'ಪಕ್ಕದ್ಮನೆ ಗಿರಿಜಾಳಿಗೆ ಹೆಣ್ಣು ಮಗುವಂತೆ. ಮಗುವಿಗೆ ನೀರು ಹಾಕುವುದಕ್ಕೆ ಅವಳ ಸಂಬಂಧಿಕರು ಅಂತ ಯಾರೂ ಇಲ್ಲ. ಪಾಪ ಮೊದಲನೆ ಮಗುವಾಗಿದ್ರಿಂದ ಅನುಭವವೂ ಇಲ್ಲ. ಹೆಣ್ಣುಮಕ್ಕಳಿಗೆ ಹುಟ್ಟಿದಾಗಿನಿಂದ ಮೈಗೆಲ್ಲಾ ಎಣ್ಣೆ ಹಚ್ಚಿ, ಕೈ ಕಾಲುಗಳನ್ನೆಲ್ಲಾ ತಿದ್ದಿ ತೀಡಿ ಸ್ನಾನ ಮಾಡಿಸಿದ್ರೆ ಮಾತ್ರ ಅವು ಮುಂದೆ ರೂಪವಂತರಾಗೋದು' ಎಂದು ಹೆಂಗಳೆಯರು ಮಾತನಾಡ್ತಾ ಇದ್ರೆ, ಗಿರಿಜಂಗೆ ಒಳಗೊಳಗೇ ಭಯ ಶುರುವಾಗಿತ್ತು. ಏಕೆಂದರೆ, ಎಳೆ ಮಗುವಿಗೆ ಸ್ನಾನ ಮಾಡಿಸೋದಿರಲಿ, ಸರಿಯಾಗಿ ಎತ್ತಿಕೊಳ್ಳೋಕೇ ಭಯವಾಗ್ತಾ ಇತ್ತು.
ನಿಜ, ಎಳೆಯ ಮಕ್ಕಳಿಗೆ ಅಭ್ಯಂಗ ಮಾಡಿಸೋದು ಕಷ್ಟದ ಕೆಲಸವೇ. ಸರಿಯಾದ ವಿಧಾನ ಗೊತ್ತಿಲ್ಲದೆ ಮಾಡಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇಲ್ಲಿದೆ ಒಂದಷ್ಟು ಮಾಹಿತಿ.
ನಿತ್ಯ ಅಭ್ಯಂಗದ ಎಣ್ಣೆ
ಮಗು ಹುಟ್ಟಿ ಒಂದು ವಾರದವರೆಗೆ ಪ್ರತಿನಿತ್ಯ ಅಭ್ಯಂಗ ಮಾಡಿಸಬಾರದು. ನಂತರದ ದಿನಗಳಲ್ಲಿ ಮಗುವಿಗೆ ಬೆಳಗಿನ ಹೊತ್ತು ಅಂದರೆ ಸೂರ್ಯೋದಯದ ನಂತರ ಸಮ ಪ್ರಮಾಣದಲ್ಲಿ ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ ಮತ್ತು ಹರಳೆಣ್ಣೆಯನ್ನು ಮಿಶ್ರ ಮಾಡಿ, ಉಗುರು ಬೆಚ್ಚಗೆ ಮಾಡಿಕೊಂಡು ಹಚ್ಚಬೇಕು. ಈ ಎಣ್ಣೆಯನ್ನು ಮೊದಲೇ ರೆಡಿ ಮಾಡಿಟ್ಟುಕೊಂಡು ಪ್ರತಿದಿನ ಹಚ್ಚುವಷ್ಟನ್ನು ಮಾತ್ರ ಬಿಸಿಮಾಡಿಕೊಂಡರೆ ಸಾಕು.
ನಿಗದಿತ ಸಮಯ
ಪ್ರತಿದಿನ ಮಗುವಿಗೆ ನಿಗದಿತ ಸಮಯದಲ್ಲಿ ಅಭ್ಯಂಗ ಮಾಡಿಸುವ ರೂಢಿಯನ್ನಿಟ್ಟುಕೊಳ್ಳಬೇಕು. ಆಗ ಮಗುವಿನ ನಿದ್ರೆಯೂ ಸರಿಯಾಗಿ ಆಗುತ್ತದೆ. ಇಲ್ಲವಾದರೆ, ಮಗುವಿನ ನಿದ್ರೆಯ ವೇಳಾಪಟ್ಟಿ ಬದಲಾಗಿ, ಕೆಲಸ ಕಾರ್ಯಗಳಿಗೆ ತೊಂದರೆಯುಂಟಾಗುತ್ತದೆ.
ಆಹಾರ
ಮಗುವಿಗೆ ಅಭ್ಯಂಗ ಮಾಡಿಸುವ ಮೊದಲು ಹೊಟ್ಟೆಗೆ ಆಹಾರ ನೀಡಬಾರದು. ಏಕೆಂದರೆ, ಮೈಗೆಲ್ಲಾ ಎಣ್ಣೆ ಹಚ್ಚುವಾಗ ಮಗುವಿಗೆ ಸರಳ ವ್ಯಾಯಾಮ ಮಾಡಿಸುವುದರಿಂದ, ತಿಂದ ಆಹಾರವನ್ನು ವಾಂತಿ ಮಾಡುವ ಸಂಭವವಿರುತ್ತದೆ. ಆದುದರಿಂದ ಮಗುವಿಗೆ ಎಣ್ಣೆ ಹಚ್ಚಿದ ನಂತರ ಹಾಲುಣಿಸಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿಸಬಹುದು.
ಜಳಕದ ಪುಳಕ
ಎಳೆಯ ಕಂದಮ್ಮಗಳನ್ನು ಎತ್ತಿಕೊಳ್ಳುವುದೇ ಕಷ್ಟದ ಕೆಲಸ. ಅದರಲ್ಲೂ ಎಣ್ಣೆ ಹಚ್ಚಿದ ಮೇಲೆ ಇನ್ನಷ್ಟು ಕಷ್ಟ. ಆದುದರಿಂದ, ಮಗುವನ್ನು ಸ್ನಾನ ಮಾಡಿಸುವ ಮೊದಲು, ನೀರನ್ನು ಬಕೆಟ್‌ನಲ್ಲಿ ತುಂಬಿಸಿಟ್ಟುಕೊಳ್ಳಬೇಕು ಹಾಗೂ ಸ್ನಾನಕ್ಕೆ ಬೇಕಾದಂತಹ ಪರಿಕರಗಳನ್ನೆಲ್ಲಾ ಮೊದಲೇ ಜೋಡಿಸಿಟ್ಟುಕೊಂಡು ನಂತರ ಸ್ನಾನಕ್ಕೆ ಮಗುವನ್ನು ರೆಡಿ ಮಾಡಬೇಕು. ಹೆಚ್ಚು ಬಿಸಿಯೂ ಅಲ್ಲದ ತೀರಾ ತಣ್ಣಗೂ ಅಲ್ಲದ ನೀರಿನಿಂದ ಮಗುವನ್ನು ಸ್ನಾನ ಮಾಡಿಸಬೇಕು. ಜಾಸ್ತಿ ಸಮಯ ತೆಗೆದುಕೊಳ್ಳದೇ ಬಹಳ ಬೇಗ ಸ್ನಾನ ಮಾಡಿಸುವುದರಿಂದ, ಮಗುವಿಗೆ ಶೀತ, ಥಂಡಿ ಕಾಡುವುದಿಲ್ಲ. ಸ್ನಾನದ ನಂತರ ಮಗುವಿನ ತಲೆಗೂದಲನ್ನು ಚೆನ್ನಾಗಿ ಒರೆಸಿ, ಸಾಂಬ್ರಾಣಿ ಹೊಗೆಯಿಂದ ಆರಿಸಬೇಕು.
ಆನಂತರ, ಮಗುವಿನ ಕೈಕಾಲುಗಳನ್ನು ನೇರವಾಗಿ ಮಾಡಿ, ಕಾಟನ್ ಬಟ್ಟೆಯಿಂದ ಸುತ್ತಿ, ಮಲಗಿಸಿದರೆ, ಕನಿಷ್ಠ 4 ರಿಂದ 5 ಗಂಟೆಗಳ ಕಾಲ ಮಗು ಸುಖವಾಗಿ ನಿದ್ರಿಸುತ್ತದೆ.ಟಿ
ಎಣ್ಣೆ ಹಚ್ಚುವ ವಿಧಾನ
ಮಗುವನ್ನು ಕಾಲಿನ ಮೇಲೆ ಬೋರಲು ಮಲಗಿಸಿಕೊಂಡು, ಮೊದಲು ಬೆನ್ನಿನ ಭಾಗಕ್ಕೆ ಎಣ್ಣೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು. ನಂತರ ತಲೆಯ ಹಿಂಬದಿಯನ್ನು ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ಮಗು ಚೆನ್ನಾಗಿ ನಿದ್ರಿಸುವುದಲ್ಲದೆ, ಮಗುವಿನ ತಲೆ ಹಿಂಬದಿಯು ಚಪ್ಪಟೆಯಾಗಿ ನೋಡಲು ಸುಂದರವಾಗಿ ಕಾಣಿಸುತ್ತದೆ. ಆನಂತರ, ಮಗುವನ್ನು ಮೇಲ್ಮುಖವಾಗಿ ಮಲಗಿಸಿಕೊಂಡು, ಎದೆಯನ್ನು ಎರಡೂ ಕೈಗಳಿಂದ ನಯವಾಗಿ ಉಜ್ಜಬೇಕು. ಕೈ, ಕಾಲು, ಕಿವಿ, ಮೂಗು, ಗಲ್ಲ, ಹೀಗೆ ಎಲ್ಲಾ ಭಾಗವನ್ನೂ ಎಣ್ಣೆಯಿಂದ ಚೆನ್ನಾಗಿ ಮಸಾಜ್ ಮಾಡಬೇಕು. ಮಗುವಿನ ಅಂಗಾಂಗಗಳು ಮೃದುವಾಗಿರುವುದರಿಂದ, ಮಸಾಜಿನಿಂದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಬಹುದು. ಮಗುವಿಗೆ ಚೆನ್ನಾಗಿ ಎಣ್ಣೆ ಹಚ್ಚಿದ ನಂತರ ಒಂದು ಚಾಪೆಯ ಮೇಲೆ ತೆಳ್ಳನೆಯ ಬಟ್ಟೆ ಹಾಕಿ, ಅದರ ಮೇಲೆ ಮಗುವನ್ನು ಮಲಗಿಸಬೇಕು. ಬೆಳಗಿನ ಸೂರ್ಯನ ಕಿರಣಗಳು ಮೈಮೇಲೆ ಬೀಳುವಂತೆ ಮಲಗಿಸಿದರೆ ಉತ್ತಮ. ಒಂದು ತೆಳು ಬಟ್ಟೆಯನ್ನು ಮಗುವಿನ ಮೈಮೇಲೆ ಹಾಕಿದರೆ ಸಾಕಾಗುತ್ತದೆ. ಮಗು ಚೆನ್ನಾಗಿ ನಿದ್ರಿಸುತ್ತದೆ. ಆನಂತರ ಸ್ನಾನ ಮಾಡಿಸಿದರೆ, ಮಗು ಪುನಃ ನಿದ್ರೆಗೆ ಜಾರುತ್ತದೆ.
ಸುತ್ತೌಷಧಿ
ಮಗುವಿಗೆ ಸ್ನಾನ ಮಾಡಿಸಿಯಾದ ಮೇಲೆ, ಒಂದಷ್ಟು ಔಷಧವನ್ನು ಮನೆಯಲ್ಲಿ ಹಿರಿಯರಿದ್ದರೆ ನೀಡುತ್ತಾರೆ. ಬಜೆ, ಜ್ಯೇಷ್ಠಮಧು, ಜೇನುತುಪ್ಪ, ಮೆಣಸಿನ ಕಾಳನ್ನು ಬಳಸಿ ತಯಾರಿಸಿದ ಈ ಮನೆಮದ್ದು ಕೊಡುವುದರಿಂದ ಮಗು ಚೆನ್ನಾಗಿ ನಿದ್ರಿಸುವುದಲ್ಲದೆ, ಹೊಟ್ಟೆ ಉಬ್ಬರ, ಹೊಟ್ಟೆನೋವು ನಿವಾರಣೆಯಾಗುತ್ತದೆ.
ಸ್ನಾನಕ್ಕೆ ಸೋಪು ಬಳಕೆ ಬೇಡ
ಎಳೆಯ ಮಗುವಿನ ಚರ್ಮ ಬಹಳ ಸೂಕ್ಷ್ಮವಾಗಿರುವುದರಿಂದ, ಸ್ನಾನಕ್ಕೆ ಸೋಪನ್ನು ಬಳಸಬಾರದು. ಬದಲಾಗಿ ಕಡಲೆಹಿಟ್ಟನ್ನು ಬಳಸಿದರೆ, ಮೈಯಲ್ಲಿನ ಎಣ್ಣೆಯ ಜಿಡ್ಡು ಹೋಗುವುದರೊಂದಿಗೆ, ದೇಹಕ್ಕೆ ಹಾನಿಯಾಗದು. ಸ್ನಾನ ಮಾಡಿಸುವಾಗ ಮಗುವಿನ ಕಿವಿಯೊಳಗೆ ನೀರು ಹೋಗದಂತೆ ಎಚ್ಚರಿಕೆ ವಹಿಸಬೇಕು.
- ಭಾಗ್ಯ ನಂಜುಂಡಸ್ವಾಮಿ