ಮನೆ ಕಟ್ಟಿಸುವಾಗಲೇ ಪರಿಪೂರ್ಣ ಯೋಜನೆ ಇರಬೇಕು. ಇಲ್ಲವಾದಲ್ಲಿ ಕಟ್ಟಿದ್ದನ್ನು ಕೆಡವಿ ರಿಪೇರಿ ಮಾಡುವುದು ಕಷ್ಟ. ಅದರಂತೆ ಬಾತ್‌ರೂಮ್ ಕೂಡ ಹಾಗೆಯೇ. ಸಂಪೂರ್ಣ ಮನೆಯನ್ನು ಕೆಡವಿ ಕಟ್ಟುವುದು ಸುಲಭ. ಆದರೆ, ಮನೆಯೊಳಗಿನ ಕೆಲವು ಭಾಗಗಳನ್ನು ಬದಲಾಯಿಸುವುದು ಹಾಗೂ ಈಗಿರುವ ಬಾತ್‌ರೂಮ್‌ಗಿಂತ ಇನ್ನಷ್ಟು ಮಾಡೆಲ್ ಆಗಿ ರೂಪಿಸುವುದು ಸ್ವಲ್ಪ ದುಸ್ತರವೇ ಸರಿ. ಮಾತ್ರವಲ್ಲ, ಇದು ಕಿಸೆಗೂ ಭಾರ. ಹೀಗಾಗಿ ಬಾತ್‌ರೂಮ್ ರೂಪಿಸುವಾಗ ಮೊದಲೇ ಸಾಕಷ್ಟು ಯೋಚಿಸಬೇಕು.
ಮಾದರಿ
ವಿನ್ಯಾಸವನ್ನು ರೂಪಿಸುವ ಮೊದಲು ಬಾತ್‌ರೂಮ್‌ಗೆ ನೀವೆಷ್ಟು ಜಾಗವನ್ನು ಮೀಸಲಿಟ್ಟಿದ್ದಿರಿ ಎಂಬುದನ್ನು ತಿಳಿಯಿರಿ. ನಂತರ ಬಾತ್‌ರೂಮ್ ಆಧುನಿಕವಾಗಿರಬೇಕೋ, ಸದ್ಯ ಇರುವ ಟ್ರೆಂಡ್‌ಗೆ ತಕ್ಕಹಾಗೆ ಇರಬೇಕೋ, ಸಂಪ್ರದಾಯಿಕವಾಗಿ ಇರಬೇಕೋ, ವಿದೇಶಿ ಶೈಲಿಗಳಾದ ಆಸ್ಟ್ರೇಲಿಯನ್, ಜಪನೀಸ್, ಸ್ಪಾನಿಷ್, ಯೂರೋಪಿಯನ್ ದೇಶಗಳ ಶೈಲಿಯಲ್ಲಿರಬೇಕೋ, ಬರೀ ಕಪ್ಪು ಬಿಳುಪಾಗಿದ್ದರೆ ಸಾಕೆ, ಲಕ್ಷುರಿಯಸ್ ಆಗಿರಬೇಕೆ, ಸಂಪೂರ್ಣ ಎಲೆಕ್ಟ್ರಾನಿಕ್ ಆಗಿರಬೇಕೋ, ಟೈಲ್ಸ್‌ಗಳನ್ನೇ ಅಳವಡಿಸಬೇಕೆ... ಹೀಗೆ ಯಾವ ಬಗೆ ಬಾತ್‌ರೂಮ್ ಇದ್ದರೆ ಚೆನ್ನ ಎಂಬುದನ್ನು ಮೊದಲೇ ತಿಳಿದುಕೊಳ್ಳಿ.
ವಿನ್ಯಾಸ
ನಾನಾ ಬಗೆಯ ಬಾತ್‌ರೂಮ್ ವಿನ್ಯಾಸದ ಆಯ್ಕೆಗಳು ನಿಮ್ಮ ಕೈಯಲ್ಲಿವೆ. ಆದರೆ, ಆಯ್ಕೆ ಮಾಡುವ ಮುನ್ನ ಇದು ಯಾರಿಗೆ ಎಂಬ ಪ್ರಶ್ನೆ ಹಾಕಿಕೊಳ್ಳಿ. ವೈಯಕ್ತಿಕ ಬಳಕೆಗೆ, ಅತಿಥಿಗಳಿಗೆ ಅಥವಾ ಕುಟುಂಬ ಸದಸ್ಯರು ಬಳಸಲೆಂದೇ ವಿವಿಧ ವಿನ್ಯಾಸಗಳು ಲಭ್ಯವಿವೆ. ಮಾಸ್ಟರ್ ಬಾತ್‌ರೂಮ್, ಸಣ್ಣ ಪ್ರಮಾಣದ (ಬೆಡ್‌ರೂಮ್‌ಗಾಗಿ) ಬಾತ್‌ರೂಮ್, ಕಡಿಮೆ ಅಗಲದ ಬಾತ್‌ರೂಮ್...ಹೀಗೆ. ನಿಮಗೆ ಅಗತ್ಯವಾಗಿರುವುದನ್ನು ಆಯ್ಕೆ ಮಾಡಿಕೊಳ್ಳಿ.
ಬಾತ್‌ರೂಮ್ ಕ್ಯಾಬಿನೆಟ್
ಬಾತ್‌ರೂಮ್ ವಿಸ್ತೀರ್ಣದ ಆಧಾರದ ಮೇಲೆ ಅಲ್ಲಿ ಏನಿರಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಬಾತ್‌ರೂಮ್‌ನಲ್ಲಿ ಬಟ್ಟೆಗಳನ್ನು ಇಡಲು ಕ್ಯಾಬಿನ್‌ಗಳು, ಬಕೆಟ್‌ಗಳನ್ನು ಇಡಲು ಜಾಗ ಇರಲೇಬೇಕು. ಮುಖ್ಯವಾಗಿ ಬಟ್ಟೆಗಳನ್ನು ಇಡಲೇ ಹೆಚ್ಚು ಜಾಗ ಬೇಕಾಗುತ್ತದೆ. ಹೀಗಾಗಿ ಕನ್ನಡಿ ಕೆಳಗೆ ಬೇಸಿನ್, ಅದರ ಕೆಳಗೆ ಮೂರ್ನಾಲ್ಕು ಡ್ರೈಯರ್‌ಗಳಿದ್ದರೆ ಚೆನ್ನ. ಅಲ್ಲಿ ವಾಷ್ ಮಾಡುವ ಮತ್ತು ವಾಷ್ ಮಾಡಿರುವ ಬಟ್ಟೆಗಳನ್ನೂ ಇಡಬಹುದು. ಹೇರ್ ಡ್ರೈ ಕ್ಲೀನರ್ ಸೇರಿದಂತೆ ಇತರೆ ವಸ್ತುಗಳನ್ನು ಇಡಲೂ ಜಾಗ ಮಾಡಿಕೊಳ್ಳಬಹುದು.
ವಿಶಿಷ್ಟತೆ
ತುಂಬಾ ಸಿಂಪಲ್ ಬಾತ್‌ರೂಮ್‌ಗಳೇ ಹೆಚ್ಚು ಗಮನ ಸೆಳೆಯುತ್ತವೆ. ಆದರೆ, ಇರುವ ಜಾಗದಲ್ಲಿಯೇ ಅದು ಎಲ್ಲರ ಮನ ಗೆಲ್ಲುವಂತಿದ್ದರೆ ಸಾಕು. ಇಂತಹ ಬಾತ್‌ರೂಮ್‌ಗಳಲ್ಲಿ ಬಟ್ಟೆಗಳನ್ನು ಶೇಖರಿಸಿಡಲು ಬಿದಿರಿನಿಂದ ನೇಯ್ದ ಬುಟ್ಟಿಗಳನ್ನು ಇಟ್ಟರೆ ಮತ್ತಷ್ಟು ಆಕರ್ಷಕವಾಗುತ್ತದೆ. ಜೊತೆಗೆ ತುಂಬಾ ಸಿಂಪಲ್ ಎನ್ನುವಂತೆ ಸಣ್ಣದಾದ ಕನ್ನಡಿ, ಅದರ ಕೆಳಗೆ ಸಣ್ಣದೊಂದು ಡ್ರೈಯರ್ ಇಟ್ಟರೆ ಮತ್ತಷ್ಟು ಸುಂದರ. ಟವೆಲ್ ಹಾಕಲು, ಮಡಿಯ ಬಟ್ಟೆಗಳನ್ನು ನೇತು ಹಾಕಲು ಬಾಗಿಲ ಹಿಂದೆ ವಿವಿಧ ಬಣ್ಣದ, ಆಕಾರದ ಕ್ಲಿಪ್‌ಗಳನ್ನು ಅಂಟಿಸಿದ್ದರೆ, ಬಾತ್‌ರೂಮ್ ಉಪಯೋಗಕ್ಕೆ ಹೇಳಿ ಮಾಡಿಸಿದಂತಿರುತ್ತದೆ.
- ಬ್ರಹ್ಮಾನಂದ ಎನ್. ಹಡಗಲಿ