ಮಹಿಳೆ-ಮನೆ-ಬದುಕು

ಪರಿವರ್ತನೆ

ಶಿಲ್ಪಾ ತುಂಬಾನೇ ತುಂಟ ಹುಡುಗಿ. ತರಗತಿಯಲ್ಲಿ ಓದು, ಆಟ, ಸಾಂಸ್ಕೃತಿಕ ಚಟುವಟಿಕೆ ಹೀಗೆ ಎಲ್ಲದರಲ್ಲೂ ಮುಂದು. ತನ್ನ ವಯಸ್ಸಿನ ಮಕ್ಕಳು ಯೋಚನೆ ಮಾಡುವುದಕ್ಕಿಂತ ಒಂದು ಹೆಜ್ಜೆ ಮುಂದೆ ನಿಂತು ಆಲೋಚಿಸುತ್ತಿದ್ದಳು. ಇದು ಹೆತ್ತ ಅಪ್ಪ ಅಮ್ಮನಿಗಂತೂ ಹಿಗ್ಗು ತರುವಂತಹ ವಿಷಯ... ಹೀಗಾಗಿ ಕೇಳಿದ್ದೆಲ್ಲವೂ ತಕ್ಷಣವೇ ಅವಳ ಮುಂದೆ ಇರುತ್ತಿತ್ತು. ಬಹುಶಃ ಮುಂದೊಂದು ದಿನ ಇಂತಹ ಪ್ರೀತಿಯೇ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತೆ ಅನ್ನುವ ಕಲ್ಪನೆಯೂ ಅವರ ಮುಂದಿರಲಿಲ್ಲ...

ಪ್ರೀತಿಸಿದ ಹುಡುಗನನ್ನ ಕರೆದುಕೊಂಡು ಬಂದು ಇವನೇ ನನ್ನ ಗಂಡ ಎಂದಾಗಲೂ ಅಪ್ಪ ಅಮ್ಮ ಬೇಸರಿಸಿಕೊಳ್ಳಲಿಲ್ಲ. ನಾಲ್ಕು ಜನರನ್ನ ಕರೆದು ಪ್ರೀತಿಯಿಂದಲೇ ರಿಸೆಪ್ಶನ್ ಮಾಡಿ ಮುಗಿಸಿದ್ದರು. ಯಾರೂ ಮಾಡದ ತಪ್ಪನ್ನು ನನ್ನ ಮಗಳು ಮಾಡಿಲ್ಲ ಎಂದು ಸಂಬಂಧಿಗಳ ಕೊಂಕು ಮಾತಿಗೂ ಬ್ರೇಕ್ ಹಾಕಿದ್ದರು. ಆದರೆ, ಮದುವೆಯಾದ ವರ್ಷಕ್ಕೆ 'ಅಮ್ಮ ನನ್ನ ಗಂಡ ಯಾಕೋ ನನಗೆ ಹೊಂದಿಕೊಳ್ಳುತ್ತಿಲ್ಲ, ಡಿವೋರ್ಸ್‌ಗೆ ಅಪ್ಲೈ ಮಾಡಿದ್ದೀನಿ' ಅಂದಾಗ ಹೆತ್ತವರು ನಿಜಕ್ಕೂ ದಿಗ್ಭ್ರಮೆಗೊಳಗಾಗಿದ್ದರು. ಅದಾಗಿ ಇನ್ನೂ ಆರು ತಿಂಗಳು ಕೂಡ ಕಳೆದಿರಲಿಲ್ಲ. ಹೊಸ ಅತಿಥಿಯೊಂದಿಗೆ ಬಂದ ಶಿಲ್ಪಾ, 'ಇವರು ಲೋಹಿತ್ ನನ್ನ ಕೊಲೀಗ್, ಡಿವೋರ್ಸ್ ಸಿಕ್ಕಿದ ಮೇಲೆ ಮದುವೆಯಾಗೋಣ ಅಂತಿದ್ದೀವಿ, ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀವಿ' ಎಂದಾಗ ತಾವು  ಹೆತ್ತ ಮಗಳು ಇವಳೇನಾ ಅನ್ನಿಸಿತು.

ನನಗೆ ಚೆನ್ನಾಗಿ ನೆನಪಿದೆ. ನನ್ನ ಅಣ್ಣ ಐದನೇ ಕ್ಲಾಸ್‌ನಲ್ಲಿ ಓದುತ್ತಿದ್ದಾಗ ಇಂಗ್ಲಿಷ್ ಪುಸ್ತಕದ ಮಧ್ಯದ ಹಾಳೆ ಹರಿದು ಕಳೆದೋಗಿತ್ತು. ಅವನು ಹೊಸ ಪುಸ್ತಕ ಬೇಕು ಎನ್ನುವ ಹಠಕ್ಕೆ ಬಿದ್ದಿದ್ದ. ಆದರೆ, ಅಪ್ಪ ಕಡ್ಡಿ ತುಂಡು ಮಾಡಿದಂತೆ ಇಲ್ಲ ಅಂದಿದ್ದರು. ಹರಿದಿರೋ ಪಾಠವನ್ನ ಮತ್ತೊಬ್ಬರ ಬಳಿ ಪಡೆದು ಬರೆದುಕೊಳ್ಳುವಂತೆ ಸೂಚಿಸಿದ್ದರು. ನನ್ನದು ಪ್ರತಿ ಸಲವೂ ಹೊಸ ಪೆನ್ನು ಬೇಕು ಅನ್ನುವ ಮೊಂಡತನಕ್ಕೂ ಪೆನ್ನಿನ ಕಡ್ಡಿ ತೆಗೆದುಕೊಳ್ಳುವಂತೆ ಸೂಚಿಸುತ್ತಿದ್ದರು. ಹೊಸ ಸೈಕಲ್ ಕೊಡಿಸುವುದಕ್ಕೂ ಮುಂಚೆ ಮನೆಯಲ್ಲಿದ್ದ ಹಳೆ ಸೈಕಲ್ಲನ್ನೇ ಬಳಸಲು ಕಲಿಸಿದ್ದರು. ಮೊಬೈಲ್ ನನ್ನ ಕೈ ಸೇರಿದಾಗ ನಾನೇ ದುಡಿಯುತ್ತಿದ್ದೆ.

ಹೀಗೆ ಸಣ್ಣ ವಯಸ್ಸಿನಿಂದಲೇ ಪ್ರತಿ ವಿಷಯ, ವಸ್ತುವಿಗೂ ಹೊಸದನ್ನು ಹುಡುಕುವ ನಾವು ಹಳೆಯದನ್ನ ಸರಿಪಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಮೊಬೈಲ್ ಕೆಟ್ಟರೆ ರಿಪೇರಿ ಮಾಡಿಸಿಕೊಂಡು ಬಳಸೋಣ ಅನ್ನುವದಕ್ಕಿಂತ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಹೊಸದು ಯಾವುದು ಬಂದಿದೆ ಅಂತಲೇ ಯೋಚಿಸುತ್ತೇವೆ. ಕೆಲವೊಮ್ಮೆ ಸರಿಯಿದ್ದರೂ ಅಗತ್ಯವಿರುವ ಯಾವುದೋ ಒಂದು ಇದರಲ್ಲಿ ಇಲ್ಲ ಅನ್ನುವ ಕಾರಣ ಕೊಟ್ಟು ಹೊಸದಕ್ಕೆ ಪೀಠಿಕೆ ಹಾಕುವುದು ಸಾಮಾನ್ಯ. ಬರಿಯ ವಸ್ತುವಿನ ವಿಷಯ ಅಷ್ಟೇ ಅಲ್ಲ ಅದನ್ನೇ ಜೀವನಕ್ಕೂ ಅಳವಡಿಸಿಕೊಳ್ಳುವುದು ಎಷ್ಟು ಸರಿ?

ಜತೆಗೆ ನಾವು ಸ್ವತಂತ್ರರು ಎನ್ನುವ ಅಹಂ ಕೂಡ ಸೇರಿದೆ. ಇದೇ ಕೆಲವೊಮ್ಮೆ ಸಂಬಂಧಗಳ ಒಡಕಿಗೆ ಮೆಟ್ಟಿಲಾಗಿಬಿಡುತ್ತದೆ. ನಾವೇ ಆಯ್ಕೆ ಮಾಡಿಕೊಂಡ ಸಂಗಾತಿಯಾಗಿದ್ದರೂ ಮದುವೆಯಾದ ಹೊಸದರಲ್ಲಿ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಆದರೆ, ಅದನ್ನ ಸರಿದೂಗಿಸಿಕೊಂಡು ಹೋಗುವುದು ನಮ್ಮದೇ ಹೊಣೆಯಾಗಿರುತ್ತೆ ಅನ್ನುವುದನ್ನು ಮರೆತು ಬಿಟ್ಟಿರುತ್ತೇವೆ.

ಚಿಕ್ಕವರಿಂದಲೂ ಗೆಲುವೊಂದನ್ನೆ ಕಲಿತು ಬಂದ ನಾವು ಯಾವುದರಲ್ಲೂ ಸೋಲಲಿಕ್ಕೆ ಸಿದ್ಧರಿರುವುದಿಲ್ಲ. ಇದು ಸಂಸಾರದ, ಬದುಕಿನ, ಬಿರುಕಿಗೆ ಕಾರಣವಾಗಿ ಬಿಡುತ್ತದೆ. ಶಿಲ್ಪಾಳಂತೆ ಬದಲಿ ಬದುಕಿನ ಆಯ್ಕೆ ಮಾಡಿಕೊಳ್ಳುತ್ತೆವೆಯೇ ಹೊರತು ಸೋತು ಬದುಕಲ್ಲಿ ಗೆಲ್ಲುವುದಿಲ್ಲ.

- ಮಂಜೇಶ್ ವಿಶ್ವನಾಥ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್