಿರುವೆ ಎನಿಸುತ್ತದೆ. ಆದರೆ ಕೇಳು ಮಗಳೇ, ನಾನಿರುವವರೆಗೂ ಮುಂದೆಂದೂ ನಿನ್ನಲಿ ಹೆಣ್ಣಾಗಿ ಹುಟ್ಟಿದ್ದು ತಪ್ಪು ಎನ್ನುವ ಭಾವನೆಗಳು ಏಳದಂತೆ ನನ್ನನ್ನು ನಾನು ತಿದ್ದಿಕೊಳ್ಳುವೆ. ಅವುಗಳೆಲ್ಲವ ಕೆಟ್ಟ ಕನಸಿನಂತೆ ಮರೆತು ಬಿಡೆ. ನೀನು ನನ್ನ ಮಗಳಲ್ಲ ಕಣ್ಣು ತೆರೆಸಿದ ದೇವತೆ ಕಣೆ. ಇಷ್ಟೊಂದು ಚಿಕ್ಕ ವಯಸ್ಸಿಗೆ ಬೆಟ್ಟದಷ್ಟು ಸಂಕಟ ಕೊಟ್ಟ ನಿನ್ನ ಅಮ್ಮನ ಒಂದೇ ಒಂದು ಸಾರಿ ಕ್ಷಮಿಸಿಬಿಡೆ ನನ್ನ ಬಂಗಾರ. ಇನ್ನೆಂದೂ ಗಂಡು ಹೆಣ್ಣು ಎನ್ನುವ ಭೇದಭಾವ ನನ್ನ ಮನದಲಿ ನುಸುಳದಂತೆ, ನಮ್ಮಿಬ್ಬರ ಬಂಧದಲಿ ಸುಳಿಯದಂತೆ ಗಂಟುಕಟ್ಟಿ ಎಸೆದುಬಿಡುವೆ.
ನಿನ್ನ ಅಮ್ಮ.
- ಜಮುನಾರಾಣಿ .ಎಚ್.ಎಸ್.